ಉಡುಪಿ: ಅಂಗದಾನ ಸಾರ್ವತ್ರಿಕಗೊಳಿಸಲು ಕರೆ
ಉಡುಪಿ, ಜ.30: ಉಡುಪಿ ಜಿಲ್ಲೆಯಲ್ಲಿ ಅಂಗದಾನವನ್ನು ಸಾರ್ವತ್ರಿಕಗೊಳಿಸುವುದಕ್ಕಾಗಿ ಹೊಸ ಉಪಕ್ರಮವೊಂದಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಮುಂದಾಗಿದ್ದಾರೆ. ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಸಹಕಾರದೊಂದಿಗೆ ಇಂದು ಪ್ರತಿ ವ್ಯಕ್ತಿಯ ಬಳಿ ಇರುವ ಚಾಲನಾ ಪರವಾನಿಗೆ (ಡ್ರೈವಿಂಗ್ ಲೈಸೆನ್ಸ್)ಯಲ್ಲಿ ‘ಅಂಗ ದಾನ’ ಪ್ರಸ್ತಾಪವನ್ನು ಮುದ್ರಿಸಲು ಮುಂದಾಗಿದ್ದಾರೆ.
ಜಿಲ್ಲಾಡಳಿತ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಕರ್ನಲ್ ಡಾ.ಎಂ. ದಯಾನಂದ್ ಹಾಗೂ ಬೆಂಗಳೂರಿನ ಗಿಫ್ಟ್ ಯುವರ್ ಆರ್ಗನ್ ಫೌಂಡೇ ಶನ್‌ನ ಸಹಕಾರದೊಂದಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಮನ್ವಯದೊಂದಿಗೆ ಜಿಲ್ಲೆಯಲ್ಲಿ ಅಂಗದಾನದ ಕುರಿತು ಜನರಲ್ಲಿ ಜನಜಾಗೃತಿ ಮೂಡಿಸುವ ಪ್ರಕ್ರಿಯೆಗೆ ಇಂದು ಚಾಲನೆ ನೀಡಲಾಯಿತು. ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜ ಪೇಯಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಈ ‘ಅಂಗದಾನ ಜನ ಜಾಗೃತಿ’ ಕಾರ್ಯಕ್ರಮದಲ್ಲಿ ಡಾ.ವಿಶಾಲ್ ಮಾತ ನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಎಂಸಿಯ ಕರ್ನಲ್ ಡಾ.ಎಂ ದಯಾನಂದ್ ಮಾತನಾಡಿ, ಕೆಎಂಸಿಯಲ್ಲಿ ಈಗಾಗಲೇ ‘ಬ್ರೈನ್ ಡೆಡ್’(ಮೆದುಳು ನಿಷ್ಕೃಿಯ) ನಿಗಾ ಸಮಿತಿ’ ರಚಿಸಲಾಗಿದೆ. ಈ ಸಮಿತಿ ಇನ್ನೂ ಸಾಯದ ಆದರೆ ಮೆದುಳು ನಿಷ್ಕೃಿಯಗೊಂಡ ರೋಗಿಯನ್ನು ಪರಿಶೀಲಿಸಿ ಅಂಗಾಂಗ ದಾನಕ್ಕೆ ಶಿಫಾರಸು ಮಾಡಲಿದೆ. ರೋಗಿ ಅಥವಾ ರೋಗಿಯ ಕುಟುಂಬ ಅನುಮತಿ ನೀಡಿದರೆ ಆ ವ್ಯಕ್ತಿಯ ಅಂಗಾಂಗಳನ್ನು ತುರ್ತು ಅಗತ್ಯವಿರುವ ಇತರ ರೋಗಿಗಳಿಗೆ ಅದನ್ನು ಕಸಿ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಇಬ್ಬರು ಟ್ರಾನ್ಸ್‌ಪ್ಲಾಂಟೇಷನ್ ಕೌನ್ಸಿಲರ್‌ಗಳಿಗೆ ತರಬೇತಿ ನೀಡಿದ್ದು, ಇನ್ನಿಬ್ಬರು ಪುಣೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದರು.
ಬೆಂಗಳೂರಿನ ಗಿಫ್ಟ್ ಯುವರ್ ಆರ್ಗನ್ ಫೌಂಡೇಶನ್‌ನ ನಿರ್ದೇಶಕಿ ಪ್ರಿಯಾಂಕಾ ಶೈಲೇಂದ್ರ ಅಂಗಾಂಗ ದಾನದ ಮಹತ್ವವನ್ನು ವಿವರಿಸಿದರು. ಉಡುಪಿ ಜಿಲ್ಲಾ ಎಸ್ಪಿ ಕೆ.ಅಣ್ಣಾಮಲೈ, ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ರೆಡ್‌ಕ್ರಾಸ್‌ನ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಉಪಸ್ಥಿತರಿದ್ದರು.