ಪಡೀಲ್‌ನಲ್ಲಿ 41 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಧಿಕಾರಿ ಸಂಕೀರ್ಣ
ಅರಣ್ಯ ಇಲಾಖೆಯ ಅನುಮತಿ ಪಡೆದು ಕಾಮಗಾರಿ ಆರಂಭ
ಮಂಗಳೂರು: ಪಡೀಲ್‌ನ 5.89 ಎಕರೆ ಪ್ರದೇಶದಲ್ಲಿ ನಿರ್ಮಿಸಲುದ್ದೇಶಿಸಿರುವ ಜಿಲ್ಲಾಧಿಕಾರಿ ಸಂಕೀರ್ಣಕ್ಕಾಗಿ 41 ಕೋಟಿ ರೂ.ಗಳ ಆಡಳಿತಾತ್ಮಕ ಮಂಜೂರಾತಿ ದೊರಕಿದೆ. ಈ ಪ್ರದೇಶದ 70 ಸೆಂಟ್ಸ್ ಜಾಗದಲ್ಲಿ ಮಾತ್ರವೇ ಜಿಲ್ಲಾಧಿಕಾರಿ ಕಟ್ಟಡ ಬರಲಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಸರ್ವೆ ನಡೆಸಿ ಕಡಿಯಬೇಕಾದ ಮರಗಳಿಗೆ ಅನುಮತಿ ನೀಡಿದ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಸ್ಪಷ್ಟನೆ ನೀಡಿದ ಅವರು, ಖಾಸಗಿ ವ್ಯಕ್ತಿಗಳು ಆ ಪ್ರದೇಶದಲ್ಲಿ ಮರ ಇದೆ ಅದು ಡೀಮ್ಡ್ ಫಾರೆಸ್ಟ್ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಮಂಡಿಸಿದ್ದ ದಾವೆಯನ್ನು ಪುರಸ್ಕೃತಗೊಂಡಿಲ್ಲ.
ಬಳಿಕ ಅವರು ಚೆನ್ನೈನ ಹಸಿರು ಪೀಠ (ಗ್ರೀನ್ ಟ್ರಿಬ್ಯೂನಲ್)ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೊದಲ ಹಂತದಲ್ಲಿ ಮರಗಳನ್ನು ಕಡಿಯದಂತೆ ಹಸಿರು ಪೀಠ ಸೂಚನೆ ನೀಡಿತ್ತು. ಇದೀಗ ಜ. 27ರಂದು ಆ ಸೂಚನೆಯನ್ನು ಹಿಂಪಡೆದು ಕಾನೂನುರೀತಿಯಲ್ಲಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಪ್ರಕ್ರಿಯೆ ಮುಂದುವರಿಸುವಂತೆ ಹಸಿರು ಪೀಠ ಸೂಚಿಸಿದೆ ಎಂದು ಅವರು ಹೇಳಿದರು.
ಕಾಮಗಾರಿಗಾಗಿ ಟೆಂಡರ್ ಕರೆಯಲಾಗಿದ್ದು, ಗುತ್ತಿಗೆದಾರರನ್ನು ಅಂತಿಮಗೊಳಿಸಿ ಕಂದಾಯ ಇಲಾಖೆಗೆ ಕಳುಹಿಸಲಾಗಿದೆ.
ಖಾಸಗಿ ವ್ಯಕ್ತಿಯವರು ಹೇಳುತ್ತಿರುವ ಪ್ರಕಾರ 477 ಮರಗಳು ಇರುವುದು ಪಡೀಲ್‌ನ ಅರಣ್ಯ ಇಲಾಖೆಯ ಒಟ್ಟು 11 ಎಕರೆ ಭೂಮಿಯಲ್ಲಿ. ಪ್ರಸ್ತುತ ಜಿಲ್ಲಾಧಿಕಾರಿ ಸಂಕೀರ್ಣಕ್ಕಾಗಿ ಕಂದಾಯ ಭೂಮಿಯಾಗಿ ಪರಿವರ್ತಿಸಲಾದ ಭೂಮಿ 5.89 ಎಕರೆಯಾಗಿದ್ದು, ಅದರಲ್ಲಿ 70 ಸೆಂಟ್ಸ್‌ನಲ್ಲಿ ಮಾತ್ರವೇ ಕಟ್ಟಡ ರಚನೆಯಾಗಲಿದೆ.
ಈ ಪ್ರದೇಶದಲ್ಲಿ ಇರುವ ಹೆಚ್ಚಿನ ಮರಗಳು ಬಿದಿರು, ಅಕೇಶಿಯಾ, ತೇಗ ಮಾತ್ರ ಆಗಿವೆ. ಹೆಚ್ಚಿನ ಮರಗಳನ್ನು ಕಡಿಯಲಾಗುವುದಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಸರ್ವೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ನಗರದಲ್ಲಿನ ಜನ ಸಂದಣಿ, ಸಂಚಾರ ಒತ್ತಡವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಡೀಲ್‌ನ ಪ್ರಶಾಂತ ಪರಿಸರದಲ್ಲಿ ಜಿಲ್ಲಾಧಿಕಾರಿ ಕಟ್ಟಡವನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಜಿಲ್ಲಾಡಳಿತ ಅರಣ್ಯದ ಬಗ್ಗೆ ಕಾಳಜಿ ಹೊಂದಿರುವುದರಿಂದಲೇ ಈಗಾಗಲೇ ಪಿಲಿಕುಳದಲ್ಲಿ 300 ಎಕರೆ ಪ್ರದೇಶದಲ್ಲಿ ಪರಿಸರ ಸಂರಕ್ಷಣಾ ಕಾರ್ಯ ನಡೆದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.