ಜಿ.ಪಂ.- ತಾಪಂ. ಚುನಾವಣೆ ‘ನೋಟಾ’ಕ್ಕೂ ಇದೆ ಚಿಹ್ನೆ: ಎ.ಬಿ. ಇಬ್ರಾಹೀಂ
ಮಂಗಳೂರು: ದ.ಕ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಸಾರ್ವತ್ರಿಕ ಚುನಾಣೆಗೆ ಸಂಬಂಧಿಸಿ ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ದ್ವಿತೀಯ ಹಂತದಲ್ಲಿ ಫೆ. 20ರಂದು ಮತದಾನದ ನಡೆಯಲಿದೆ. ಈ ಬಾರಿ ಮತಯಂತ್ರದಲ್ಲಿ ಪಕ್ಷದ ಚಿಹ್ನೆಗಳ ರೀತಿಯಲ್ಲಿ ‘ನೋಟಾ’ (ನನ್ ಆಫ್ ದಿ ಅಬೌವ್- ಮೇಲ್ಕಂಡ ಯಾರೂ ಅಲ್ಲ)ಕ್ಕೂ ಚಿಹ್ನೆಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಚುನಾವಣಾ ಅಧಿಸೂಚನೆ ಫೆ. 1ರಿಂದ ಪ್ರಕಟವಾಗಲಿದ್ದು, ಫೆ. 8ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿರುತ್ತದೆ. ಫೆ. 9ರಂದು ನಾಮಪತ್ರಗಳ ಪರಿಶೀಲನೆ ನಡೆದು ಫೆ. 11ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿರುತ್ತದೆ. ಫೆ. 20ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಹಾಗೂ ಫೆ. 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಮತದಾನ ಜಿಲ್ಲೆಯ ಒಟ್ಟು 1166 ಮತಗಟ್ಟೆಗಳಲ್ಲಿ ನಡೆಯಲಿದೆ. ಚುನಾಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಆಯಾಯ ತಾಲೂಕು ಕೇಂದ್ರಗಳಲ್ಲಿ ಚುನಾವಣಾಧಿಕಾರಿ/ ಸಹಾಯಕ ಚುನವಣಾಧಿಕಾರಿಯನು ಸಂಪರ್ಕಿಸಿ ನಾಮಪತ್ರಗಳ ನಮೂನೆಗಳನ್ನು ಪಡೆದು ಫೆ. 1ರಿಂದ 8ರವರೆಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಭ್ಯರ್ಥಿಯು ರಾಜ್ಯ ಚುನಾವಣಾ ಆಯೋಗವು ನಿಗದಿಪಡಿಸಿರುವ ನಮೂನೆಯಲ್ಲಿ ಅವರು ಮತ್ತು ಕುಟುಂಬದ ಸದಸ್ಯರು ಹೊಂದಿರುವ ಆಸ್ತಿ ಮತ್ತು ಋಣಭಾರಳ ಕುರಿತು 20 ರೂ. ಸ್ಟಾಂಪ್ ಕಾಗದಲ್ಲಿ ದೃಢೀಕೃತ 2 ಪ್ರತಿ ಮೂಲ ಅಫಿದಾವಿತ್ ಮತ್ತು ಒಂದು ಪ್ರತಿ ಜೆರಾಕ್ಸ್ ಸಲ್ಲಿಸಬೇಕು. ಅಫದಾವಿತ್‌ನ ಎಲ್ಲಾ ಕಾಲಂಗಳನ್ನು ಭರ್ತಿ ಮಾಡದೇ ದೃಢಿಕರಿಸದೇ ಸಲ್ಲಿಸಲಾಗುವ ಅಫಿದಾವಿತನ್ನು ನಾಮಪತ್ರ ಪರಿಶೀಲನೆಯ ಸಮಯ ಚುನಾವಣಾಧಿಕಾರಿ ತಿರಸ್ಕರಿಸುವರು.
ಅಫಿದಾವಿತ್‌ನಲ್ಲಿ ಮುಖ್ಯ ಮಾಹಿತಿ ಮರೆಮಾಚಿ ಅಭ್ಯರ್ಥಿಯು ಸಲ್ಲಿಸುವ ಪ್ರಮಾಣ ಪತ್ರಗಳ ವಿರುದ್ಧ ಭಾರತೀಯ ದಂಡ ಸಂಹಿತೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣಾ ಖರ್ಚು ವೆಚ್ಚ ಮಿತಿ
ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸ್ಪರ್ಧಿಸುವ ಅಭ್ಯರ್ಥಿಯು 1 ಲಕ್ಷ ರೂ. ಹಾಗೂ ತಾಲೂಕು ಪಂಚಾಯತ್‌ಗೆ ಸ್ಪರ್ಧಿಸುವ ಅಭ್ಯರ್ಥಿಯು 50,000 ರೂ.ಗಳನ್ನು ಚುನಾವಣೆಗೆ ಖರ್ಚು ವೆಚ್ಚವಾಗಿ ಬಳಕೆ ಮಾಡಲು ಅವಕಾಶವಿರುತ್ತದೆ.
ನಾಮಪತ್ರ ಸಲ್ಲಿಸಿದ ದಿನಾಂಕದಿಂದ ಫಲಿತಾಂಶ ಘೋಷಣೆವರೆಗೆ ಪ್ರತಿದಿನ ಚುನಾವಣೆಗಾಗಿ ವೆಚ್ಚ ಮಾಡಲಾದ ವಿವರವನ್ನು ಪುಸ್ತಕದಲ್ಲಿ ನಮೂದಿಸಿ, ಪಾವತಿ ರಶೀದಿಗಳನ್ನು ಜೋಡಿಸಿ ಇಟ್ಟುಕೊಳ್ಳಬೇಕು. ಆಯಾಯ ತಾಲೂಕಿನ ಲೆಕ್ಕ ಪತ್ರಗಳ ಪರಿಶೀಲನೆಗೆ ನಿಯೋಜನೆಗೊಂಡ ಅಧಿಕಾರಿಕಾರಿಗೆ, ಚುನಾವಣಾ ಅಧಿಕಾರಿಗೆ ಮತ್ತು ಚುನಾವಣಾ ವೀಕ್ಷಕರ ಪರಿಶೀಲನೆಗೆ ಈ ವಿವರನ್ನು ಹಾಜರುಪಡಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಠೇವಣಿ
ಜಿ.ಪಂ. ಹಾಗೂ ತಾ.ಪಂ. ಚುನಾಣೆಗೆ ಸಾಮಾನ್ಯ ಮೀಸಲಾತಿ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿ 500 ರೂ. ಠೇವಣಿ ಹಾಗೂ ನಾಮ ಪತ್ರ ಸಲ್ಲಿಸುವ ವ್ಯಕ್ತಿಯು ಹಿಂದುಳಿದ ವರ್ಗ, ಅನುಸೂಚಿತ ಜಾತಿ, ಪಂಗಡ ಅಥವಾ ಮಹಿಳೆಯಾಗಿದ್ದಲ್ಲಿ 250 ರೂ. ಠೇವಣಿ ಪಾವತಿಸತಕ್ಕದು.
ಚುನಾವಣೆಗೆ ಸಂಬಂಧಿಸಿ ಹಿಂದುಳಿದ ವರ್ಗ -ಎ ಮತ್ತು ಬಿ ಪ್ರವರ್ಗಗಳಿಗೆ ಮೀಸಲಾಗಿರುವ ಜಾತಿಗಳ ಪಟ್ಟಿಯನ್ನು ಸರಕಾರ ಪ್ರಕಟಿಸಿದೆ. ಪ್ರವರ್ಗಗಳಲ್ಲಿ ಬರುವ ಜಾತಿಗಳು ಹಿಂದುಳಿದ ವರ್ಗ-ಎ ಮತ್ತು ಬಿ ಪ್ರವರ್ಗಗಳಿಗೆ ಮೀಸಲಿರುವ ಸದಸ್ಯ ಸ್ಥಾನಗಳಿಗೆ ತಹಶೀಲ್ದಾರರಿಂದ ದೃಢಪತ್ರ ಪಡೆದು ಸ್ಪರ್ಧಿಸಬಹುದು. ಆದರೆ ಹಿಂದುಳಿದ ವರ್ಗ ಬಿ ಪ್ರವರ್ಗದವರು ಈ ಮೀಸಲಾತಿ ಸೌಲಭ್ಯವನ್ನು ಪಡೆಯಬೇಕಾದಲ್ಲಿ ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟಿರಬೇಕು.
ಅಭ್ಯರ್ಥಿ ಅಥವಾ ಅವರ ಪೋಷಕರು/ ರಕ್ಷಕರು ಸರಕರಾದ ಕ್ಲಾಸ್ 1 ಅಥವಾ ಕ್ಲಾಸ್ 2 ಹುದ್ದೆಗಳಿಗೆ ಸರಿಸಮಾನವಾದ ವೇತನ 21,400 ರಿಂದ 40050 ರೂ. ವೇತನ ಶ್ರೇಣಿಯ ಹುದ್ದೆಗೞಳನ್ನು ಯಾವುದೇ ಪಬ್ಲಿಕ್ ಸೆಕ್ಟರ್ ಅಥವಾ ಖಾಸಗಿ ರಂಗಗಳಲ್ಲಿ ನಿರ್ವಹಿಸತಕ್ಕದ್ದಲ್ಲ. ಅಭ್ಯರ್ಥಿ ಅಥವಾ ಅವರ ಪೋಷಕರು/ ರಕ್ಷಕರು ಯಾರೊಬ್ಬರೂ ಆದಾಯ ತೆರಿಗೆ ಪಾವತಿದಾರ/ ಸಂಪತ್ತು ತೆರಿಗೆ ಪಾವತಿದಾರರಾಗಿರಬಾರದು. ಮಾರಾಟ ತೆರಿಗೆ ಪಾವತಿದಾರರೂ ಆಗಿರಬಾರದು.
ಅಭ್ಯರ್ಥಿ ಅಥವಾ ಅವರ ಪೋಷಕರು/ ರಕ್ಷಕರು ಯಾರೊಬ್ಬರೂ ಅಥವಾ ಇಬ್ಬರೂ ಸೇರಿ ಮಳೆ ಆಧಾರಿತ ಭೂಮಿ ಅಥವಾ ಕುಷ್ಕಿ ಜಮೀನು ಅಥವಾ ಅದರ ಸರಿಸಮಾನವಾದ 8 ಹೆಕ್ಟೇರ್ (20 ಎಕರೆ ) ಜಮೀನು ಹೊಂದಿರಬಾರದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಸೆಕ್ಟರ್ ಅಧಿಕಾರಿ
ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾ/ ತಾಲೂಕು ಪಂಚಾಯತ್ ವ್ಯಾಪ್ತಿಯೊಳಗಿನ ಸುಮಾರು 10 ಮತಗಟ್ಟೆಗಳಿಗೆ ಒಬ್ಬರಂತೆ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಅಪರ ಜಿಲ್ಲಾಧಿಕಾರಿ ಕುಮಾರ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಸಕ್ತ ಜಿಲ್ಲೆಯಲ್ಲಿ 1048897 ಮತದಾರರು
ರಾಜ್ಯ ವಿಧಾನಸಭಾ ಚುನಾವಣಾ ಕ್ಷೇತ್ರದ, 2016 ಜನವರಿ 11ರಂದು ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಗಳನ್ನು ಅಳವಡಿಸಿಕೊಂಡು ಜಿಲ್ಲಾ /ತಾಲೂಕು ಪಂಚಾಯತ್‌ಚುನಾವಣಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ತಯಾರಿಸಿ ಪ್ರಕಟಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಒಟ್ಟು 521378 ಗಂಡಸರು 527519 ಮಹಿಳೆಯರು ಸೇರಿ ಒಟ್ಟು 1048897 ಮತದಾರರಿದ್ದಾರೆ.
ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸಲು ಬಿಟ್ಟು ಹೋಗಿರುವ ಮತದಾರರು ಹೆಸರು ನೋಂದಾಯಿಸಲು 18 ಪ್ರಾಯ ತುಂಬಿದವರು ಫೆ. 1ರೊಳಗೆ ಮನವಿಯನ್ನು ಸಂಬಂಧಪಟ್ಟ ತಹಶೀಲ್ದಾರರಿಗೆ ಸಲ್ಲಿಸಿ ತಮ್ಮ ಹೆಸರನ್ನು ಸೇರಿಸಲು ಅವಕಾಶವಿರುತ್ತದೆ.
ಈ ದಿನಗಳಲ್ಲಿ ಪಕ್ಷಗಳ ಕಾರ್ಯಕರ್ತರ ಮೂಲಕ ಬರುವ ಹಲವಾರು ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಸರು ನೋಂದಾಯಿಸಲು ಬಯಸುವ ವ್ಯಕ್ತಿ ಖುದ್ದಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಮಾತ್ರವೇ ಈ ಎರಡು ದಿನಗಳಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಕುರಿತು ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.