ಸಮಾಜದಲ್ಲಿ ತಪ್ಪುಗಳಾದಾಗ ಪ್ರಶ್ನಿಸಿ, ಧ್ವನಿ ಎತ್ತಿ ಯುವ ವಿದ್ಯಾರ್ಥಿಗಳಿಗೆ ಟೀಸ್ಟಾ ಸೆಟಲ್ವಾದ್ ಕರೆ
ಮಂಗಳೂರು: ಸಮಾಜದಲ್ಲಿ ತಪ್ಪುಗಳನ್ನು ಕಂಡಾಗ ಅದನ್ನು ಪ್ರಶ್ನಿಸುವ, ಅದರ ವಿರುದ್ಧ ಧ್ವನಿ ಎತ್ತುವ ಗುಣವನ್ನು ಯುವಕರು ಬೆಳೆಸಿಕೊಂಡಾಗ ಮಾನವ ಹಕ್ಕುಗಳ ರಕ್ಷಣೆ ಸಾಧ್ಯವಾಗಲಿದೆ ಎಂದು ಮುಂಬೈನ ಹಿರಿಯ ಮಾನವ ಹಕ್ಕು ಹೋರಾಟಗಾರ್ತಿ ಟೀಸ್ಟಾ ಸೆಟಲ್ವಾದ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ನಗರದ ಮಂಗಳೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವ್ಯವಹಾರ ನಿರ್ವಹಣೆ ಕಾಲೇಜಿನ ಸಂಭಾಗಣದಲ್ಲಿ ಎಸ್ ಡಿ ಎಂ ಕಾಲೇಜಿನ ಸಹಯೋಗದೊಂದಿಗೆ ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್ ಮತ್ತು ಕ್ಯಾಂಪಸ್ ಕ್ಯಾರಿಯರ್ ಅಕಾಡಮಿ ಸಂಯೋಜನೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೋರ್ವಳ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದರು.
ಪ್ರಶ್ನಿಸುವ ಮೂಲಕ ಸಮಾಜದಲ್ಲಿ ಬದಲಾವಣೆಗೆ ಹೋರಾಟ ರೂಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು, ಸಂವಿಧಾನ ನಮಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಅಧಿಕಾರ ನೀಡಿದ್ದರೂ ಅದನ್ನು ಹತ್ತಿಕ್ಕಲಾಗುತ್ತಿರುವುದು ಬೇಸರದ ಸಂಗತಿ. ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲನ ಆತ್ಮಹತ್ಯೆಗೆ ಕಾರಣವಾದ ಹಿನ್ನೆಲೆ, ಸನ್ನಿವೇಶ ನಿಜಕ್ಕೂ ಶಿಕ್ಷಣ ಕ್ಷೇತ್ರದಲ್ಲಿರುವ ಅಸಮಾನತೆಯನ್ನು ಬಿಂಬಿಸಿದೆ. ಈ ಅಸಹಿಷ್ಣುತೆಯನ್ನು ಖಂಡಿತಾ ಸಹಿಸಲಾಗದು. ಈ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನಿಸುವಂತಾಗಬೇಕು. ಆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಪ್ರಬಲವಾದ ಬದಲಾವಣೆಗೆ ಯುವ ಜನಾಂಗ ಸರಕಾರದ ಕಣ್ಣು ತೆರೆಸುವ ಕೆಲಸ ಮಾಡಬೇಕು ಎಂದವರು ಹೇಳಿದರು.
ಇಂಗ್ಲೆಂಡ್ ಮೊದಲಾದ ಬಂಡವಾಳಶಾಹಿ ರಾಷ್ಟ್ರಗಳಲ್ಲಿಯೂ ಕೂಡಾ ಸಾರ್ವಜನಿಕ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ. ಆದರೆ ಭಾರತದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಒತ್ತು ನೀಡುವ ಮೂಲಕ ಬಡ, ನಿಮ್ನ ವರ್ಗದ ಶಿಕ್ಷಣವನ್ನು ಮೊಟಕುಗೊಳಿಸಲಾಗುತ್ತಿದೆ ಎಂದವರು ಬೇಸರಿಸಿದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಿವಿಧ ಸಂಸ್ಕೃತಿಯನ್ನು ಅನುಸರಿಸುವ ಜನರು ತಮ್ಮ ಆಯ್ಕೆಯ ಆಹಾರವನ್ನು ತಮ್ಮದಾಗಿಸಿಕೊಳ್ಳುವ ಸಂವಿಧಾನ ಬದ್ಧ ಹಕ್ಕನ್ನು ಹೊಂದಿದ್ದಾರೆ. ಹಾಗಾಗಿ ಮಾಂಸ ತಿನ್ನುವುದು ಅಥವಾ ತಿನ್ನದಿರುವುದು ವ್ಯಕ್ತಿಯ ಆಯ್ಕೆ ಎಂದು ಮತ್ತೋರ್ವ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದರು.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಗಲ್ಲಿಗೇರಿಸುವುದಕ್ಕಿಂತಲೂ ಜೀವಾವಧಿ ಶಿಕ್ಷೆಯಾಗಬೇಕೆಂಬುದು ನನ್ನ ಅನಿಸಿಕೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಶ್ನೋತ್ತರಕ್ಕೆ ಮೊದಲು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ತೀಸ್ತಾ ಸೆಟಲ್ವಾದ್, ಮಂಗಳೂರಿನಲ್ಲಿ ನಡೆಯುತ್ತಿರುವ ಅನೈತಿಕ ಗೂಂಡಾಗಿರಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಯುವಕರ ನಡುವೆ ಅಭದ್ರತೆಯನ್ನು ಸೃಷ್ಟಿಸುವ ಈ ಪ್ರಕ್ರಿಯೆ ಮಾನವ ಹಕ್ಕುಗಳ ಉಲ್ಲಂಘನೆಯ ಒಂದು ಪ್ರಕಾರ ಎಂದವರು ವಿಶ್ಲೇಷಿಸಿದರು.
ಚುನಾವಣೆ ಕೂಡಾ ಹಣ ಮತ್ತು ಕಾರ್ಪೊರೇಟ್ ಶಕ್ತಿಗಳ ನಿಯಂತ್ರದಲ್ಲಿದೆ. ನಮ್ಮ ಶಾಲಾ ಕಾಲೇಜುಗಳ ಪಠ್ಯಗಳಲ್ಲಿ ಸಮಾಜದ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಕ್ರಾಂತಿಕಾರಕ ಇತಿಹಾಸಕಾರರ ಬಗ್ಗೆ ಪಠ್ಯಗಳಿಲ್ಲ. ಬ್ರಿಟಿಷರಿಂದ ನಮಗೆ ಸ್ವಾತಂತ್ರ ದೊರಕಿ ಸುಮಾರು 70 ವರ್ಷಗಳ ಬಳಿಕವೂ ನಾವಿನ್ನೂ ಬ್ರಿಟಿಷರ ಕಾಲದ ವಸಾಹತು ಶಾಹಿ ಕಾನೂನು ವ್ಯವಸ್ಥೆಯಲ್ಲೇ ಇದ್ದೇವೆ. ನಮ್ಮ ಸಮಾಜದಲ್ಲಿ ಇನ್ನೂ ಹೆಣ್ಣು ಗಂಡು ಮಕ್ಕಳ ನಡುವಿನ ಅಸಮಾನತೆ ದೂರವಾಗಿಲ್ಲ. ದೇಶದ ಶೇ. 35ರಷ್ಟು ಜನ ಇಂದಿಗೂ ಬಡತನ, ಹಸಿವಿನಿಂದ ಬಳಲುತ್ತಿದ್ದಾರೆ. ದೇಶದ ಶೇ. 40ರಷ್ಟು ಕುಟುಂಬಗಳು ಮಾಸಿಕ 3000 ರೂ. ವೇತನದಲ್ಲಿ ಐದು ಮಂದಿಯ ಜೀವನವನ್ನು ಸಾಗಿಸುವ ಪರಿಸ್ಥಿತಿ ಇದೆ. ಆಹಾರದಲ್ಲಿಯೂ ಕಲಬೆರಕೆ. ಇಂತಹ ಹಲವಾರು ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯಿಂದಾಗಿ ಮಾನವ ಘನತೆಗೆ ಧಕ್ಕೆಯಾಗುತ್ತಿದೆ. ಈ ಬಗ್ಗೆ ಯುವಕರು ಧ್ವನಿ ಎತ್ತಬೇಕು ಎಂದು ಅವರು ಹೇಳಿದರು.
ಅವರು ಮಾತನಾಡುತ್ತಾ ಸಾವಿತ್ರಿ ಭಾಯಿ ಫುಲೆ ಬಗ್ಗೆ ಎಷ್ಟು ಮಂದಿಗೆ ಗೊತ್ತು ಕೈಯೆತ್ತಿ ಎಂದು ಹೇಳಿದಾಗ ಸಭೆಯಲ್ಲಿ ಯಾವ ವಿದ್ಯಾರ್ಥಿಯೂ ಪ್ರತಿಕ್ರಿಯಿಸಲಿಲ್ಲ. ಮಾತು ಮುಂದುವರಿಸಿದ ಅವರು, ಕೇವಲ ವ್ಯವಹಾರ, ಉದ್ಯೋಗ ನೀಡುವ ಶಿಕ್ಷಣದಿಂದ ಏನನ್ನೂ ಸಾಧಿಸಲು ಸಾಧ್ಯವಾಗದು. ಮಾನವ ಹಕ್ಕುಗಳ ರಕ್ಷಣೆಯಾಗಬೇಕಾದರೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯಾಗಬೇಕು.
ಸಮಾಜದಲ್ಲಿ ಕ್ರಾಂತಿ ಮಾಡಿದ, ಇತಿಹಾಸದ ಹಿನ್ನೆಲೆ, ಮುನ್ನಲೆಗಳನ್ನು ತಿಳಿಸುವ ಪಠ್ಯವನ್ನು ಅಳವಡಿಸುವಂತಾಗಬೇಕು ಎಂದು ಅವರು ಹೇಳಿದರು.
ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಾನವ ಹಕ್ಕುಗಳ ಯಾವುದಾದರೊಂದು ವಿಷಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಜತೆಗೆ ಕನಿಷ್ಠ ಒಂದು ಒಳ್ಳೆಯ ಪುಸ್ತಕವನ್ನು ಓದಬೇಕೆಂದು ವಿದ್ಯಾರ್ಥಿಗಳಿಗೆ ಟೀಸ್ಟಾ ಸೆಟಲ್ವಾದ್ ಸಲಹೆ ನೀಡಿದರು.
ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲರಾದ ಅರುಣಾ ಪಿ. ಕಾಮತ್, ಉಪನ್ಯಾಸಕ ತಿಲಕ್‌ರಾಜ್ ವೇದಿಕೆಯವಲ್ಲಿ ಉಪಸ್ಥಿತರಿದ್ದರು.
ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್‌ನ ನಂದಗೋಪಾಲ್ ಸ್ವಾಗತಿಸಿ, ಅತಿಥಿ ಪರಿಚಯ ನೀಡಿದರು. ಸಂತೋಷ್ ವಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಾಧ್ಯಮಗಳು ರಾಜಕಾರಣಿ, ಕಾರ್ಪೊರೇಟ್‌ಗಳ ಹಿಡಿತದಲ್ಲಿ!
ಮಾಧ್ಯಮವನ್ನು ದೇಶದ ನಾಲ್ಕನೆ ಅಂಗ ಎಂದು ಕರೆಯಲಾಗುತ್ತದೆ. ಆದರೆ, ಅಸಮಾನತೆ, ಭ್ರೂಣಹತ್ಯೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಬಡತನ, ತಾರತಮ್ಯ ಮೊದಲಾದ ವಿಭಿನ್ನ ಕ್ಷೇತ್ರಗಳಲ್ಲಿ ಸಂಭವಿಸುವ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಕೆಲವೇ ಕೆಲವು ಮಾಧ್ಯಮಗಳಲ್ಲಿ ಮಾತ್ರವೇ ಪ್ರತಿಬಿಂಬಿತವಾಗುತ್ತವೆ.
ಇದಕ್ಕೆ ಕಾರಣ, ನಮ್ಮ ಸಂಸತ್ತಿನ 542 ಸದಸ್ಯರಲ್ಲಿ 383 ಮಂದಿ ಕೋಟ್ಯಾಧಿಪತಿಗಳು. ಇವರಲ್ಲಿ ಮೂರನೆ ಎರಡು ಭಾಗದಷ್ಟು ಮಂದಿ ಗಣಿಗಾರಿಕೆ ಮತ್ತು ಟೆಲಿವಿಷನ್ ಕ್ಷೇತ್ರದಲ್ಲಿರುವವರು. ಹಾಗಾಗಿ ಮಾನವ ಹಕ್ಕುಗಳ ಉಲ್ಲಂಘನೆಯ ಸಾವಿರಾರು ಪ್ರಕರಣಗಳು ಭಿತ್ತರಗೊಳ್ಳುವುದಾದರೂ ಹೇಗೆ ಎಂದವರು ಪ್ರಶ್ನಿಸಿದರು.