ಮಂಗಳೂರು : ಸ್ಮಾರ್ಟ್‌ಸಿಟಿ ಯೋಜನೆ: ಶ್ವೇತ ಪತ್ರ ಹೊರಡಿಸಲು ಐವನ್ ಆಗ್ರಹ
ಮಂಗಳೂರು, ಜ.29 : ಸ್ಮಾರ್ಟ್‌ಸಿಟಿ ಯೋಜನೆಗೆ ಮಂಗಳೂರು ಆಯ್ಕೆಯಾಗದಿರಲು ಕಾರಣಗಳು ತಿಳಿಯಬೇಕಿದ್ದು ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಶ್ವೇತ ಪತ್ರ ಮಂಡನೆ ಮಾಡಬೇಕೆಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ನಗರ ಸ್ಮಾರ್ಟ್‌ಸಿಟಿ ಯೋಜನೆಗೆ ಪ್ರಥಮ ಹಂತದಲ್ಲಿಯೆ ಆಯ್ಕೆಯಾಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಪ್ರಥಮ ಹಂತದಲ್ಲಿ ಮಂಗಳೂರು ಆಯ್ಕೆಯಾಗದಿರುವ ಬಗ್ಗೆ ನಿರಾಶೆಯಾಗಿದೆ. ಮಂಗಳೂರು ಸ್ಮಾರ್ಟ್‌ಸಿಟಿ ಆಯ್ಕೆಯಾಗದೆ ದಾವಣಗೆರೆ, ಬೆಳಗಾಂ ಆಯ್ಕೆಯಾಗಲು ಅಲ್ಲಿನ ಸಂಸದರ ರಾಜಕೀಯ ಒತ್ತಡ ಕಾರಣವಾಗಿದೆ . ಮಂಗಳೂರು ಸಂಸದರು ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರದೆ ಸ್ಮಾರ್ಟ್‌ಸಿಟಿ ಕೈತಪ್ಪಿದೆ ಎಂದು ಅವರು ಹೇಳಿದರು.
ಸ್ಮಾರ್ಟ್‌ಸಿಟಿ ಘೋಷಣೆ ರಾಜಕೀಯ ಒತ್ತಡದಿಂದ ಆಗಿದ್ದರೆ ಈ ಘೋಷಣೆಯನ್ನು ಪುನರ್‌ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮನಪಾ ಮೇಯರ್ ಜೆಸಿಂತಾ ವಿಜಯ್ ಆಲ್ಪ್ರೆಡ್ , ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ, ಸಚೇತಕ ಶಶಿಧರ್ ಹೆಗ್ಡೆ, ಮಾಜಿ ಮೇಯರ್ ಅಶ್ರಫ್ .ಕೆ ಉಪಸ್ಥಿತರಿದ್ದರು.