×
Ad

ಕಡಲ ನಗರಿಯಲ್ಲಿ ಮೊಳಗಿದ ಸಹಬಾಳ್ವೆಯ ಕಹಳೆ

Update: 2016-01-30 12:50 IST

ಮಂಗಳೂರು, ಜ. 30: ಸೌಹಾರ್ದ ಕರ್ನಾಟಕದ ಆಶಯದೊಂದಿಗೆ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಲಾದ ‘ಸಹಬಾಳ್ವೆಯ ಸಾಗರ’ದ ಮೂಲಕ ಕಡಲ ನಗರಿಯಲ್ಲಿ ಇಂದು ಸಹಬಾಳ್ವೆಯ ಕಹಳೆ ಮೊಳಗಿತು.


ಪುರಭವನದ ಎದುರಿನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾರ್ಲಾಪಣೆಯೊಂದಿಗೆ, ತುಳುನಾಡಿನ ಮೂಲನಿವಾಸಿಗಳಾದ ಕೊರಗ ಸಮುದಾಯದ ವಿಶಿಷ್ಟ ಕಲಾ ಪ್ರಕಾರವಾದ ಡೋಲು ಕುಣಿತದೊಂದಿಗೆ ಪುರಭವನದ ಒಳಗಡೆ ಕಾರ್ಯಕ್ರಮಗಳು ಚಾಲನೆ ಗೊಂಡವು.


ಆರಂಭದಲ್ಲಿ ಕುದ್ಮುಲ್ ರಂಗರಾವ್ ವೇದಿಕೆಯಲ್ಲಿ ಖ್ಯಾತ ರಂಗಕರ್ಮಿ ಮತ್ತು ಸಮಾವೇಶದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಸದಾನಂದ ಸುವರ್ಣರವರು ಕುಡ್ಲ ಕೊರಲ್ ಕಲಾ ತಂಡದ ಜತೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಶುಭ ಹಾರೈಸಿದರು.


ಈ ಸಂದರ್ಭ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿ, ಆಹಾರ, ಆಚಾರವಿಚಾರ, ಸಂಸ್ಕೃತಿ, ಉಡುಗೆ- ತೊಡುಗೆ, ಭಾಷೆ ಸೇರಿದಂತೆ ವೈವಿಧ್ಯತೆಯಿಂದ ಕೂಡಿದ ಭಾರತದಲ್ಲಿ ಎಲ್ಲರೂ ಹಿಂದೂ ಧ್ವಜದಡಿ ಸಂಘಟಿತರಾಗಬೇಕು. ಆಗದವರು ದೇಶ ಬಿಟ್ಟು ಹೋಗಿ ಎಂಬ ಮೂರ್ಖತನದ, ದುಷ್ಟತನದ ಮಾತಿಗೆ ಪ್ರತಿಯಾಗಿ ಸಹಬಾಳ್ವೆ ಯಾವ ರೀತಿ ಇದೆ ಎಂಬುದನ್ನು ತೋರಿಸುವಲ್ಲಿ ಇಂತಹ ಸಮಾವೇಶ ಸಕಾಲಿಕ ಎಂದು ಅಭಿಪ್ರಾಯಿಸಿದರು.


ಇದಾದ ಬಳಿಕ ಕುದ್ಮುಲ್ ರಂಗರಾವ್ ವೇದಿಕೆಯಲ್ಲಿ ದಾನಪ್ಪ ಸಿ. ನಿಲೋಗಲ್, ಅಂಬಣ್ಣ ಅರೋಲಿಕರ್, ಎಂ. ಗಂಗಾಧರ್, ಎಂ. ಆರ್.ಬೇರಿ, ಎನ್.ಬಿ. ಲಕ್ಷ್ಮೀ ರೆಡ್ಡಿಯವರ ಮಾನವ ಬಂಧುತ್ವ ಕಲಾತಂಡವು ಅಂಬೇಡ್ಕರ್ ಗೀತೆಯನ್ನು ಪ್ರಸ್ತುತಪಡಿಸಿತು. ಹುಸೇನ್ ಕಾಟಿಪಳ್ಳ ಬ್ಯಾರಿ ಭಾಷೆಯ ದೇಶಭಕ್ತಿ ಗೀತೆ ಹಾಡಿದರೆ, ಡಾ. ಕೆ. ಶಶಿಕಾಂತ್ ವಚನಗಾಯನ ಮಾಡಿದರು. ಫ್ರೆಂಡ್ ಕಲಾತಂಡ ಕೊಂಕಣಿ ಗಾಯನ ಸೇರಿದಂತೆ ದೇಶೀಯ ಬಹುತ್ವಗಳ ಅಭಿವ್ಯಕ್ತಿಯ ತುಣುಕುಗಳು ಪ್ರದರ್ಶನಗೊಂಡವು.


ಈ ಕಾರ್ಯಕ್ರಮವನ್ನು ಶಶಿಧರ ಹೆಮ್ಮಾಡಿ ನಿರ್ವಹಿಸಿದರು. ಉಪನ್ಯಾಸಕ ಡಾ. ವಾಸುದೇವ ಬೆಳ್ಳೆ ಸ್ವಾಗತಿಸಿದರು.
ನೆನಪುಗಳು, ಸವಾಲುಗಳು, ಮುಂದಣ ಹೆಜ್ಜೆಗಳು ಎಂಬ ಧ್ಯೇಯ ವಾಕ್ಯವನ್ನಿಟ್ಟುಕೊಂಡು ವಿವಿಧ ಧರ್ಮ, ಜಾತಿ, ಸಿದ್ದಾಂತ, ಸಂಸ್ಕೃತಿ, ಭಾಷೆಗಳು ಸಂಗಮಿಸುವ ರಾಷ್ಟ್ರೀಯ ಸಮಾವೇಶ ‘ಸಹಬಾಳ್ವೆ ಸಾಗರ’ಕ್ಕೆ ಕೂಡಲ ಸಂಗಮದಿಂದ ನೇತ್ರಾವತಿ-ಮಲಪ್ರಭಾ ಜಾಥಾ, ಶಿಶುನಾಳದಿಂದ ಶರಾವತಿ ಜಾಥಾ, ಬಾಬಾಬುಡಾನ್ ಗಿರಿಯಿಂದ ಸೀತಾ-ಭದ್ರಾ ಜಾಥಾ, ಶ್ರೀರಂಗ ಪಟ್ಟಣದಿಂದ ಶಾಂಭವೀ-ಕಾವೇರಿ ಜಾಥಾ, ಅಂಕೋಲದಿಂದ ಸೌಪರ್ಣಿಕಾ-ಶಾಲ್ಮಲಾ ಜಾಥಾ, ಚಿಕ್ಕಬಳ್ಳಾಪುರ ಕೈವಾರ ತಾತಯ್ಯ ಕ್ಷೇತ್ರದಿಂದ ಕುಮಾರಧಾರ-ಪಲ್ಗುಣಿ ಜಾಥಾ, ಸುರಪುರದ ತಿಂಥಣಿ ಮೌನೇಶ್ವರ ಕ್ಷೇತ್ರದಿಂದ ಕಾಳೀ-ಕೃಷ್ಣಾ ಜಾಥಾಗಳು ಶುಕ್ರವಾರವೇ ಆಗಮಿಸಿದ್ದು, ಸಾಹಿತಿ, ವಿಚಾರವಾದಿ, ಹೋರಾಟಗಾರರನ್ನು ಒಳಗೊಂಡ ಎಲ್ಲಾ ಅತಿಥಿಗಳಿಗೆ ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News