ಕೊಣಾಜೆ : ಯುವಜನರು ದೇಶ ಸೇವೆಯಲ್ಲೂ ತೊಡಗಿಸಿಕೊಳ್ಳಬೇಕು: ಡಾ.ಎಂ.ಶಾಂತರಾಮ್ ಶೆಟ್ಟಿ
ಕೊಣಾಜೆ: ದೇಶಕ್ಕಾಗಿ ಸೇವೆ ಸಲ್ಲಿಸುವುದು ಅದು ಪುಣ್ಯದ ಕೆಲಸ. ದೇಶಕ್ಕೆ ಸೇವೆ ಸಲ್ಲಿಸಬೇಕೆನ್ನುವ ಮನಸ್ಸು ಯುವಜನರಲ್ಲಿ ಇದ್ದರೆ ಭಾರತೀಯ ಸೇನೆಯಲ್ಲಿ ಉತ್ತಮ ಅವಕಾಶಗಳಿದ್ದು ಸೇನೆಗೆ ಸೇರಿ ಅವಕಾಶಗಳನ್ನು ಬಳಸಿಕೊಳ್ಳಿ ಎಂದು ನಿಟ್ಟೆ ವಿಶ್ವವಿದ್ಯಾಲಯದ ಉಪ ಕುಲಾಧಿಪತಿ ಡಾ.ಎಂ.ಶಾಂತರಾಮ್ ಶೆಟ್ಟಿ ಹೇಳಿದರು. ನಿಟ್ಟೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಶನಿವಾರ ಕೆ.ಎಸ್.ಹೆಗ್ಡೆ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಮಿಳ್ನಾಡು, ಪಂಜಾಬ್ ಹಾಗೂ ಇತರ ರಾಜ್ಯಗಳಲ್ಲಿ ಪ್ರತೀ ಕುಟುಂಬದಿಂದಲೂ ಓರ್ವ ಭಾರತೀಯ ಸೇನೆಗೆ ಸೇರಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕರಾವಳಿ ಭಾಗದಲ್ಲಿ ಬೆರಳಿಣಿಕೆಯಷ್ಟು ಮಂದಿ ಮಾತ್ರವೇ ಸೇನೆಯಲ್ಲಿದ್ದು ಇಲ್ಲಿನ ಜನರ ನಿರ್ಲಕ್ಷ್ಯತೆಯನ್ನು ತೋರಿಸುತ್ತದೆ. ಕುಟುಂಬ, ಸಂಸಾರದಿಂದ ದೂರವಿರುವ ಸೈನಿಕರು ದೇಶ ಹಾಗೂ ಜನರ ರಕ್ಷಣೆ ನಿಟ್ಟಿನಲ್ಲಿ ಮಾಡುವ ಸೇವೆ ಗಮನಾರ್ಹ. ಈ ಕಾರಣದಿಂದ ಸೈನಿಕರು ನಿವೃತ್ತರಾದರೂ ಜನರ ಅವರನ್ನು ಹಾಗೂ ಅವರ ಕುಟುಂಬವನ್ನು ಸ್ಮರಿಸುವುದೇ ದೇವರು ಕೊಟ್ಟ ದೊಡ್ಡ ಉಡುಗೊರೆ.
ಕಾರ್ಯಕ್ರಮದಲ್ಲಿ ನಿವೃತ್ತ ಭಾರತೀಯ ಸೇನೆಯ ಕರ್ನಲ್ ಬಾಲಕೃಷ್ಣ, ನೌಕಾಪಡೆಯ ಎಂ.ಸಿ.ಭದ್ರಯ್ಯ ಹಾಗೂ ವಾಯುಸೇನೆಯ ಎಸ್.ಎಂ.ಐರನ್ ಅವರನ್ನು ಸನ್ಮಾನಿಸಲಾಯಿತು. ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಎಸ್.ಮೂಡಿತ್ತಾಯ ಸ್ವಾಗತಿಸಿದರು. ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಮುರಳೀ ಮೋಹನ್ ಚೂಂತಾರು ಸನ್ಮಾನಿತರನ್ನು ಪರಿಚಯಿಸಿದರು. ಕ್ಷೇಮಾ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ವಂದಿಸಿದರು. ಡಾ.ಶತಾದ್ರು ರೋಯ್ ಕಾರ್ಯಕ್ರಮ ನಿರೂಪಿಸಿದರು.