ಕೊಣಾಜೆ; ಪುರುಷಕೋಡಿ ರಸ್ತೆ ಅವ್ಯವಸ್ಥೆ ನಾಗರಿಕರಿಂದ ಚುನಾವಣಾ ಬಹಿಷ್ಕಾರಕ್ಕೆ ತೀರ್ಮಾನ
ಕೊಣಾಜೆ: ಕೊಣಾಜೆಯ ಮಂಗಳೂರು ವಿವಿ ಬಳಿಯಿಂದ ಪುರುಷಕೋಡಿಗೆ ತೆರಳುವ ರಸ್ತೆಯು ಕಳೆದ ಹಲವಾರು ವರ್ಷಗಳಿಂದ ಹದಗೆಟ್ಟು ಹೋಗಿದ್ದು ಈ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಕೊಟ್ಟಿದ್ದರೂ ಯಾರೂ ಸ್ಪಂದಿಸದೇ ಇರುವ ಪರಿಣಾಮ ಕೊಣಾಜೆ ಪುರುಷಕೋಡಿಯ ನಾಗರಿಕರು ಒಟ್ಟು ಸೇರಿ ಫೆ.8 ರಂದು ಸೋಮವಾರ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು ಅಲ್ಲದೆ ಮುಂಬರುವ ಜಿ.ಪಂ. ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಸುಮಾರು 65ಕ್ಕೂ ಹೆಚ್ಚು ಮನೆಗಳಿರುವ ಈ ಪ್ರದೇಶಕ್ಕೆ ಕೊಣಾಜೆ ವಿವಿ ಬಳಿಯಿಂದ ಸುಮಾರು 2 ಕಿ.ಮೀ. ದೂರವಿದೆ. ಈ ಪ್ರದೇಶವನ್ನು ಸಂಪರ್ಕಿಸುವ ಕೊಣಾಜೆ-ಪುರುಷಕೋಡಿ ರಸ್ತೆಗೆ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಡಾಂಬಾರು ಹಾಕಲಾಗಿತ್ತು. ಅದು ಕೂಡಾ ಕೇವಲ ಒಂದು ಕಿ.ಮೀ. ವ್ಯಾಪ್ತಿಗೆ ಮಾತ್ರ. ಅಲ್ಲಿಂದ ಮಣ್ಣಿನ ರಸ್ತೆಯಲ್ಲೇ ಸಂಚಾರ ನಡೆಸಬೇಕಾಗಿದೆ.
ಇದರಿಂದಾಗಿ ಪ್ರದೇಶದ ಜನರು ಬಹಳಷ್ಟು ಸಮಸ್ಯೆಯನ್ನು ಎದುರಿಸುವಂತಾಗಿದೆ. ಹೊಂಡಮಯಗೊಂಡಿರುವುದರಿಂದ ಯಾವುದೇ ಅಟೋ ರಿಕ್ಷಾದವರು ಕೂಡಾ ಇಲ್ಲಿಗೆ ಬರಲು ಒಪ್ಪದಂತಹ ಸ್ಥಿತಿ. ಮಾತ್ರವಲ್ಲದೆ ಎಷ್ಟೋ ದ್ವಿಚಕ್ರ ಸವಾರರು ಇದೇ ರಸ್ತೆಯಲ್ಲಿ ಸಂಚರಿಸಿ ಅವಘಡಕ್ಕೊಳಗಾದ ಘಟನೆಯೂ ನಡೆದಿದೆ..ಅಲ್ಲದೆ ಲಯನ್ಸ್‌ನವರು ಈ ಪ್ರದೇಶದಲ್ಲಿ ನಿರ್ಮಿಸಿದ ಲಯನ್ಸ್ ಮುಕ್ತಿಭೂಮಿಗೆ ಮೃತದೇಹವನ್ನು ತಂದು ಬರುವ ಆಂಬ್ಯುಲೆನ್ಸ್‌ಗಳೂ ಇಲ್ಲಿ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯ ಅಭಿವೃದ್ದಿ ಪಡಿಸುವ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ, ಶಾಸಕರಲ್ಲಿ, ಸಂಸದರಲ್ಲಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಲ್ಲಿ ಈ ಭಾಗದ ಜನರು ಮನವಿ ಕೊಟ್ಟಿದ್ದರೂ ಜನಪ್ರತಿನಿಧಿಗಳು ಕೇವಲ ಭರವಸೆಗಳನ್ನು ನೀಡಿ ಸುಮ್ಮನಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಳೆದ ಮೂರು ವರ್ಷದ ಹಿಂದೆ ಇಲ್ಲಿಯ ತಿರುವು ರಸ್ತೆಯ ಸ್ವಲ್ಪ ಭಾಗಕ್ಕೆ ಮೂರು ಲಕ್ಷ ರೂ ಅನುದಾನದಲ್ಲಿ ಕಾಂಕ್ರೀಟು ಹಾಕಲಾಗಿದ್ದರೂ ಉಳಿದ ರಸ್ತೆಯು ಹದಗೆಟ್ಟು ಹೋಗಿದೆ.
ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ ಕಳೆದ ಹಲವಾರು ವರ್ಷಗಳಿಂದ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಒಳಗಾಗಿರುವ ಕೊಣಾಜೆ-ಪುರುಷಕೋಡಿ ರಸ್ತೆಯ ಅವ್ಯವಸ್ಥೆಯ ಬಗ್ಗೆ ಈ ಬಾರಿ ಪುರುಷಕೋಡಿಯ ನಾಗರಿಕರು ಒಗ್ಗಟ್ಟಾಗಿದ್ದು ಮುಂದಿನ ದಿನಗಳಲ್ಲಿ ಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ರಸ್ತೆಯ ಬಗ್ಗೆ ಜನಪ್ರತಿನಿಧಿಗಳ ನಿರ್ಲಕ್ಷ ಹಾಗೂ ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ಪುರುಷಕೋಡಿಯ ನಾಗರಿಕರು ಒಟ್ಟು ಸೇರಿ ಫೆ.8ರಂದು ಸೋಮವಾರ ಲಯನ್ಸ್ ಮುಕ್ತಿ ಭೂಮಿ ಬಳಿ ಪ್ರತಿಭಟನೆಯನ್ನು ಮಾಡಲು ನಿರ್ಧರಿಸಿದ್ದಾರೆ. ಕೊಣಾಜೆ ಪುರುಷಕೋಡಿ ರಸ್ತೆಯು ಕಳೆದ ಹಲವಾರು ವರ್ಷದಿಂದ ಅಭಿವೃದ್ದಿ ಕಾಣದೆ ಹಾಗೇ ಉಳಿದಿದ್ದು, ಜನಪ್ರತಿನಿಧಿಗಳಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಾರಿಯ ಜಿ.ಪಂ., ತಾ.ಪಂ. ಚುನಾವಣೆಗಳನ್ನು ಈ ಭಾಗದ ನಾಗರಿಕರು ಬಹಿಷ್ಕರಿಸಲು ಒಗ್ಗಟ್ಟಿನಿಂದ ತೀರ್ಮಾನಿಸಿದ್ದೇವೆ.