ಟ್ವೆಂಟಿ-20 ಸರಣಿ: ಭಾರತಕ್ಕೆ ಐತಿಹಾಸಿಕ ಗೆಲುವು
ಆಸೀಸ್ ವಿರುದ್ಧ 3-0 ಜಯ, ವ್ಯಾಟ್ಸನ್ ಶತಕ ವ್ಯರ್ಥ, ಕೊಹ್ಲಿ ಸರಣಿ ಶ್ರೇಷ್ಠ
ಸಿಡ್ನಿ, ಜ.31: ರೋಹಿತ್ ಶರ್ಮ(52),ವಿರಾಟ್ ಕೊಹ್ಲಿ(50) ಹಾಗೂ ಸುರೇಶ್ ರೈನಾ(ಔಟಾಗದೆ 49) ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಮೂರನೆ ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಸಿಡ್ನಿಯಲ್ಲಿ ಭಾರತ ಆಸ್ಟ್ರೇಲಿಯ ನೆಲದಲ್ಲಿ ಆಸ್ಟ್ರೇಲಿಯದ ವಿರುದ್ಧ ಮೊದಲ ಬಾರಿ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿ ಇತಿಹಾಸ ಬರೆಯಿತು. ಮಾತ್ರವಲ್ಲ ಟ್ವೆಂಟಿ-20 ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇದೀಗ ಭಾರತ ಟೆಸ್ಟ್ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವಿಶ್ವದ ಅಗ್ರಮಾನ್ಯ ತಂಡವಾಗಿದೆ.
ರವಿವಾರ ಇಲ್ಲಿ ನಡೆದ ಮೂರನೆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ಹಂಗಾಮಿ ನಾಯಕ ಶೇನ್ ವ್ಯಾಟ್ಸನ್(ಔಟಾಗದೆ 124) ಅವರ ಏಕಾಂಗಿ ಹೋರಾಟದ ಬೆಂಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 197 ರನ್ ಗಳಿಸಿತು.
ಗೆಲ್ಲಲು ಕಠಿಣ ಸವಾಲನ್ನು ಪಡೆದಿದ್ದ ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ(52 ರನ್, 38 ಎಸೆತ, 5 ಬೌಂಡರಿ, 1 ಸಿಕ್ಸರ್), ವಿರಾಟ್ ಕೊಹ್ಲಿ(50 ರನ್, 36 ಎಸೆತ, 2 ಬೌಂಡರಿ, 1 ಸಿಕ್ಸರ್) ಹಾಗೂ ಸುರೇಶ್ ರೈನಾ(ಔಟಾಗದೆ 49, 25 ಎಸೆತ, 6 ಬೌಂಡರಿ, 1 ಸಿಕ್ಸರ್) ಅಮೂಲ್ಯ ಕಾಣಿಕೆ ನೀಡಿ ತಂಡದ ಗೆಲುವನ್ನು ಸುಲಭವಾಗಿಸಿದರು.
ಭಾರತಕ್ಕೆ 12 ಎಸೆತಗಳಲ್ಲ್ಲಿ ಗೆಲುವಿಗೆ 22 ರನ್ ಅಗತ್ಯವಿತ್ತು. 19ನೆ ಓವರ್ ಎಸೆದಿದ್ದ ವ್ಯಾಟ್ಸನ್ ಕೇವಲ 5 ರನ್ ನೀಡಿದರು. ಆಗ ಭಾರತಕ್ಕೆ ಅಂತಿಮ ಓವರ್‌ನಲ್ಲಿ 17 ರನ್ ಅಗತ್ಯವಿತ್ತು. ಕೊನೆಯ ಓವರ್ ಎಸೆದ ಆ್ಯಂಡ್ರೂ ಟೇಯ್ ಎಸೆತದಲ್ಲಿ ಬೌಂಡರಿ, ಸಿಕ್ಸರ್ ಸಿಡಿಸಿದ ಯುವಿ ಆಸೀಸ್‌ಗೆ ಆಘಾತ ನೀಡಿದರು. ಕೊನೆಯ ಎಸೆತದಲ್ಲಿ 2 ರನ್ ಅಗತ್ಯವಿದ್ದಾಗ ಬೌಂಡರಿ ಸಿಡಿಸಿದ ರೈನಾ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಮೊದಲ ವಿಕೆಟ್‌ಗೆ 46 ರನ್ ಸೇರಿಸಿದ ರೋಹಿತ್ ಹಾಗೂ ಧವನ್(26) ಭಾರತಕ್ಕೆ ಉತ್ತಮ ಆರಂಭ ನೀಡಿದರು. ಧವನ್ ನಿರ್ಗಮನದ ಬಳಿಕ ಜೊತೆಯಾದ ರೋಹಿತ್ ಹಾಗೂ ವಿರಾಟ್ ಕೊಹ್ಲಿ 2ನೆ ವಿಕೆಟ್‌ಗೆ 78 ರನ್ ಸೇರಿಸಿ ತಂಡವನ್ನು ಆಧರಿಸಿದರು. 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 53 ರನ್ ಸೇರಿಸಿದ ಎಡಗೈ ದಾಂಡಿಗರಾದ ರೈನಾ ಹಾಗೂ ಯುವರಾಜ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಈಗಾಗಲೇ ಮೊದಲೆರಡು ಪಂದ್ಯಗಳನ್ನು ಜಯಿಸಿದ್ದ ಭಾರತ 3-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿತು. ಆಸ್ಟ್ರೇಲಿಯ ತವರು ನೆಲದಲ್ಲಿ ವೈಟ್‌ವಾಶ್ ಅನುಭವಿಸಿತು.
ಸರಣಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಶೇನ್ ವ್ಯಾಟ್ಸನ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರೆಯಿತು.
ಆಸ್ಟ್ರೇಲಿಯ 197/5: ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಸಿಡಿಸಿದ ಚೊಚ್ಚಲ ಶತಕದ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 197 ರನ್ ಗಳಿಸಿತು.
ವ್ಯಾಟ್ಸನ್ 71 ಎಸೆತಗಳಲ್ಲಿ 10 ಬೌಂಡರಿ ಹಾಗೂ ಆರು ಸಿಕ್ಸರ್‌ಗಳ ಸಹಿತ 124 ರನ್ ಗಳಿಸಿದರು. ಇದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ದಾಖಲಾದ ಎರಡನೆ ಗರಿಷ್ಠ ವೈಯಕ್ತಿಕ ಸ್ಕೋರ್. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಇನಿಂಗ್ಸ್‌ನ 3ನೆ ಓವರ್‌ನಲ್ಲಿ ಆರಂಭಿಕ ದಾಂಡಿಗ ಉಸ್ಮಾನ್ ಖ್ವಾಜಾ(14) ಭಾರತದ ಯುವ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಔಟಾದರು.
ಭಾರತದ ಬೌಲರ್‌ಗಳು ಇನಿಂಗ್ಸ್‌ನ ಉದ್ದಕ್ಕೂ ಹಲವಾರು ಫುಲ್‌ಟಾಸ್ ಎಸೆದು ಕೈ ಸುಟ್ಟುಕೊಂಡರು. ಶಾನ್ ಮಾರ್ಷ್(9) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(03) ಅಲ್ಪ ಮೊತ್ತಕ್ಕೆ ಔಟಾದರು. ಆಸ್ಟ್ರೇಲಿಯ 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿತ್ತು. ಉಳಿದ 10 ಓವರ್‌ಗಳಲ್ಲಿ 117 ರನ್ ಗಳಿಸಿ ಸ್ಪರ್ಧಾತ್ಮಕ ಸ್ಕೋರ್ ದಾಖಲಿಸಿತು.
56ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ಅವರಿಂದ ಜೀವದಾನ ಪಡೆದಿದ್ದ ವ್ಯಾಟ್ಸನ್ ಔಟಾಗದೆ 124 ರನ್ ಗಳಿಸಿದರು. ಎಂಎಸ್ ಧೋನಿ ಆರು ಬೌಲರ್‌ಗಳನ್ನು ದಾಳಿಗಿಳಿಸಿದರು. ಈ ಪೈಕಿ ಐವರು ತಲಾ 1 ವಿಕೆಟ್ ಕಬಳಿಸಿದರು. ಸ್ಕೋರ್ ವಿವರ
ಆಸ್ಟ್ರೇಲಿಯ: 20 ಓವರ್‌ಗಳಲ್ಲಿ 197/5
ಉಸ್ಮಾನ್ ಖ್ವಾಜಾ ಸಿ ಧೋನಿ ಬಿ ನೆಹ್ರಾ 14
ಶೇನ್ ವ್ಯಾಟ್ಸನ್ ಔಟಾಗದೆ 124
ಶಾನ್ ಮಾರ್ಷ್ ಬಿ ಅಶ್ವಿನ್ 09
ಮ್ಯಾಕ್ಸ್‌ವೆಲ್ ಸಿ ರೈನಾ ಬಿ ಯುವರಾಜ್ 03
ಹೆಡ್ ಬಿ ಜಡೇಜ 26
ಲಿನ್ ಸಿ ಜಡೇಜ ಬಿ ಬುಮ್ರಾ 13
ಬ್ಯಾನ್‌ಕ್ರಾಫ್ಟ್ ಔಟಾಗದೆ 00
ಇತರ 08
ವಿಕೆಟ್ ಪತನ: 1-16, 2-69, 3-75, 4-168
ಬೌಲಿಂಗ್ ವಿವರ:
ಆಶೀಷ್ ನೆಹ್ರಾ 4-0-32-1
ಜಸ್ಪ್ರೀತ್ ಬುಮ್ರಾ 4-0-43-1
ಆರ್. ಅಶ್ವಿನ್ 4-0-36-1
ರವೀಂದ್ರ ಜಡೇಜ 4-0-41-1
ಯುವರಾಜ್ ಸಿಂಗ್ 2-0-19-1
ಹಾರ್ದಿಕ್ ಪಾಂಡ್ಯ 2-0-24-0
ಭಾರತ: 20 ಓವರ್‌ಗಳಲ್ಲಿ 200/3
ರೋಹಿತ್ ಶರ್ಮ ಸಿ ವ್ಯಾಟ್ಸನ್ ಬಿ ಬಾಯ್ಸಾ 52
ಶಿಖರ್ ಧವನ್ ಸಿ ಬ್ಯಾನ್‌ಕ್ರಾಫ್ಟ್ ಬಿ ವ್ಯಾಟ್ಸನ್ 26
ವಿರಾಟ್ ಕೊಹ್ಲಿ ಬಿ ಬಾಯ್ಸಿ 50
ಸುರೇಶ್ ರೈನಾ ಔಟಾಗದೆ 49
ಯುವರಾಜ್ ಸಿಂಗ್ ಔಟಾಗದೆ 15
ಇತರ 08
ವಿಕೆಟ್ ಪತನ: 1-46, 2-124, 3-147
ಬೌಲಿಂಗ್ ವಿವರ:
ಶಾನ್ ಟೇಟ್ 4-0-46-0
ಬೊಲೆಂಡ್ 3-0-34-0
ವ್ಯಾಟ್ಸನ್ 4-0-30-1
ಟಾಯ್ 4-0-51-0
ಬಾಯ್ಸ 4-0-28-2
ಮ್ಯಾಕ್ಸ್‌ವೆಲ್ 1-0-10-0
ಪಂದ್ಯಶ್ರೇಷ್ಠ: ಶೇನ್ ವ್ಯಾಟ್ಸನ್
ಸರಣಿಶ್ರೇಷ್ಠ: ವಿರಾಟ್ ಕೊಹ್ಲಿ