ರೋಹಿತ್ ವೆಮುಲಾ ದಲಿತ ಅಲ್ಲ: ಸುಷ್ಮಾ
ನವದೆಹಲಿ: ಹೈದ್ರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ದಲಿತ ಅಲ್ಲ ಎನ್ನುವ ಮೂಲಕ ವಿದೇಶಾಂಗ ವ್ಯವಹಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ.
"ಈ ಪ್ರಕರಣದಲ್ಲಿ ಸತ್ಯ ಹೊರಬಂದಿದೆ. ನನ್ನ ಸಂಪೂರ್ಣ ಜ್ಞಾನದ ಪ್ರಕಾರ, ಆ ವಿದ್ಯಾರ್ಥಿ ದಲಿತ ಅಲ್ಲ. ಆತನನ್ನು ದಲಿತ ವಿದ್ಯಾರ್ಥಿ ಎಂದು ಕರೆಯುವ ಮೂಲಕ ಇಡೀ ವಿವಾದವನ್ನು ಕೋಮು ಘಟನೆಯಾಗಿ ಕೆಲ ವ್ಯಕ್ತಿಗಳು ತಿರುಚಿದ್ದಾರೆ" ಎಂದು ಸುಷ್ಮಾ ಹೇಳಿದ್ದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದಕ್ಕೂ ಮುನ್ನ ಗುರುವಾರ ರಹಸ್ಯ ಗುಪ್ತಚರ ವರದಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೇವಲ್‌ಗೆ ವರ್ಗಾಯಿಸಲಾಗಿದ್ದು, ಈ ವರದಿಯಲ್ಲಿ ರೋಹಿತ್‌ನ ಅಜ್ಜಿ ರಾಘವಮ್ಮ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. "ನನ್ನ ಮಗ (ರೋಹಿತ್‌ನ ತಂದೆ ವಿ.ಮಣಿಕುಮಾರ್) ಹಾಗೂ ಸೊಸೆ (ರೋಹಿತ್ ತಾಯಿ ವಿ. ರಾಧಿಕಾ) ವಡೇರ ಸಮುದಾಯಕ್ಕೆ ಸೇರಿದವರಾಗಿದ್ದು, ಇದು ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯ" ಎಂದು ಅವರು ಪ್ರತಿಪಾದಿಸಿದ್ದಾರೆ.
ಎಬಿವಿಪಿ ಮುಖಂಡರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಿಂದ ರೋಹಿತ್ ಹಾಗೂ ಇತರ ಐವರು ವಿದ್ಯಾರ್ಥಿಗಳನ್ನು 2015ರ ಆಗಸ್ಟ್‌ನಲ್ಲಿ ಅಮಾನತು ಮಾಡಲಾಗಿತ್ತು. ವೆಮುಲಾ ಆತ್ಮಹತ್ಯೆ ಘಟನೆಯಿಂದ ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯ ಈಗಾಗಲೇ ಉಳಿದ ನಾಲ್ಕು ಮಂದಿಯ ಅಮಾನತು ಆದೇಶವನ್ನು ವಾಪಾಸು ಪಡೆದಿದೆ.