ಉಡುಪಿ;ಮುಂದಿನ ಶೈಕ್ಷಣಿಕ ವರ್ಷದಿಂದ ಸಾಲಿಹಾತ್ ಪದವಿ ಕಾಲೇಜು ಆರಂಭ
ಉಡುಪಿ, ಫೆ.1: ಪಡುತೋನ್ಸೆ ಗ್ರಾಮದ ಹೂಡೆಯ ಮಹಮ್ಮದೀಯ ಟ್ರಸ್ಟ್ ನಡೆಸುತ್ತಿರುವ ಸಾಲಿಹಾತ ಸಮೂಹ ಶಿಕ್ಷಣ ಸಂಸ್ಥೆಯು ಮುಂದಿನ ಶೈಕ್ಷಣಿಕ ವರ್ಷದಿಂದ ಮಹಿಳೆಯರಿಗಾಗಿ ಕಲೆ ಮತ್ತು ವಾಣಿಜ್ಯ ವಿಭಾಗದಲ್ಲಿ ಪದವಿ ಶಿಕ್ಷಣ ಆರಂಭಿಸಲು ಉದ್ದೇಶಿಸಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಇದ್ರೀಸ್ ಹೂಡೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವಿ ಕಾಲೇಜಿನ ಕಟ್ಟಡದ ಶಿಲಾನ್ಯಾಸ ಸಮಾರಂಭವನ್ನು ಫೆ.3ರಂದು ಸಂಜೆ 4ಗಂಟೆಗೆ ಸಾಲಿಹಾತ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದು, ಶಿಲಾನ್ಯಾಸವನ್ನು ಜಮಾಅತೆ ಇಸ್ಲಾಮೀ ಹಿಂದ್‌ನ ಅಧ್ಯಕ್ಷ ವೌಲಾನ ಸಯ್ಯದ್ ಜಲಾಲುದ್ದೀನ್ ಉಮರಿ ನೆರವೇರಿಸಲಿರುವರು ಎಂದರು.
ಮುಖ್ಯ ಅತಿಥಿಗಳಾಗಿ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಅತರುಲ್ಲಾ ಶರೀಫ್, ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಮೊದ ಲಾದವರು ಭಾಗವಹಿಸಲಿರುವರು. ಇದೀಗ ಸಂಸ್ಥೆಯು ಬಾಲಕಿಯರ ಕನ್ನಡ ಮಾಧ್ಯಮ ಪ್ರೌಢಶಾಲೆ, ಆಂಗ್ಲ ಮಾಧ್ಯಮ, ಬಾಲಕಿಯರಿಗಾಗಿ ಪದವಿ ಪೂರ್ವ ಕಾಲೇಜನ್ನು ನಡೆಸುತ್ತಿದ್ದು, ಮುಂದಿನ ಸಾಲಿನಿಂದ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಆರಂಭಿಸಲಾಗುವುದು. ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಪದವಿ ಕಾಲೇಜಿನ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಇಸ್ಮಾಯಿಲ್ ಸಾಹೇಬ್, ಕಾರ್ಯದರ್ಶಿ ಇಮ್ತಿಯಾಝ್, ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ, ಟ್ರಸ್ಟಿ ಮುಹಮ್ಮದ್ ವೌಲ ಉಪಸ್ಥಿತರಿದ್ದರು.