ಭಾರತ ವರ್ಷಕ್ಕೆ10 ಸಾವಿರ ಪಿಎಚ್ ಡಿ ವಿದ್ಯಾರ್ಥಿಗಳನ್ನು ಅಮೆರಿಕಕ್ಕೆ ಕಳಿಸಲಿ: ನಾರಾಯಣ ಮೂರ್ತಿ
ಬೆಂಗಳೂರು, ಜ.30: ಮುಂದಿನ ಐವತ್ತು ವರ್ಷಗಳ ತನಕ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಸ್ಟೀಮ್ )ಮತ್ತಿತರ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಪ್ರತಿವರ್ಷ ಭಾರತ 10 ಸಾವಿರ ವಿದ್ಯಾರ್ಥಿಗಳನ್ನು ಅಮೆರಿಕಕ್ಕೆ ಕಳುಹಿಸಲಿ.ಅವರು ಅಮೆರಿಕದಲ್ಲಿ ಸಂಶೋಧನೆ ಮುಗಿಸಿ ವಾಪಸಾದರೆ ಭಾರತ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಇನ್ಫೋಸಿಸ್‌ನ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ 'ಇಂಡೋ-ಅಮೆರಿಕ ಚೆಂಬರ‍್ ಆಫ್ ಕಾಮರ್ಸ್ ಸಮಾವೇಶ'ಉದ್ದೇಶಿಸಿ ಮಾತನಾಡಿದ ಅವರು ಭಾರತದಿಂದ ಸಂಶೋಧನೆಗೆ ತೆರಳುವ ವಿದ್ಯಾರ್ಥಿಗಳಿಗೆ ಪೂರ್ಣ ವೆಚ್ಚವನ್ನು ಸರಕಾರ ಭರಿಸಬೇಕು. ಸುಮಾರು 5 ಬಿಲಿಯನ್ ಡಾಲರ್ ಹಣ ಈ ಉದ್ದೇಶಕ್ಕಾಗಿ ಬೇಕಾಗಬಹುದು. ನಮಗೆ ದೊರೆಯುವ ಪ್ರಯೋಜನಕ್ಕೆ ಹೋಲಿಸಿದಲ್ಲಿ ಇದು ದೊಡ್ಡ ವೆಚ್ಚವಲ್ಲ ಎಂದು ಅವರು ಹೇಳಿದರು.
ಭಾರತ ಮತ್ತು ಅಮೆರಿಕ ನಡುವೆ ಈ ಉದ್ದೇಶಕ್ಕಾಗಿ ಒಪ್ಪಂದ ಅಗತ್ಯ. ಇದರಿಂದ ಎರಡೂ ದೇಶಗಳಿಗೆ ಇದರಿಂದ ಪ್ರಯೋಜನವಿದೆ.
ಈ ಯೋಜನೆಯಡಿ ತೆರಳಿದ ವಿದ್ಯಾರ್ಥಿಗಳಿಗೆ ಸಂಶೋಧನಾ ಕೆಲಸ ಮುಗಿದ ಬಳಿಕ ಅಮೆರಿಕದಲ್ಲಿ ಅವರಿಗೆ ತಕ್ಷಣ ಉದ್ಯೋಗ ನೀಡಬಾರದು. ಅವರನ್ನು ಭಾರತಕ್ಕೆ ವಾಪಾಸು ಕಳುಹಿಸಬೇಕು. ಹೀಗೆ ವಾಪಸಾದ ಸಂಶೋಧಕರು ಕನಿಷ್ಠ ಪಕ್ಷ ಹತ್ತು ವರ್ಷ ಭಾರತದಲ್ಲಿ ಸೇವೆ ಸಲ್ಲಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಡಾ.ಮನಮೋಹನ್ ಸಿಂಗ್ ಭಾರತದ ಪ್ರಧಾನಿಯಾಗಿದ್ದಾಗ ಭಾರತದಲ್ಲಿ ವಿದೇಶಿ ವಿವಿಗಳಿಗೆ ಪ್ರವೇಶಾವಕಾಶ ನೀಡಲು ಬಯಿಸಿದ್ದರು. ಆದರೆ ವಿವಿಧ ಕಾರಣಗಳಿಂದ ಇದು ಸಾಧ್ಯವಾಗಲಿಲ್ಲ.ಆದರೆ ಈಗ ಮತ್ತೆ ಸರಕಾರ ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಇದರಿಂದ ನಮ್ಮ ಮಕ್ಕಳು, ಮೊಮ್ಮಕ್ಕಳು ಆರ್ಥಿಕವಾಗಿ ಬಲಿಷ್ಠರಾಗುವುದನ್ನು ನೋಡಲು ಸಾಧ್ಯ ಎಂದು ನಾರಾಯಣ ಮೂರ್ತಿ ಹೇಳಿದರು.