ರಾಮ್‌ದೇವ್ ‘ಪುತ್ರಜೀವಕ ಬೀಜ’ಕ್ಕೆ ಸಂಚಕಾರ: ತನಿಖಾ ವರದಿಯಲ್ಲಿ ಆಕ್ಷೇಪ
ಡೆಹರಾಡೂನ್,ಜ.31: ಬಾಬಾ ರಾಮದೇವ್ ಅವರ ಫಾರ್ಮಸಿಯು ತಯಾರಿಸಿರುವ ವಿವಾದಾತ್ಮಕ ಫಲವತ್ತತೆ ಔಷಧಿ ‘ಪುತ್ರಜೀವಕ ಬೀಜ’ದ ಪರೀಕ್ಷಾರ್ಥ ಉತ್ತರಾಖಂಡ್ ಸರಕಾರವು ರಚಿಸಿದ್ದ ವಿಚಾರಣಾ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ್ದು, ಇದು ಯೋಗ ಗುರುವಿನ ಪರವಾಗಿಲ್ಲ. ಪುತ್ರಜೀವಕ ಬೀಜದ ಕುರಿತಂತೆ ಈ ವರದಿಯು ಋಣಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಗಂಡುಮಗುವಿನ ಜನನದ ಭರವಸೆ ನೀಡುತ್ತದೆ ಎನ್ನಲಾಗಿರುವ ಈ ಆಯುರ್ವೇದ ಉತ್ಪಾದನೆಯ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ಸರಕಾರವು ಕಳೆದ ವರ್ಷ ರಚಿಸಿತ್ತು. ಸಮಿತಿಯ ವರದಿಯನ್ನು ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಸಲ್ಲಿಸಲಾಗಿದ್ದು,ಅವರು ಹಸಿರು ನಿಶಾನೆ ತೋರಿಸಿದ ನಂತರ ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು ಎಂದು ಉತ್ತರಾಖಂಡ್‌ನ ಪ್ರಧಾನ ಕಾರ್ಯದರ್ಶಿ(ಆರೋಗ್ಯ) ಓಂ ಪ್ರಕಾಶ ತಿಳಿಸಿದರು. ವರದಿಯಲ್ಲಿನ ಹೆಚ್ಚಿನ ವಿವರಗಳನ್ನು ನೀಡಲು ಅವರು ನಿರಾಕರಿಸಿದರು.
ರಾಮದೇವ್ ಅವರು ತನ್ನ ಔಷಧಿಯ ಕುರಿತು ಆರೋಪಗಳನ್ನು ತಳ್ಳಿ ಹಾಕಿದ್ದು,ಅದು ಮಹಿಳೆಯರ ಫಲವತ್ತತೆಯ ಚಿಕಿತ್ಸೆಯಲ್ಲಿ ನೆರವಾಗುತ್ತದೆ ಎಂದು ಹೇಳಿದ್ದರಲ್ಲದೆ, ಅದು ಗಂಡು ಮಗುವಿನ ಜನನದ ಭರವಸೆ ನೀಡುತ್ತದೆ ಎಂಬ ವರದಿಗಳು ‘ಶುದ್ಧ ಸುಳ್ಳು ಮತ್ತು ದಾರಿ ತಪ್ಪಿಸುವ’ಅಪಪ್ರಚಾರವಾಗಿವೆ ಎಂದು ಪ್ರತಿಪಾದಿಸಿದ್ದರು.