ಡಿಜಿಟಲ್ ಇಂಡಿಯಾದ ವಿರುದ್ಧ ರಾಹುಲ್ ಗಾಂಧಿ ಕಿಡಿ
ಹೊಸದಿಲ್ಲಿ, ಜ.31: ಪ್ರಧಾನಿ ನರೇಂದ್ರ ಮೋದಿಯವರ ‘ಡಿಜಿಟಲ್ ಇಂಡಿಯಾ’ ಕಾರ್ಯಕ್ರಮವನ್ನು ರವಿವಾರ ಟೀಕಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ, ಮುಕ್ತ ಅಂತರ್ಜಾಲ ವ್ಯವಸ್ಥೆ (ನೆಟ್ ನ್ಯೂಟ್ರಾಲಿಟಿ) ಯನ್ನು ಬಲವಾಗಿ ಬೆಂಬಲಿಸಿದ್ದಾರೆ.
ಅಂತರ್ಜಾಲದ ಸ್ವಾತಂತ್ರವನ್ನು ಕಾಂಗ್ರೆಸ್ ಸದಾ ಬೆಂಬಲಿಸುತ್ತಲೇ ಬಂದಿದೆ. ಇಂಟರ್ ಸೇವಾ ಪೂರೈಕೆದಾರರು (ಐಎಸ್‌ಪಿಗಳು)/ಟೆಲಿಕಾಂ ಸೇವಾ ಪೂರೈಕೆದಾರರು (ಟಿಎಸ್‌ಪಿ) ಹಾಗೂ ಕೇಂದ್ರ ಸರಕಾರವು ಅಂತರ್ಜಾಲದ ಎಲ್ಲಾ ದತ್ತಾಂಶ (ಡೇಟಾ)ಗಳನ್ನು ಸರಿಸಮಾನವಾಗಿ ಪರಿಗಣಿಸಬೇಕು. ಇಂಟರ್‌ನೆಟ್‌ನಲ್ಲಿರುವ ಎಲ್ಲಾ ವೆಬ್‌ಸೈಟ್‌ಗಳನ್ನು ಸಮಾನವಾಗಿ ಪರಿಗಣಿಸಬೇಕೆಂಬುದೇ, ಮುಕ್ತಜಾಲ ಅಂತರ್ಜಾಲ(ನೆಟ್ ನ್ಯೂಟ್ರಾಲಿಟಿ) ನೀತಿಯ ಉದ್ದೇಶವಾಗಿದೆ ಎಂದು ರಾಹುಲ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ,.
ದೇಶದಲ್ಲಿ ಅಂತಾರ್ಜಾಲ ವ್ಯವಸ್ಥೆ, ಅನತಿ ದೂರದ ಬೃಹತ್ ಕಾರ್ಪೊರೇಟ್ ಕಂಪೆನಿಗಳ ನಿಯಂತ್ರಣದಲ್ಲಿರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆ ಯಶಸ್ವಿಯಾಗದು ಎಂದವರು ಹೇಳಿದ್ದಾರೆ.
ಇಂಟರ್‌ನೆಟ್ ಆಧಾರಿತ ಕರೆಗಳಿಗೆ ಪ್ರತ್ಯೇಕ ಶುಲ್ಕಗಳನ್ನು ವಿಧಿಸಲು, ದೂರವಾಣಿ ಸೇವಾಸಂಸ್ಥೆ ಏರ್‌ಟೆಲ್ ಈ ಹಿಂದೆ ನಿರ್ಧರಿಸಿತ್ತು. ಆದರೆ ಅದನ್ನು ಜನರು ತೀವ್ರವಾಗಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಅದು ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು. ‘ಏರ್‌ಟೆಲ್ ಝೀರೋ’ ಹಾಗೂ ಫೇಸ್‌ಬುಕ್‌ನ ಉಚಿತ ಇಂಟರ್‌ನೆಟ್ ಸೇವೆ ಫ್ರೀ ಬೇಸಿಕ್ಸ್ ಯೋಜನೆಗಳಿಗೂ ಇಂಟರ್‌ನೆಟ್ ಚಳವಳಿಗಾರರು ಹಾಗೂ ತಜ್ಞರಿಂದ ವಿರೋಧ ವ್ಯಕ್ತವಾಗಿದೆ.
‘‘ ಇಂಟರ್‌ನೆಟ್ ಬಳಕೆದಾರರು, ತಮಗೆ ಬೇಕಾದ ವೆಬ್‌ಸೈಟ್ ಅಥವಾ ಸೇವೆಯೊಂದಿಗೆ ಸಂಪರ್ಕವನ್ನು ಹೊಂದಲು ಮುಕ್ತವಕಾಶ ದೊರೆಯಬೇಕೆಂಬುದೇ ಕಾಂಗ್ರೆಸ್ ಪಕ್ಷ ಹಾಗೂ ನನ್ನ ನಂಬಿಕೆಯಾಗಿದೆ. ಇಂಟರ್‌ನೆಟ್ ಸೇವೆಗಳನ್ನು ವಿಭಜಿಸುವ ಮೂಲಕ ಸಾರ್ವಜನಿಕ ಇಂಟರ್‌ನೆಟ್‌ನ್ನು ಖಾಸಗಿ ವೇದಿಕೆಗೆ ಒಪ್ಪಿಸುವುದರಿಂದ ಉಂಟಾಗುವ ಅಪಾಯದ ಅರಿವು ನಮಗಿದೆ’’ಯೆಂದು ರಾಹುಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪದೇ ಪದೇ ಚರ್ಚೆಯನ್ನು ನಡೆಸುವ ನೆಪದಲ್ಲಿ ಕೇಂದ್ರ ಸರಕಾರವು ಮುಕ್ತ ಅಂತರ್ಜಾಲ ನೀತಿಯನ್ನು ರೂಪಿಸಲು ವಿಳಂಬಿಸುತ್ತಿದೆಯೆಂದು ರಾಹುಲ್ ಆಪಾದಿಸಿದರು.ಮುಕ್ತ ಅಂತರ್ಜಾಲ ನೀತಿ, ಫ್ರೀಬೇಸಿಕ್ಸ್ ಹಾಗೂ ವಿಭಿನ್ನ ಡಾಟಾ ದರ ನಿಗದಿ ಯೋಜನೆಗಳ ಬಗ್ಗೆ ಉತ್ತರಿಸುವಂತೆ ಗ್ರಾಹಕರಿಂದ ಎರಡೆರಡು ಬಾರಿ ಅಭಿಪ್ರಾಯಗಳನ್ನು ಕೇಳಿದ ಭಾರತೀಯ ಟೆಲಿಕಾಂ ಪ್ರಾಧಿಕಾರದ ಕ್ರಮವನ್ನು ಅವರು ಖಂಡಿಸಿದರು.