ಅರುಣಾಚಲ ಪ್ರದೇಶದ ಪ್ರಕರಣಗಳು ಎನ್‌ಐಎ ಅಥವಾ ಸಿಬಿಐಗೆ ಹಸ್ತಾಂತರ: ರಾಜ್ಯಪಾಲ
ಇಟಾನಗರ, ಜ.31: ರಾಜ್ಯದಲ್ಲಿಯ ಕೆಲವು ಪ್ರಕರಣಗಳನ್ನು ಸಿಬಿಐ ಅಥವಾ ಎನ್‌ಐಎ ತನಿಖೆಗೆ ತಾನು ಶೀಘ್ರವೇ ಶಿಫಾರಸು ಮಾಡುವುದಾಗಿ ಅರುಣಾಚಲ ಪ್ರದೇಶದ ರಾಜ್ಯಪಾಲ ಜ್ಯೋತಿಪ್ರಸಾದ್ ರಾಜಖೋವಾ ಅವರು ಹೇಳಿದ್ದಾರೆ.
ಶನಿವಾರ ರಾಜಭವನದಲ್ಲಿ ತನ್ನನ್ನು ಭೇಟಿಯಾಗಿದ್ದ ಜನ ಆಂದೋಲನ ಸಮಿತಿ ಮತ್ತು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ವಿಷಯವನ್ನು ತಿಳಿಸಿದರು.
ಆಡಳಿತವನ್ನು ಹಳಿ ತಪ್ಪಿಸಿದ್ದ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಕುಸಿತಕ್ಕೆ ಕಾರಣರಾಗಿದ್ದ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮಗಳನ್ನು ಆರಂಭಿಸಲಾಗಿದೆ ಎಂದು ರಾಜಭವನವು ರಾಜ್ಯಪಾಲರನ್ನು ಉಲ್ಲೇಖಿಸಿ ರವಿವಾರ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ. ರಾಷ್ಟ್ರಪತಿ ಆಡಳಿತವನ್ನು ಹೇಳಿಕೆಯಲ್ಲಿ ಪ್ರಸ್ತಾಪಿಸಿರುವ ರಾಜ್ಯಪಾಲರು, ಅದೊಂದು ತುರ್ತು ಮತ್ತು ತಾತ್ಕಾಲಿಕ ಕ್ರಮವಾಗಿದೆಯಷ್ಟೇ. ಶೀಘ್ರವೇ ಅಥವಾ ನಂತರ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.
ಅಲ್ಲಿಯವರೆಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕಾಗಿದೆ. ಉತ್ತಮ ಆಡಳಿತವನ್ನೂ ನಾವು ನೀಡಬೇಕಾಗಿದೆ ಮತ್ತು ರಾಜ್ಯದಲ್ಲಿ ಆಡಳಿತದ ಮೇಲೆ ದುಷ್ಪರಿಣಾಮ ಬೀರಿರುವ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿದೆ ಎಂದಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಂತೆ ಮತ್ತು ಇದೇ ವೇಳೆ ಜನರೊಂದಿಗೆ ವ್ಯವಹರಿಸುವಾಗ ಮಾನವೀಯತೆಯನ್ನು ಪ್ರದರ್ಶಿಸುವಂತೆ ಭದ್ರತಾ ಪಡೆಗಳಿಗೆ ಸಂದೇಶವನ್ನು ನೀಡಲಾಗಿದೆ ಎಂದು ರಾಜಖೋವಾ ತಿಳಿಸಿದ್ದಾರೆ.