×
Ad

ಇಂದು ಆಸ್ಟ್ರೇಲಿಯ ವಿರುದ್ಧ ಅಂತಿಮ ಟ್ವೆಂಟಿ-20 ಪಂದ್ಯ;ಕ್ಲೀನ್ ಸ್ವೀಪ್ ಧೋನಿ ಪಡೆಯ ಕನಸು

Update: 2016-01-31 00:29 IST

ಸಿಡ್ನಿ, ಜ.30: ಆಸ್ಟ್ರೇಲಿಯ ವಿರುದ್ಧ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಈಗಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿರುವ ಭಾರತ ರವಿವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಗೆಲುವಿನೊಂದಿಗೆ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸುವ ಕನಸು ಕಾಣುತ್ತಿದೆ.
ಆಸ್ಟ್ರೇಲಿಯ ನೆಲದಲ್ಲಿ ಏಕದಿನ ಸರಣಿಯನ್ನು 1-4 ಅಂತರದಲ್ಲಿ ಕಳೆದುಕೊಂಡಿದ್ದ ಭಾರತ ತಂಡ ಟ್ವೆಂಟಿ-20 ಸರಣಿಯಲ್ಲಿ ಆಸ್ಟ್ರೇಲಿಯಕ್ಕೆ ತಿರುಗೇಟು ನೀಡಿದೆ. ಅಡಿಲೇಡ್ ಮತ್ತು ಮೆಲ್ಬೋರ್ನ್‌ನಲ್ಲಿ ನಡೆದ ಎರಡು ಪಂದ್ಯಗಳಲ್ಲಿ ದೊಡ್ಡ ಮೊತ್ತದ ಸವಾಲನ್ನು ಆಸ್ಟ್ರೇಲಿಯಕ್ಕೆ ವಿಧಿಸಿ ಗೆಲುವಿನ ನಗೆ ಬೀರಿದೆ.
 ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುವ ಪಂದ್ಯದಲ್ಲಿ ಭಾರತ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ. ಐದನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಇದೇ ಕ್ರೀಡಾಂಗಣದಲ್ಲಿ ಮನೀಷ್ ಪಾಂಡೆ ದಾಖಲಿಸಿದ ಚೊಚ್ಚಲ ಶತಕದ ನೆರವಿನಲ್ಲಿ ಗೆಲುವು ದಾಖಲಿಸಿತ್ತು. ಆಸ್ಟ್ರೇಲಿಯಕ್ಕೆ ಕ್ಲೀನ್ ಸ್ವೀಪ್ ಅವಕಾಶ ನಿರಾಕರಿಸಿತ್ತು.
 ಟೀಮ್ ಇಂಡಿಯಾದಲ್ಲಿ ಪ್ರಯೋಗ ನಡೆಯುತ್ತಿದೆ. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಿ ಅವರ ಸಾಮರ್ಥ್ಯದ ಪರೀಕ್ಷೆ ನಡೆಸಲಾಗುತ್ತಿದೆ. 2017ರ ಚಾಂಪಿಯನ್ಸ್ ಟ್ರೋಫಿ ಮತ್ತು 2019ರಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ನ್ನು ದೃಷ್ಟಿಯಲ್ಲಿರಿಸಿಕೊಂಡು ಬಲಿಷ್ಠ ತಂಡವನ್ನು ಕಟ್ಟುವ ಪ್ರಯತ್ನ ನಡೆಸಲಾಗುತ್ತಿದೆ.
 ಟ್ವೆಂಟಿ-20 ಸರಣಿಯಲ್ಲಿ ಚೆನ್ನಾಗಿ ಪ್ರದರ್ಶನ ನೀಡುವ ಆಟಗಾರರಿಗೆ ಮುಂಬರುವ ಟ್ವೆಂಟಿ-20 ವಿಶ್ವಕಪ್‌ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ದೊರೆಯಲಿದೆ. ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಭದ್ರಪಡಿಸುವ ಪೈಪೋಟಿ ನಡೆಸುತಿದ್ದಾರೆ.
ಹಿರಿಯ ಆಟಗಾರರಾದ ಯುವರಾಜ್ ಸಿಂಗ್, ಸುರೇಶ್ ರೈನಾ ಎರಡನೆ ಪಂದ್ಯದಲ್ಲಿ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. ಕೊನೆಯ ಪಂದ್ಯದಲ್ಲಿ ತಂಡದಲ್ಲಿ ಪ್ರಯೋಗ ಮಾಡುವ ಸಾಧ್ಯತೆ ಕಡಿಮೆ. ಯಾಕೆಂದರೆ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಗಿಟ್ಟಿಸಿಕೊಳ್ಳಲು ಭಾರತ ಈ ಪಂದ್ಯದಲ್ಲಿ ಗೆಲ್ಲಬೇಕಾಗಿದೆ.
 ಭಾರತಕ್ಕೆ ಆಸ್ಟ್ರೇಲಿಯ ವಿರುದ್ಧದ ಸರಣಿ ಮುಗಿದ ಬಳಿಕ ತವರಲ್ಲಿ ಶ್ರೀಲಂಕಾ ವಿರುದ್ಧ ಟ್ವೆಂಟಿ-20 ಸರಣಿಯನ್ನು ಆಡಲಿದೆ. ಆನಂತರ ಭಾರತ ಏಷ್ಯಾಕಪ್‌ನಲ್ಲಿ ಆಡಲಿದೆ. 2016ರ ಟ್ವೆಂಟಿ-20 ವಿಶ್ವಕಪ್‌ನ ತಯಾರಿಗೆ ಭಾರತಕ್ಕೆ ಸಾಕಷ್ಟು ಅವಕಾಶ ದೊರೆಯಲಿದೆ.
 ಅಜಿಂಕ್ಯ ರಹಾನೆ ಗಾಯದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಪಾಂಡ್ಯ ಇವರ ಬದಲಿಗೆ ಸರಿಯಾದ ಆಯ್ಕೆ. ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರಿಗೆ ಕೊನೆಯ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.
ಆಸ್ಟ್ರೇಲಿಯ : ಶೇನ್ ವ್ಯಾಟ್ಸನ್,(ನಾಯಕ), ಕ್ಯಾಮರೊನ್ ಬ್ಯಾನ್‌ಕ್ರಾಫ್ಟ್, ಸ್ಕಾಟ್ ಬೊಲೆಂಡ್,ಕ್ಯಾಮರೊನ್ ಬೊಯ್ಸಾ, ಟ್ರಾವಿಸ್ ಹೆಡ್, ಜೇಮ್ಸ್ ಫಾಕ್ನರ್, ನಥನ್ ಲಿನ್,ಕ್ರಿಸ್ ಲಿನ್, ಶಾನ್ ಟೇಟ್, ಜೇಮ್ಸ್ ಮಾಕ್ಸ್‌ವೆಲ್, ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್, ಆ್ಯಂಡ್ರೊ ಟಾಯ್.
  ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್,ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಗುರುಕೀರತ್ ಮಾನ್, ರಿಶಿ ಧವನ್, ರವೀಂದ್ರ ಜಡೇಜ, ಆರ್ ಅಶ್ವಿನ್, ಹರ್ಭಜನ್ ಸಿಂಗ್, ಜಸ್ಪ್ರೀತ್ ಬುಮ್ರಾ, ಅಶೀಷ್ ನೆಹ್ರಾ, ಉಮೇಶ್ ಯಾದವ್, ಅಜಿಂಕ್ಯ ರಹಾನೆ.
ಪಂದ್ಯ ಸಮಯ: ಮಧ್ಯಾಹ್ನ 2:08 ಗಂಟೆಗೆ ಆರಂಭ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News