ಮೋದಿ ವಿರುದ್ಧ ಹೇಳಿಕೆ: ಉಲ್ಟಾ ಹೊಡೆದ ಬಿಜೆಪಿ ನಾಯಕ ಯಶವಂತ್ ಸಿನ್ಹಾ
ಹೊಸದಿಲ್ಲಿ,ಜ.31: ದೇಶದಲ್ಲಿ ಚರ್ಚೆಗೆ ಅವಕಾಶವೇ ಇಲ್ಲದ ಕುರಿತು ಶನಿವಾರ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದ ಮತ್ತು ನರೇಂದ್ರ ಮೋದಿಯವರಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಗತಿಯೇ ಬರಲಿದೆ ಎಂದು ಹೇಳಿದ್ದ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಅವರು, ತಾನು ಇಂತಹ ಹೇಳಿಕೆಗಳನ್ನು ನೀಡಿಯೇ ಇಲ್ಲ ಎಂದು ರವಿವಾರ ಇಲ್ಲಿ ಪ್ರತಿಪಾದಿಸಿದರು. ತನ್ನನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಅವರು ಸಮಜಾಯಿಷಿ ನೀಡಿದರು.
ಕೆಲವರು ಅಸಹಿಷ್ಣುತೆಯ ಕೆಲವು ಪ್ರಕರಣಗಳನ್ನು ಪ್ರಸ್ತಾಪಿಸಿದಾಗ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ನಾನು ಅವರಿಗೆ ನೆನಪಿಸಿದ್ದೆ. ಅಸಹಿಷ್ಣುತೆ ನಮ್ಮ ಸಂಸೃತಿಯಲ್ಲ,ಹೀಗಾಗಿ ಈ ದೇಶದ ಜನರು 1977ರಲ್ಲಿ ಇಂದಿರಾ ಗಾಂಧಿಯವರಿಗೆ ಪಾಠವನ್ನು ಕಲಿಸಿದ್ದರು. ಚರ್ಚೆಯ ಧ್ವನಿಯನ್ನಡಗಿಸುವುದು ನಮ್ಮ ಗುಣವಲ್ಲ, ಮತ್ತು ಹೀಗಾಗಿಯೇ ನಮ್ಮ ಪ್ರಜಾಪ್ರಭುತ್ವ ಮತ್ತು ಚರ್ಚೆ ಜೀವಂತವಾಗಿವೆ. ಇದನ್ನೇ ನಾನು ಹೇಳಿದ್ದೆ ಎಂದು ಸಿನ್ಹಾ ಸುದ್ದಿಸಂಸ್ಥೆಗೆ ತಿಳಿಸಿದರು.
ಶನಿವಾರವಷ್ಟೇ ಸಿನ್ಹಾ ಗೋವಾದಲ್ಲಿ ‘ಕಠಿಣ ಮಾತುಕತೆಗಳು’ ಸಮಾವೇಶದಲ್ಲಿ ತನ್ನನ್ನು ಮತ್ತು ಎಲ್.ಕೆ.ಅಡ್ವಾಣಿ ಮತ್ತು ಎಂ.ಎಂ.ಜೋಶಿ ಸೇರಿದಂತೆ ಇತರ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿರುವ ಮೋದಿ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.
ದೇಶದಲ್ಲಿಂದು ಚರ್ಚೆಗೆ ಅವಕಾಶವೇ ಇಲ್ಲ. ಭಾರತದ ಜನತೆ ಮೋದಿಯವರನ್ನು ಧೂಳೀಪಟ ಮಾಡಲಿದ್ದಾರೆ, ಇದಕ್ಕಾಗಿ ಮುಂದಿನ ಚುನಾವಣೆಯವರೆಗೆ ಕಾಯಬೇಕಷ್ಟೇ ಎಂದು ಪ್ರಧಾನಿಯವರ ಹೆಸರೆತ್ತದೆ ಸಿನ್ಹಾ ಕಿಡಿ ಕಾರಿದ್ದರು.