×
Ad

ಜಿಲ್ಲೆಯಲ್ಲಿ ಉದ್ದಿಮೆ ಆರಂಭಕ್ಕೆ ಬ್ಯಾಂಕ್‌ಗಳಿಂದ ಪ್ರೋತ್ಸಾಹ: ಕೆ.ಟಿ. ರೈ

Update: 2016-01-31 00:26 IST

ಮಣಿಪಾಲ, ಜ.30: ಕರಾವಳಿಯ ಜನರು ಹೊರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಯಶಸ್ವಿ ಉದ್ಯಮಿಗಳಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಉದ್ಯಮಗಳ ಆರಂಭಕ್ಕೆ ಹೆಚ್ಚಿನ ಉತ್ಸಾಹ ತೋರುತ್ತಿಲ್ಲ. ಜಿಲ್ಲೆಯಲ್ಲಿ ಉದ್ಯಮಗಳನ್ನು ಆರಂಭಿಸುವ ಆಸಕ್ತರಿಗೆ ಬ್ಯಾಂಕ್‌ಗಳು ವಿಶೇಷ ನೆರವು ನೀಡಲು ಸಿದ್ಧವಿದೆ ಎಂದು ಸಿಂಡಿಕೇಟ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಕೆ.ಟಿ. ರೈ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮುಂದಿನ ವಾರ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಉಡುಪಿ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಇಂದು ಮಣಿಪಾಲ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಸಾಫ್ಟವೇರ್ ಪಾರ್ಕ್‌ವೊಂದನ್ನು ಪ್ರಾರಂಭಿಸುವಂತೆ ಸಲಹೆ ನೀಡಿದ ಕೆ.ಟಿ.ರೈ, ಜಿಲ್ಲೆಯಲ್ಲಿ ಗೇರುಬೀಜ ಹಾಗೂ ಗ್ರಾನೈಟ್‌ಗಳನ್ನು ಹೊರತು ಪಡಿಸಿದರೆ ಉಳಿದ ಯಾವುದೇ ವಸ್ತುಗಳು ರಫ್ತಾಗುತ್ತಿಲ್ಲ. ರಫ್ತುದಾರರನ್ನು ಪ್ರೋತ್ಸಾಹಿಸಲು ಮುಂದಿನ ತಿಂಗಳು ಮಣಿಪಾಲದಲ್ಲಿ ಆರ್‌ಬಿಐನ ಸಹಯೋಗದೊಂದಿಗೆ ರಫ್ತುದಾರರ ಸಮಾವೇಶವೊಂದನ್ನು ಆಯೋಜಿಸಲಾಗುವುದು ಎಂದರು.


ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಮಾನಂದ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಚಿತ್ತರಂಜನ್ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಗೇರುಬೀಜ ಉತ್ಪಾದಕರ ಸಂಘದ ಅಧ್ಯಕ್ಷ ಬೋಳ ರಾಹುಲ್ ಕಾಮತ್, ಕೆನರಾ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಂ.ಜಿ.ಪಂಡಿತ್, ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಕೃಷ್ಣರಾವ್ ಕೊಡಂಚ, ಜಿಲ್ಲಾ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷ ಪ್ರಶಾಂತ್ ಹೊಳ್ಳ, ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲಕರ ಸಂಘದ ಅಧ್ಯಕ್ಷ ರಾಜೇಂದ್ರ ಸುವರ್ಣ ಉಪಸ್ಥಿತರಿದ್ದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ರಮೇಶ್‌ಮೂರ್ತಿ ಸ್ವಾಗತಿಸಿದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಕೆ. ಸುಬ್ಬರಾವ್ ವಂದಿಸಿದರು. ಮಂಗಳೂರು ಎಂಎಸ್‌ಎಂಇನ ಸಹಾಯಕ ನಿರ್ದೇಶಕ ಸುಂದರ್ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News