ಸುಳ್ಯ : ಕುಮ್ಕಿ ಹಕ್ಕಿನ ಕುರಿತು ಬಿಜೆಪಿಯಿಂದ ಗೊಂದಲ ಸೃಷ್ಠಿ-ಕಾಂಗ್ರೆಸ್ ಆರೋಪ
ಸುಳ್ಯ: ಕುಮ್ಕಿ ಜಮೀನಿನ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಬೀದಿ ಬದಿ ಹೋರಾಟ ಮಾಡುವ ಬದಲು ಸಂಸತ್ತಿನಲ್ಲಿ ಹೋರಾಟ ಮಾಡುವ ಅಗತ್ಯವಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕೂಡಾ ಕುಮ್ಕಿ ಹಕ್ಕಿನ ವಿಚಾರದಲ್ಲಿ ರೈತರ ಪರವಾಗಿದೆ. ಬಿಜೆಪಿ ಸರ್ಕಾರದ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಕುಮ್ಕಿ ಹಕ್ಕಿನ ಬಗ್ಗೆ ನಿರ್ಣಯ ಕೈಗೊಂಡಿದ್ದರೂ ಅದು ಕಾರ್ಯರೂಪಕ್ಕೆ ಬರಬೇಕಿದ್ದರೆ ಕಾನೂನಿನ ತಿದ್ದುಪಡಿ ಅಗತ್ಯವಿದೆ. ಕಾನೂನು ಹಾಗೂ ಅರಣ್ಯ ಇಲಾಖೆಯಡಿ ಇದು ಬರುವುದರಿಂದ ಕೇಂದ್ರ ಸಚಿವ ಸಂಪುಟದ ಅನುಮೋದನೆಯ ಅಗತ್ಯವಿದೆ. ಇದಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನೂ ಕೇಂದ್ರಕ್ಕೆ ಕಳುಹಿಸಿದ್ದು, ಅದು ಅಲ್ಲಿ ನೆನೆಗುದಿಗೆ ಬಿದ್ದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೇರಿ ಇದನ್ನು ಮಾಡಬೇಕಿದ್ದು, ಸಂಸದರು ಸತ್ಯ ಸಂಗತಿ ತಿಳಿದು ಹೇಳಿಕೆಗಳನ್ನು ನೀಡಲಿ ಎಂದರು. ಈ ವಿಚಾರದಲ್ಲಿ ಅವರು ತನ್ನೊಂದಿಗೆ ಯಾವುದೇ ಮಾಧ್ಯಮದಲ್ಲಿ ನೇರ ಚರ್ಚೆಗೆ ಬರಲಿ ಎಂದೂ ಅವರು ಸವಾಲು ಹಾಕಿದರು. ರಬ್ಬರ್‌ಗೆ ಆಮದು ತೆರಿಗೆ ಏರಿಕೆ ಮಾಡದೆ ರಾಜ್ಯ ಸರ್ಕಾರ ಬೆಂಬಲ ನೀಡಬೇಕೆಂದು ಹೇಳುವ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ಸರ್ಕಾರ ಎಷ್ಟು ಬೆಂಬಲ ಬೆಲೆ ನೀಡಿದೆ ಎಂದು ಮೊದಲು ಪ್ರಕಟಿಸಲಿ ಎಂದರು. ಸುಳ್ಯ ಹೊರತು ಜಿಲ್ಲೆಯ ಎಲ್ಲೆಡೆ ವಿದ್ಯುತ್ ಸಮಸ್ಯೆ ಇಲ್ಲ. ಶಾಸಕರು ಇಲ್ಲಿ ಕೆಲಸ ಮಾಡುತ್ತಿಲ್ಲ. ಅವರು 110 ವಿದಯುತ್ ಲೈನ್ ಕಾಮಗಾರಿ ಮಾಡಿಸಲಿ, ಇಲ್ಲದಿದ್ದರೆ ರಾಜೀನಾಮೆ ನೀಡಲಿ, ನಾವು ಮಾಡಿಸುತ್ತೇವೆ ಎಂದವರು ಹೇಳಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ನಗರ ಸಮಿತಿಯ ಲಕ್ಷ್ಮಣ ಶೆಣೈ, ನಗರ ಪಂಚಾಯತ್ ಸದಸ್ಯ ಗೋಕುಲ್‌ದಾಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.