ನಾಗಾಲ್ಯಾಂಡ್ ಗೆ ಪ್ರತ್ಯೇಕ ಅಧಿಕೃತ ಧ್ವಜ ?
ಹೊಸದಿಲ್ಲಿ , ಜ 30 : ಕೇಂದ್ರ ಸರಕಾರ ಹಾಗು ನ್ಯಾಷನಲಿಸ್ಟ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲಿಮ್ (ಇಸಾಕ್ -ಮುಇವ) (NSCN-IM) ಶೀಘ್ರವೇ ಸಹಿಮಾಡಲಿರುವ ಅಂತಿಮ ಒಪ್ಪಂದದ ಪ್ರಕಾರ ನಾಗಾಲ್ಯಾಂಡ್ ಗೆ ಪ್ರತ್ಯೇಕ ಅಧಿಕೃತ ಧ್ವಜ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಈ ವಿಷಯ ಈಗಾಗಲೇ ಬಹುತೇಕ ಅಂತಿಮಗೊಂಡಿದೆ ಎಂದು ತಿಳಿದು ಬಂದಿದೆ.
1997 ರಲ್ಲಿ ಅಂತಿಮಗೊಂಡ ಕದನ ವಿರಾಮದ ಬಳಿಕ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿರುವ ಎನ್ ಎಸ್ ಸಿ ಎನ್ (ಐ ಎಂ) ಮುಂದಿಟ್ಟ 33 ಬೇಡಿಕೆಗಳಲ್ಲಿ ಪ್ರತ್ಯೇಕ ಧ್ವಜದ ಬೇಡಿಕೆಯೂ ಒಂದಾಗಿದೆ. ಆದರೆ ಪ್ರತ್ಯೇಕ ಕರೆನ್ಸಿ (ನೋಟು , ನಾಣ್ಯ )ದ ಬೇಡಿಕೆಯನ್ನು ಕೇಂದ್ರ ತಿರಸ್ಕರಿಸಿದೆ.
ಎನ್ ಎಸ್ ಸಿ ಎನ್ (ಐ ಎಂ) ಕೇಂದ್ರೀಯ ಸಮಿತಿಯ ದೂತ ಹಾಗು ಮಾತುಕತೆಯಲ್ಲಿ ಮುಖ್ಯ ಪಾತ್ರ ವಹಿಸಿರುವ ವಿ ಎಸ್ ಅಟೆಂ ಅವರು "ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಇರಬಹುದಾದರೆ , ನಾಗಾಗಳಿಗೆ ಯಾಕಿರಬಾರದು ? ಚೀನಾದಲ್ಲೂ ಮಕಾವು, ಹಾಂಗ್ ಕಾಂಗ್ ಹಾಗು ತೈವಾನ್ ಗಳಿಗೆ ಪ್ರತ್ಯೇಕ ಧ್ವಜಗಳಿವೆ " ಎಂದು ಹೇಳಿದ್ದಾರೆ.
ಪ್ರತ್ಯೇಕ ಸಂವಿಧಾನ, ಉಭಯ ನಾಗರೀಕತ್ವ ಹಾಗು ಅಸ್ಸಾಂ , ಅರುಣಾಚಲ ಪ್ರದೇಶ , ಮಣಿಪುರ ಹಾಗು ನಾಗಾಲ್ಯಾಂಡ್ಗಳಲ್ಲಿರುವ ನಾಗಾಗಳಿರುವ ಪ್ರದೇಶಗಳನ್ನು ಸೇರಿಸಿ "ನಾಗಾಲಿಮ್ " ರೂಪಿಸುವುದು ಇತರ ಪ್ರಮುಖ ಬೇಡಿಕೆಗಳಾಗಿವೆ. ಆದರೆ ಕೊನೆಯ ಬೇಡಿಕೆಗೆ ಇತರ ರಾಜ್ಯಗಳ ವಿರೋಧವಿರುವುದರಿಂದ ಅದು ಸದ್ಯಕ್ಕೆ ನೆರವೇರುವ ಸಾಧ್ಯತೆಗಳಿಲ್ಲ.