ಮುಂದಿನ ಚುನಾವಣೆಯಲ್ಲಿ ಇವರನ್ನು ಜನ ಮಣ್ಣು ಮುಕ್ಕಿಸುತ್ತಾರೆ ಎಂದು ಮೋದಿ ಬಗ್ಗೆ ಹೇಳಿದ್ದು ಹಿರಿಯ ಬಿಜೆಪಿ ನಾಯಕ !
ದೋನಾ ಪಾಲ (ಗೋವಾ): ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ವಿರುದ್ಧ ಹಿರಿಯ ಬಿಜೆಪಿ ಮುಖಂಡ ಯಶವಂತ ಸಿನ್ಹಾ ವಾಗ್ದಾಳಿ ನಡೆಸಿದ್ದು, "ಮುಂದಿನ ಚುನಾವಣೆ ವರೆಗೆ ಕಾಯಿರಿ. ಭಾರತೀಯರು ಮೋದಿಯನ್ನು ದೂಳೀಪಟ ಮಾಡುತ್ತಾರೆ" ಎಂದು ಭವಿಷ್ಯ ನುಡಿದಿದ್ದಾರೆ.
"ಮೋದಿ ಸರ್ಕಾರದಲ್ಲಿ ಸಂವಾದಕ್ಕೆ ಅವಕಾಶವೇ ಇಲ್ಲ. ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ತುರ್ತು ಪರಿಸ್ಥಿತಿಯ ಬಳಿಕ ನಡೆದ ಚುನಾವಣೆಯಲ್ಲಿ ಆದ ಗತಿಯೇ ಮೋದಿ ಸರ್ಕಾರಕ್ಕೂ ಆಗುತ್ತದೆ" ಎಂದು ಚಾಟಿ ಬೀಸಿದ್ದಾರೆ.
"ಡಿಫಿಕಲ್ಟ್ ಡಯಲಾಗ್ಸ್" ಎಂಬ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಮೋದಿ ಆಡಳಿತಕ್ಕೆ ಬಂದ ಬಳಿಕ ಇತರ ಹಲವು ಮಂದಿ ಹಿರಿಯ ಮುಖಂಡರಂತೆ ಸಿನ್ಹಾ ಕೂಡಾ ಮೂಲೆಗುಂಪಾಗಿದ್ದರು. ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಅವರೂ ಪಾಲ್ಗೊಂಡಿದ್ದರು.
"ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಅವಕಾಶ ಇಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಇದು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿ. ಕೆಲವೊಂದು ಹಂತದಲ್ಲಿ ಸಣ್ಣ ಪುಟ್ಟ ತಡೆಗಳಾಗಿರಬಹುದು. ಇಂದಿನ ಪರಿಸ್ಥಿತಿ ಕಳವಳಕಾರಿ. ಆದರೆ ಭಾರತದ ಶ್ರೇಷ್ಠ ಸಮಾಜ ಇದನ್ನು ಗಮನಿಸುತ್ತದೆ ಹಾಗೂ ಸಂವಾದದಲ್ಲಿ ನಂಬಿಕೆ ಇಲ್ಲದವರನ್ನು ಧೂಳೀಪಟ ಮಾಡುತ್ತದೆ" ಎಂದು ಸಿನ್ಹಾ ವಿವರಿಸಿದರು.
ನೇರವಾಗಿ ಎಲ್ಲೂ ಮೋದಿಯವರ ಹೆಸರನ್ನು ಉಲ್ಲೇಖಿಸದ ಸಿನ್ಹಾ, "ಭಾರತದಲ್ಲಿ ತುರ್ತುಪರಿಸ್ಥಿತಿಗೆ ಜನ ಹೇಗೆ ಸ್ಪಂದಿಸಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಸಮಾಜದ ಧ್ವನಿಯನ್ನು ಅಡಗಿಲು ಪ್ರಯತ್ನಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಜನ ಸೂಕ್ತ ಉತ್ತರ ನೀಡಿದ್ದಾರೆ ಎಂದರು. ಇದೇ ವೇಳೆ ಕಾಂಗ್ರೆಸ್ ವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಸ್ಥಾಯಿ ಸಮಿತಿ ಸಭೆಯಲ್ಲಿ ಸರಕು ಹಾಗೂ ಸೇವಾ ತೆರಿಗೆ ಬಗ್ಗೆ ಆಕ್ಷೇಪವೆತ್ತದ ಕಾಂಗ್ರೆಸ್ ಮುಖಂಡರು ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿರುವುದು ಸರಿಯಲ್ಲ ಎಂದರು.
ವಾಜಪೇಯಿ ಸರ್ಕಾರದ ವೇಳೆ ವಿರೋಧಪಕ್ಷಗಳ ಜತೆಗಿನ ಸಂವಾದದಿಂದಾಗಿ ಹಲವು ಮಸೂದೆಗಳಿಗೆ ಒಪ್ಪಿಗೆ ಪಡೆಯಲು ಸಾಧ್ಯವಾಗಿತ್ತು ಎಂದು ಆ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಸಿನ್ಹಾ ನೆನಪಿಸಿಕೊಂಡರು. ಹಿರಿಯ ಬಿಜೆಪಿ ಮುಖಂಡರಾರ ವಾಜಪೇಯಿ, ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತಿತರರಿಗೆ ಯಾವ ಗೌರವ ಸಿಗಬೇಕಿತ್ತೋ ಅದು ಸಿಗುತ್ತಿಲ್ಲ ಎಂದು ಶತ್ರುಘ್ನ ಸಿನ್ಹಾ ಕೂಡಾ ಪುಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.