ಕೋಲಾ ಜೀವಕ್ಕೆ ಮಾರಕ: ಪರೀಕ್ಷೆಯಿಂದ ದೃಢ

Update: 2016-01-31 04:14 GMT

ನವದೆಹಲಿ: ನಿಮ್ಮ ಜನಪ್ರಿಯ ಪೇಯ ಭಾರತದಲ್ಲಿ ಹೃದ್ರೋಗ, ಮಧುಮೇಹ ಹಾಗೂ ಬೊಜ್ಜಿನಿಂದ ಮೃತಪಡುವ ಪ್ರತಿ 200 ಮಂದಿಯ ಪೈಕಿ ಒಬ್ಬರ ಸಾವಿಗೆ ಕಾರಣವಾಗುತ್ತಿದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
"ಶೇಕಡ 80ರಷ್ಟು ಅಂಥ ಸಾವು ಸಕ್ಕರೆಯುಕ್ತ ಪಾನೀಯಗಳಿಂದ ಸಂಭವಿಸುತ್ತದೆ. ಇದರ ಜತೆಗೆ ಅಧಿಕ ಬೊಜ್ಜು ಹಾಗೂ ಮಧುಮೇಹಕ್ಕೆ ಇದು ಕಾರಣವಾಗುತ್ತಿದೆ" ಎಂದು ಅಮೆರಿಕದ ಟುಫ್ಟ್ಸ್ ವಿಶ್ವವಿದ್ಯಾನಿಲಯದ ಫ್ರೀಡ್‌ಮನ್ ಸ್ಕೂಲ್ ಆಫ್ ನ್ಯೂಟ್ರಿಷನ್‌ನ ಡೀನ್ ಹಾಗೂ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ದರಿಯುಷ್ ಮೊಜಾಫ್ರಿಯನ್ ಹೇಳಿದ್ದಾರೆ. ಉಳಿದ ಶೇಕಡ 15ರಷ್ಟು ಮಂದಿಗೆ ಇದು ಹೃದ್ರೋಗಕ್ಕೆ ಕಾರಣವಾಗುತ್ತಿದೆ ಎಂದು ವಿವರಿಸಿದ್ದಾರೆ.
ಹೃದ್ರೋಗ ಹಾಗೂ ಮಧುಮೇಹ ಭಾರತದಲ್ಲಿ ಸಾಂಕ್ರಾಮಿಕ ರೋಗದ ಮಟ್ಟಕ್ಕೆ ಬೆಳೆದಿದ್ದು, ದೇಶದಲ್ಲಿ ಶೇಕಡ 28ರಷ್ಟು ಸಾವಿಗೆ ಇದು ಕಾರಣವಾಗುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ಬೊಜ್ಜು ಸಮಸ್ಯೆಯಿಂದ ಬಳಲುವ ಪುರುಷರ ಸಂಖ್ಯೆ ದ್ವಿಗುಣಗೊಂಡಿದ್ದು, ಮಹಿಳೆಯರ ಸಂಖ್ಯೆ ಒಂದೂವರೆ ಪಟ್ಟು ಹೆಚ್ಚಿದೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಲಘುಪಾನೀಯ ಸೇವಿಸುವುದು ಕೂಡಾ ತೊಂದರೆಗೆ ಕಾರಣವಾಗುತ್ತದೆ ಎಂದು ಅಧ್ಯಯನ ಹೇಳಿದೆ. ದಿನಕ್ಕೆ ಎರಡು ಬಾರಿ ಇಂಥ ಲಘುಪಾನೀಯ ಸೇವಿಸುವವರು ಮಧುಮೇಹಕ್ಕೆ ತುತ್ತಾಗುವ ಸಂಭವ ಶೇಕಡ 26ರಷ್ಟು ಅಧಿಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News