×
Ad

‘ಆದರ್ಶ’ವಾಗಬೇಕಾದ ಶಾಲೆಯಿಂದಲೇ ಸಾರ್ವಜನಿಕರಿಗೆ ತೊಂದರೆ

Update: 2016-01-31 00:25 IST

ಬಂಟ್ವಾಳ, ಜ.30: ತಾಲೂಕಿನ ಸಜಿಪನಡು ಗ್ರಾಮದಲ್ಲಿರುವ ಆದರ್ಶ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೈ, ಮುಖ, ಪಾತ್ರೆ ತೊಳೆಯಲೆಂದು ಆವರಣ ಗೋಡೆಗೆ ಅಳವಡಿಸಿರುವ ತೊಟ್ಟಿ ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಸಜಿಪನಡು ಜಂಕ್ಷನ್‌ನಿಂದ ಕಂಚಿನಡ್ಕ ಪದವಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ತಾಗಿಕೊಂಡೇ ಈ ಶಾಲೆ ಇದೆ. ಶಾಲಾ ಮಕ್ಕಳು ಕೈ, ಮುಖ ಹಾಗೂ ಮಧ್ಯಾಹ್ನದ ಊಟದ ಬಳಿಕ ಪಾತ್ರೆಗಳನ್ನು ತೊಳೆಯಲೆಂದು ತಗಡಿನಿಂದ ಮಾಡಿರುವ ತೊಟ್ಟಿಯೊಂದನ್ನು ಶಾಲಾ ಆಡಳಿತ ಮಂಡಳಿ ರಸ್ತೆಗಿಂತ ಎತ್ತರದಲ್ಲಿರುವ ಶಾಲೆಯ ಆವರಣ ಗೋಡೆಯ ಹೊರ ಭಾಗಕ್ಕೆ, ಅಂದರೆ ರಸ್ತೆಯ ಕಡೆಗೆ ಅಳವಡಿಸಿದೆ. ಮಕ್ಕಳು ಕೈ, ಮುಖ ಹಾಗೂ ಮಧ್ಯಾಹ್ನದ ಊಟದ ಬಳಿಕ ಪಾತ್ರೆಗಳನ್ನು ತೊಳೆಯುವಾಗ ಕೆಳಗಡೆಯಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಜನರ ಮೇಲೆ ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ನೀರು ಚೆಲ್ಲುತ್ತಿದೆ ಎಂಬುದು ಸಾರ್ವಜನಿಕರ ಆರೋಪ. ಕೆಲವು ಮಕ್ಕಳಂತೂ ಪಾತ್ರೆಗಳಲ್ಲಿ ನೀರು ತುಂಬಿಸಿ ಉದ್ದೇಶಪೂರ್ವಕವಾಗಿಯೇ ರಸ್ತೆಯಲ್ಲಿ ಸಂಚರಿಸುವ ಜನರ, ವಾಹನಗಳ ಮೇಲೆ ಚೆಲ್ಲುತ್ತಿದ್ದಾರೆ ಎಂದು ಸ್ಥಳೀಯ ಜನರು ಆರೋಪಿಸಿದ್ದಾರೆ. ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿರುವ ತೊಟ್ಟಿಯನ್ನು ತೆಗೆದು ಶಾಲಾ ಆವರಣ ಗೋಡೆಯ ಒಳಭಾಗದಲ್ಲಿ ಅಳವಡಿಸುವಂತೆ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ. ಆದರೆ, ಆಡಳಿತ ಮಂಡಳಿ ನಮ್ಮ ಮನವಿಗೆ ಸೊಪ್ಪು ಹಾಕಿಲ್ಲ. ಇದರಿಂದಾಗಿ ಆ ಬಳಿಕ ಸಜಿಪನಡು ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದೇವೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಯಲ್ಲಿ ಸಮಸ್ಯೆಯ ಕುರಿತು ತಿಳಿ ಹೇಳಿದ್ದೇವೆ. ಅವರು ನ್ಯಾಯ ಒದಗಿಸುವ ಭರವಸೆ ಕೂಡಾ ನೀಡಿದ್ದರು. ಆದರೆ, ಅದ್ಯಾವುದೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ. ತಾಪಂ ಮತ್ತು ಜಿಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣ ಅಧಿಕಾರಿಗೂ ಈ ಬಗ್ಗೆ ದೂರು ನೀಡಲಾಗಿದೆ. ಆದರೆ, ಇದು ನಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬಂತೆ ಎಲ್ಲ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ ಎಂದು ಸ್ಥಳೀಯ ಹಿರಿಯ ನಾಗರಿಕರೊಬ್ಬರು ಆರೋಪಿಸಿದ್ದಾರೆ. ಅನಾಹುತಕ್ಕೆ ನಾಂದಿ: ಈ ಶಾಲೆಯಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕೈ, ಮುಖ, ಪಾತ್ರೆ ತೊಳೆಯಲು ಅಳವಡಿಸಿರುವ ಈ ತೊಟ್ಟಿಯಲ್ಲಿ ಬರೇ ಮೂರು ಟ್ಯಾಪ್‌ಗಳಿರುವುದು. ಮಧ್ಯಾಹ್ನದ ಊಟದ ಬಳಿಕ ಕೈ, ಪಾತ್ರೆ ತೊಳೆಯಲು ವಿದ್ಯಾರ್ಥಿಗಳು ಒಮ್ಮೆಲೆ ಮುಗಿ ಬೀಳುತ್ತಾರೆ. ಎತ್ತರದಲ್ಲಿರುವ ಆವರಣ ಗೋಡೆಯ ಹೊರ ಭಾಗದಲ್ಲಿ ತೊಟ್ಟಿ ಇರುವುದರಿಂದ ಮಕ್ಕಳು ತಮ್ಮ ದೇಹವನ್ನು ಸಂಪೂರ್ಣವಾಗಿ ಬಾಗಿಸಿಯೇ ಪಾತ್ರೆ, ಕೈ ತೊಳೆಯಬೇಕಾಗಿದೆ. ಈ ವೇಳೆ ಸಣ್ಣ ತರಗತಿಯ ಮಕ್ಕಳು ಆವರಣ ಗೋಡೆಯಿಂದ ರಸ್ತೆಗೆ ಆಯತಪ್ಪಿ ಬೀಳುವ ಅಪಾಯಗಳಿವೆ ಎಂದು ಆತಂಕ ವ್ಯಕ್ತಪಡಿಸಿರುವ ಸಾರ್ವಜನಿಕರು, ಗ್ರಾಮ ಪಂಚಾಯತ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


ಶಾಲೆಯ ತೊಟ್ಟಿಯಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಮೂರು ತಿಂಗಳ ಹಿಂದೆ ಸಾರ್ವಜನಿಕರಿಂದ ಲಿಖಿತವಾಗಿ ದೂರು ಬಂದಿದೆ. ಸಾರ್ವಜನಿಕರ ದೂರು ಹಾಗೂ ಸ್ವಚ್ಛ ಭಾರತ್ ಮಿಶನ್ ಜಿಲ್ಲಾ ಸಂಯೋಜಕಿ ಮಂಜುಳಾ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯ ಆದೇಶದ ಮೇರೆಗೆ ಶಾಲಾ ಮುಖ್ಯೋಪಾಧ್ಯಾಯರಿಗೆ ಪಂಚಾಯತ್‌ನಿಂದ ಪತ್ರ ಬರೆದು ತೊಟ್ಟಿಯನ್ನು ತೆರವುಗೊಳಿಸುವಂತೆ ಆದೇಶಿಸಲಾಗಿದೆ. ಆದರೆ, ಶಾಲೆಯವರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಆದೇಶಕ್ಕೆ ಸ್ಪಂದಿಸದಿದ್ದಲ್ಲಿ ಪೊಲೀಸ್ ಭದ್ರತೆಯೊಂದಿಗೆ ತೊಟ್ಟಿ ತೆರವುಗೊಳಿಸಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲಾಗುವುದು. -ವೀರಪ್ಪ ಗೌಡ, ಅಭಿವೃದ್ಧಿ ಅಧಿಕಾರಿ,

ಸಜಿಪನಡು ಗ್ರಾಪಂ ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶಾಲೆಯವರು ಆವರಣ ಗೋಡೆಯ ಹೊರ ಭಾಗಕ್ಕೆ ತೊಟ್ಟಿ ಅಳವಡಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆಯಲ್ಲದೇ ರಸ್ತೆ ಬದಿ ಅಸ್ವಚ್ಛತೆಗೂ ಕಾರಣವಾಗಿದೆ. ಹತ್ತು ದಿನಗಳ ಒಳಗೆ ತೊಟ್ಟಿಯನ್ನು ತೆರವುಗೊಳಿಸುವಂತೆ ನಾಲ್ಕು ದಿನಗಳ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿ, ತಾಪಂ ಮುಖ್ಯ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ನಿಗದಿತ ಸಮಯದೊಳಗೆ ಶಾಲಾ ಆಡಳಿತ ಸ್ಪಂದಿಸದಿದ್ದಲ್ಲಿ ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಲಾಗುವುದು. -ಮಂಜುಳಾ ಜಿ., ಜಿಲ್ಲಾ ಸಂಯೋಜಕಿ, ಸ್ವಚ್ಛ ಭಾರತ್ ಮಿಶನ್ ದ.ಕ.


ಶಾಲಾ ಆವರಣದ ಗೋಡೆಗೆ ಅಳವಡಿಸಿರುವ ತೊಟ್ಟಿಯಿಂದ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುತ್ತಿಲ್ಲ. ಒಂದು ವೇಳೆ ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದಾದರೆ ಗ್ರಾಮ ಪಂಚಾಯತ್ ಸಭೆಯಲ್ಲಿ ನಿರ್ಣಯ ತೆಗೆದು ನೋಟಿಸ್ ನೀಡಿದಲ್ಲಿ ಅದನ್ನು ತೆರವುಗೊಳಿಸಲಾಗುವುದು. - ಎಸ್.ಅಬ್ಬಾಸ್, ಶಾಲಾ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News