ಮೂಡುಬಿದಿರೆ:ತರಕಾರಿ ಬೆಳೆಗಳ ಕುರಿತು ಕಾರ್ಯಾಗಾರ: ಕೃಷಿಕರಿಗೆ ಸನ್ಮಾನ,
ಮೂಡುಬಿದಿರೆ: ಅಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿ, ಕಡಿಮೆ ಜಾಗದಲ್ಲಿ ಹೆಚ್ಚಿನ ಇಳುವರಿ ಪಡೆಯುವಲ್ಲಿಯೂ ಪ್ರಯತ್ನವಾಗಬೇಕು. ಕೃಷಿ ಅಭಿವೃದ್ಧಿಗೆ ಬ್ಯಾಂಕ್‌ಗಳು ನೀಡುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ, ಕೃಷಿಯಲ್ಲಿ ಲಾಭಗಳಿಸಲು ಪೂರಕವಾಗುತ್ತದೆ. ಯುವಜನರನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ರಾಜ್ಯ ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು. ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದರೆ ಹಾಗೂ ಎಂಸಿಎಸ್ ಬ್ಯಾಂಕ್ ಜಂಟಿ ಆಶ್ರಯದಲ್ಲಿ ‘ಕರಾವಳಿಯಲ್ಲಿ ತರಕಾರಿ ಬೆಳೆಗಳ ಕುರಿತ ಕಾರ್ಯಾಗಾರ ಹಾಗೂ ಪ್ರಗತಿಪರ ಕೃಷಿಕರಿಗೆ ಸನ್ಮಾನ’ ಕಾರ್ಯಕ್ರಮವನ್ನು ಕಲ್ಪವೃಕ್ಷ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ, ಎಂಸಿಎಸ್ ಬ್ಯಾಂಕ್‌ನ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಶಂಕರ ರೈ ಮಿಜಾರು, ಪಿ.ಕೆ.ರಾಜು ಪೂಜಾರಿ ಕಾಶಿಪಟ್ನ, ಶಿರ್ತಾಡಿ ಶಿಮುಂಜೆಗುತ್ತು ಎಸ್.ಡಿ ಸಂಪತ್ ಸಾಮ್ರಾಜ್ಯ ಅವರನ್ನು ಸನ್ಮಾನಿಸಲಾಯಿತು. ಆಳ್ವಾಸ್ ಸಂಸ್ಥೆಯ ವಾಣಿಜ್ಯ ಹಾಗೂ ಕಲಾ ಪ.ಪೂ ಕಾಲೇಜಿನ ಪ್ರಾಂಶುಪಾಲ ವೇಣುಗೋಪಾಲ ಶೆಟ್ಟಿ ಅವರು ಅಭಿನಂದನಾ ಭಾಷಣ ಮಾಡಿದರು. ಬ್ರಹ್ಮಾವರ ಕೆ.ವಿ.ಕೆ ಕಾರ್ಯಕ್ರಮ ಸಂಯೋಜಕ ಡಾ.ಧನಂಜಯ ಬಗ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಕೃಷಿಕರಿಗೆ ಮಾಹಿತಿ ನೀಡಿದರು. ಎಂಸಿಎಸ್ ಬ್ಯಾಂಕ್ ಸಿಇಒ ಚಂದ್ರಶೇಖರ, ಉದ್ಯಮಿ ಕೆ.ಶ್ರೀಪತಿ ಭಟ್, ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಕಾರ್ಯದರ್ಶಿ ರಘುರಾಮ ಶೆಟ್ಟಿ ಉಪಸ್ಥಿತರಿದ್ದರು. ಪ್ರಭಾತ್ ಬಲ್ನಾಡು ಕಾರ್ಯಕ್ರಮ ನಿರೂಪಿಸಿದರು.
ಪ್ರಗತಿಪರ ಕೃಷಿಕರನ್ನು ಕಲ್ಪವೃಕ್ಷ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.