×
Ad

ವಿಮಾನ ನಿಲ್ದಾಣದ ಮೇಲೆ ಸಿಐಎಸ್‌ಎಫ್ ಕಣ್ಣು, ಅವರ ಪ್ರೀತಿಯ ಮೇಲೆ ಹಿರಿಯಧಿಕಾರಿಗಳ ಕಣ್ಣು !

Update: 2016-01-31 09:23 IST

ನವದೆಹಲಿ: ದೇಶದ ಅತ್ಯಂತ ಸೂಕ್ಷ್ಮ ವಿಮಾನ ನಿಲ್ದಾಣಗಳಲ್ಲೊಂದಾದ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಹೊಣೆ ಹೊತ್ತಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಇದೀಗ ತನ್ನ ಕಾರ್ಯವ್ಯಾಪ್ತಿಯನ್ನು ಮತ್ತೊಂದು ಕ್ಷೇತ್ರಕ್ಕೆ ವಿಸ್ತರಿಸಿಕೊಂಡಿದೆ. ಅದೆಂದರೆ ತನ್ನ ಸಿಬ್ಬಂದಿಯ ರಹಸ್ಯ ಪ್ರೇಮದ ಬಗ್ಗೆ ನಿಗಾ ವಹಿಸುವುದು!
ಸಹೋದ್ಯೋಗಿಗಳ ಜತೆ ಪ್ರೇಮಪಾಶದಲ್ಲಿ ಸಿಲುಕಿರುವ ಸಿಬ್ಬಂದಿಯ ಅಸಂತುಷ್ಟ ಪತ್ನಿಯರು ನೀಡುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲು ಸಿಐಎಸ್‌ಎಫ್ ಮುಂದಾಗಿದೆ, ಇಂಥ ದೂರುಗಳ ಬಗ್ಗೆ ವಿಚಾರಣೆ ನಡೆಸುವುದು, ಸಿಸಿಟಿವಿ ದೃಶ್ಯಾವಳಿಗಳನ್ನು ಇದಕ್ಕೆ ಸಾಕ್ಷ್ಯವಾಗಿ ಪರಿಗಣಿಸುವುದು ಹಾಗೂ ಗುಪ್ತಚರ ದಳದಿಂದ ಇದಕ್ಕೆ ಸಂಬಂಧಿಸಿದ ಮಾಹಿತಿ ಪಡೆಯುವುದು ಮತ್ತಿತರ ಕ್ರಮಗಳನ್ನೂ ಆರಂಭಿಸಿದೆ ಎಂದು ಮೂಲಗಳು ಹೇಳಿವೆ.
"ಹಲವು ಮಂದಿ ಸಿಬ್ಬಂದಿಯರ ಪತಿ/ಪತ್ನಿಯರು ತಮ್ಮ ಪತ್ನಿ/ಪತಿ ಸಹೋದ್ಯೋಗಿಗಳ ಜತೆ ವಿವಾಹೇತರ ಸಂಬಂಧ ಹೊಂದಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ" ಎಂದು ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದರು. ಇತ್ತೀಚೆಗೆ ಮಧ್ಯವಯಸ್ಕ ಮಹಿಳಾ ಸಿಬ್ಬಂದಿ ಹಾಗೂ ಅವರ ಪುರುಷ ಸಹೋದ್ಯೋಗಿ ತಮ್ಮ ಕರ್ತವ್ಯದ ಅವಧಿಯಲ್ಲಿ ವಿಮಾನ ನಿಲ್ದಾಣ ಕರ್ತವ್ಯ ನಿಭಾಯಿಸದೇ ದೂರದಲ್ಲಿ ಹರಟುತ್ತಾ ಕುಳಿತಿದ್ದ ಘಟನೆ ಬೆಳಕಿಗೆ ಬಂದಿದೆ. ಅವರ ಮೇಲೆ ನಿಗಾ ಇಡಲಾಗಿದೆ ಎಂಬ ಪರಿಜ್ಞಾನ ಅವರಿಗೆ ಇರಲಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದರು.
 ಅವರ ಕುಟುಂಬದಿಂದ ಬಂದ ದೂರಿನ ಮೇರೆಗೆ ಅವರ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು. ಅವರಿಬ್ಬರನ್ನು ಕರೆದು ವಿವರಣೆ ಪಡೆದೆವು. ಆರಂಭದಲ್ಲಿ ಇಂಥ ಸಂಬಂಧವನ್ನು ನಿರಾಕರಿಸಿದರು. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಿದಾಗ ಒಪ್ಪಿಕೊಂಡರು. ಬಳಿಕ ಅವರಿಬ್ಬರನ್ನೂ ವಿಭಿನ್ನ ಸ್ಥಳಗಳಿಗೆ ವರ್ಗಾಯಿಸಲಾಗಿತು. ಆಕೆಯನ್ನು ವಿವಾಹವಾಗಿರುವುದಾಗಿಯೂ ಆತ ವಿಚಾರಣೆ ವೇಳೆ ಒಪ್ಪಿಕೊಂಡ ಎಂದು ವಿವರಿಸಿದರು.
ಕರ್ತವ್ಯದ ಅವಧಿಯಲ್ಲಲ್ಲದೇ ಬೇರೆ ಸಮಯದಲ್ಲಿ ಏನು ಮಾಡುತ್ತಾರೆ ಎಂಬ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಹಲವು ಮಂದಿ ಕರ್ತವ್ಯದ ಅವಧಿಯಲ್ಲೂ ಸಲ್ಲಾಪ ನಡೆಸುತ್ತಿರುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News