ಮಂಗಳೂರು : ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ

Update: 2016-01-29 16:35 GMT

- "ರೋಹಿತ್ ವೇಮುಲಾ ಸಾವು ಆತ್ಮಹತ್ಯೆಯಲ್ಲ, ಸಾಂವಿಧಾನಿಕವಾಗಿ ಸ್ಥಾಪಿತ ಸಂಸ್ಥೆಯಿಂದ ನಡೆದ ಕೊಲೆ" : ತೀಸ್ತಾ ಸೆಟಲ್ವಾದ್

-ಫಕೀರ್ ಮಹಮ್ಮದ್ ಕಟ್ಪಾಡಿ ಗೆ ಹಿರಿಯ ಮುಸ್ಲಿಮ್ ಸಾಹಿತಿ ಸನ್ಮಾನ;ಸನಾವುಲ್ಲಾ ನವಿಲೆಹಾಳ್‌ಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ

 ಮಂಗಳೂರು.ಜ.29:ಹೈದರಾಬಾದ್ ವಿಶ್ವ ವಿದ್ಯಾನಿಲಯದಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿರುವುದಲ್ಲ.ಅದೊಂದು ಸಾಂವಿಧಾನಿಕವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಾಪನೆಗೊಂಡ ಸಂಸ್ಥೆಯಿಂದ ನಡೆದ ಕೊಲೆಯಾಗಿದೆ ಎಂದು ದೇಶದ ಖ್ಯಾತ ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾದ್ ಆಕ್ರೋಶ ವ್ಯಕ್ತಪಡಿಸಿದರು.

    ಅವರು ಇಂದು ನಗರದ ಪುರಭವನದಲ್ಲಿ ಮುಸ್ಲಿಮ್ ಲೇಖಕರ ಸಂಘದ ವತಿಯಿಂದ ಹಮಿಮ್ಮಕೊಂಡ ಸಮಾರಂಭದಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವದ ಭವಿಷ್ಯ ಎಂಬ ವಿಷಯದ ಬಗ್ಗೆ ಪ್ರಧಾನ ಭಾಷಣ ಮಾಡಿದರು.
      ರೋಹಿತ್ ವೇಮುಲಾ ಸಾವಿಗೆ ಕಾರಣರಾದವರಿಗೆ ಈ ದೇಶದ ಸಂವಿಧಾನ,ಪ್ರಜಾತಂತ್ರದ ವೌಲ್ಯಗಳ ಬಗ್ಗೆ ಗೌರವ ಹೊಂದಿಲ್ಲ.ಡಾ.ಬಾಬಾ ಸಾಹೇಬರು ತಿಳಿಸಿದ ಪ್ರಜಾತಂತ್ರದ ವೌಲ್ಯಗಳಾದ ಸ್ವಾತಂತ್ರ,ಸಮಾನತೆಯನ್ನು ಎತ್ತಿಹಿಡಿದಿಲ್ಲ.ಗಾಂಧಿಯನ್ನು ಕೊಲೆ ಗೈದ ವಿಚಾಧಾರೆಯನ್ನು ಹೊಂದಿರುವ ಈ ವರ್ಗ ದೇಶವನ್ನು ಹಿಂದೂರಾಷ್ಟ್ರವನ್ನಾಗಿ ಮಾಡಲು ಹೊರಟಿದ್ದಾರೆ.ಪ್ರಜಾತಂತ್ರದ ವೌಲ್ಯಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ.ಹಿಂದು ರಾಷ್ಟ್ರದ ಮುಖ್ಯ ಪ್ರತಿಪಾದಕರಾದ ಆರ್‌ಎಸ್‌ಎಸ್‌ಗೆ ದೇಶದಲ್ಲಿ ಮುಖ್ಯ ಎದುರಾಳಿಗಳೆಂದು ಭಾವಿಸಿರುವುದು ಮುಸ್ಲಿಂ,ಕ್ರಿಶ್ಚಿಯನ್ ಹಾಗೂ ಕಮ್ಯೂನಿಸ್ಟರನ್ನು ಎಂದು ತೀಸ್ತಾ ತಿಳಿಸಿದರು.

ಹರ್ಯಾನ, ಗುಜರಾತ್‌ಗಳ ಪಠ್ಯದಲ್ಲಿ ಅವೈಜ್ಞಾನಿಕವಾದ ವಿಚಾರಗಳನ್ನು ಸೇರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಸಾವಿತ್ರಿ ಬಾಪುಲೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಿದಾಗ ವಿರೋಧಿಸಿದ ಶಕ್ತಿಗಳು ದೇಶದಲ್ಲಿ ಸಂವಿಧಾನಿಕ ವೌಲ್ಯಗಳು ನೆಲೆಗೊಳ್ಳಲು ಅಡ್ಡಿಪಡಿಸುತ್ತಿವೆ. ಧರ್ಮ ನಿರಪೇಕ್ಷ ರಾಷ್ಟ್ರದಲ್ಲಿ ಧರ್ಮದ ಹೆಸರಿನಲ್ಲಿ ಮನೆಯೊಳಗೆ ನುಗ್ಗಿ ಕೊಲೆ ನಡೆಯುತ್ತದೆ.ಸಮಾನತೆಯ ಹಕ್ಕು ನೀಡಿರುವ ದೇಶದಲ್ಲಿ ಅಸಹಿಷ್ಣತೆಯ ಕಾರಣಕ್ಕಾಗಿ ದಲಿತರ ,ಅಲ್ಪ ಸಂಖ್ಯಾತರ ಕೊಲೆ ನಡೆಯುತ್ತದೆ.ಈ ನಿಟ್ಟಿನಲ್ಲಿ ಸ್ವಾತಂತ್ರದ ಸಂದರ್ಭದಲ್ಲಿ ನಡೆದ ರೀತಿಯ ಚಳವಳಿ ಈದೇಶದ ಪ್ರಜಾಪ್ರಭುತ್ವದ,ಸಂವಿಧಾನದ ರಕ್ಷಣೆಗಾಗಿ ನಡೆಯಬೇಕಾದ ಕಾಲಸನ್ನಿಹಿತವಾಗಿದೆ.ಈ ಚಳವಳಿಯಲ್ಲಿ ದಲಿತರು ,ಅಲ್ಪ ಸಂಖ್ಯಾತರು,ಜನಸಾಮನ್ಯರು,ಯುವಜನರು ಸಂಘಟಿತರಾಗಬೇಕಾಗಿದೆ ಎಂದು ತೀಸ್ತಾ ಸೆಟಲ್ವಾದ್ ಕರೆ ನೀಡಿದರು.


 ಸಮಾರಂಭದಲ್ಲಿ ಮುಸ್ಲಿಮ್ ಲೇಖಕರ ಸಂಘದ ವತಿಯಿಂದ  ದಿವಂಗತ ಯು.ಟಿ.ಫರೀದ್ ಸ್ಮರಣಾರ್ಥ 2014ನೆ ಸಾಲಿನ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಯನ್ನು ಒಂಟಿ ಮರದ ಕೆಳಗೆ ಕೃತಿಯ ಲೇಖಕ ಸನಾವುಲ್ಲಾ ನವಿಲೇಹಾಳ್,ದಾವಣಗೆರೆಯವರಿಗೆ ನೀಡಲಾಯಿತು.ಇದೇ ಸಂದರ್ಭದಲ್ಲಿ ಖ್ಯಾತ ಸಾಹಿತಿ ಫಕೀರ್ ಮುಹಮ್ಮದ್ ಕಟ್ಪಾಡಿಯವರಿಗೆ 2015ನೆ ಸಾಲಿನ‘ಹಿರಿಯ ಮುಸ್ಲಿಮ್’ಸಾಹಿತಿ ಎಂದು ಗುರುತಿಸಿ ಸನ್ಮಾನಿಸಲಾಯಿತು.ಆರೋಗ್ಯ ಸಚಿವ ಯು.ಟಿ.ಖಾದರ್ ಪ್ರಶಸ್ತಿ ನೀಡಿ ಗೌರವಿಸಿ ಶುಭ ಹಾರೈಸಿದರು.


    ಬಹುಭಾಷಾ ಕವಿಗೋಷ್ಠಿಯಲ್ಲಿ ಮುಹಮ್ಮದ್ ಬಡ್ಡೂರು,ಪೇರೂರು ಜಾರು,ಜ್ಯೋತಿ ಚೇಳ್ಯಾರು,ಅಬ್ದುಸ್ಸಲಾಮ್ ಮದನಿ, ಅಬ್ದುಲ್‌ರಹ್‌ಮಾನ್ ಕುತ್ತೆತ್ತೂರು,ಆಯಿಶಾ ಯು.ಕೆ,ಶಂಶಾದ್ ಮುಕ್ರಿ ಮೊದಲಾದವರು ಕವನ ವಾಚಿಸಿದರು.ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮ್ಮರ್ ಯು.ಎಚ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ ಸ್ವಾಗತಿಸಿದರು.ಸದೀದ್ ಕಿರಾಆತ್ ಪಠಿಸಿದರು. ಬಿ.ಎ.ಮಹಮ್ಮದ್ ಅಲಿ ಕಾರ್ಯಕ್ರಮ ನಿರೂಪಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News