ಕಲ್ಲಡ್ಕ: ಗುಂಪು ಘರ್ಷಣೆ * ಲಾಠಿ ಚಾರ್ಚ್ * ಅಂಗಡಿ ಮುಂಗಟ್ಟು ಬಂದ್ * ಬಿಗಿ ಪೊಲೀಸ್ ಬಂದೋಬಸ್ತ್
ಕಲ್ಲಡ್ಕ: ಗುಂಪು ಘರ್ಷಣೆಗೆ ತಿರುಗಿದ ರಸ್ತೆ ಅಪಘಾತ
* ಲಾಠಿ ಚಾರ್ಜ್* ಅಂಗಡಿ ಮುಂಗಟ್ಟು ಬಂದ್ * ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಬಂಟ್ವಾಳ, ಫೆ.1: ಕಾರು ಮತ್ತು ಆಟೊ ರಿಕ್ಷಾದ ಮಧ್ಯೆ ಸಂಭವಿಸಿದ ಅಪಘಾತವೊಂದು ಎರಡು ಗುಂಪುಗಳ ನಡುವೆ ಘರ್ಷಣೆಗೆ ತಿರುಗಿದ ಘಟನೆ ತಾಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ 7 ಗಂಟೆಗೆ ನಡೆದಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ಧಾವಿಸಿ ಪೊಲೀಸರು ಲಾಠಿ ಚಾರ್ಜ್ ನಡೆಸಿ ಉದ್ರಿಕ್ತ ಗುಂಪನ್ನು ಚದುರಿಸಿದರು. ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ ಜಂಕ್ಷನ್ ಬಳಿ ಪುತ್ತೂರಿನ ವ್ಯಕ್ತಿಯೊಬ್ಬರ ಕಾರು ಕಲ್ಲಡ್ಕ ನಿವಾಸಿ ಕಿರಣ್ ಎಂಬಾತನ ಆಟೊವೊಂದಕ್ಕೆ ಢಿಕ್ಕಿ ಹೊಡೆಯಿತು. ಈ ಸಮಯದಲ್ಲಿ ಸ್ಥಳದಲ್ಲಿ ಜಮಾಯಿಸಿದ ಆಟೊ ಚಾಲಕರಾದ ಕಲ್ಲಡ್ಕ ನಿವಾಸಿಗಳಾದ ರವಿ ಭಂಡಾರಿ, ಯತಿರಾಜ, ಅಮ್ಟೂರು ನಿವಾಸಿ ಜಗದೀಶ್, ಬಿ.ಸಿ.ರೋಡ್ ಗ್ಯಾಸ್ ಎಜೆನ್ಸಿಯೊಂದರಲ್ಲಿ ಕೆಲಸ ಮಾಡುವ ಧೀರಜ್, ಕಲ್ಲಡ್ಕ ಬೇಕರಿಯಲ್ಲಿ ನೌಕರನಾಗಿರುವ ನವೀನ್ ಎಂಬವರ ಸಹಿತ ಸ್ಥಳೀಯ ಯುವಕರ ಗುಂಪೊಂದು ಕಾರು ಚಾಲಕನಿಗೆ ಹಲ್ಲೆ ನಡೆಸಿದೆ.
ಈ ವೇಳೆ ಕಾರು ಚಾಲಕನನ್ನು ಗುಂಪಿನಿಂದ ಬಿಡಿಸಲು ಬಂದ ಕಲ್ಲಡ್ಕ ನಿವಾಸಿ ವೆಲ್‌ಕಮ್ ಹೋಟೆಲ್ ಮಾಲಕ ಬಾವ ಎಂಬವರ ತಮ್ಮ ತೌಸೀಫ್ ಎಂಬಾತನಿಗೂ ಗುಂಪು ಹಲ್ಲೆ ನಡೆಸಿದೆ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದಾದ ಕೆಲವೇ ನಿಮಿಷದಲ್ಲಿ ಇನ್ನೊಂದು ಗುಂಪಿನ ಯುವಕರು ಸ್ಥಳದಲ್ಲಿ ಜಮಾಯಿಸಿದ್ದು, ಆ ವೇಳೆ ಎರಡು ಗುಂಪುಗಳ ನಡುವೆ ಕಲ್ಲು, ಸೋಡಾ ಬಾಟ್ಲಿ ತೂರಾಟ ನಡೆಯಿತಲ್ಲದೆ ಹೊಡೆದಾಟ ಕೂಡಾ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಲಾಠಿ ಚಾರ್ಜ್ ನಡೆಸಿ ಎರಡೂ ಗುಂಪನ್ನು ಚದುರಿಸಿದ್ದಾರೆ. ಲಾಠಿ ಚಾರ್ಜ್ ಬಳಿಕ ಒಂದೆಡೆ ಸೇರಿದ ಗುಂಪು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್‌ಗೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದೆ. ಪಾದಚಾರಿಗಳಿಗೂ ಕಲ್ಲು ತೂರಾಟ ನಡೆಸಿದೆ. ಅಲ್ಲದೆ, ಶ್ರೀರಾಂ ಶಾಲಾ ರಸ್ತೆಯಲ್ಲಿರುವ ಬಾವಾರ ಮನೆಗೆ ದಾಳಿ ನಡೆಸಿ ಅವರ ಪತ್ನಿಗೆ ಹಲ್ಲೆ ನಡೆಸಿದೆ. ಘಟನೆಯ ವೇಳೆ ಬಾವ ಊರಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಘಟನೆಯಿಂದ 7ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಸಹಿತ ವಿವಿಧ ಆಸ್ಪತೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಸ್ಥಳೀಯ ಕೆಲವು ಯುವಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯಿಂದಾಗಿ ಭೀತಿಗೊಂಡ ಅಂಗಡಿ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ಮನೆಗೆ ತೆರಳಿದರು. ಕಲ್ಲಡ್ಕ ಪೇಟೆ ಭಾಗಶಃ ಬಂದ್‌ಗೊಂಡಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ತಿಳಿಸಿದ್ದಾರೆ.
ಡಾಮರೀಕರಣದ ಗೊಂದಲ: ಕಲ್ಲಡ್ಕ ಪೇಟೆಯಲ್ಲಿ ಡಾಮರೀಕರಣಗೊಳ್ಳುತ್ತಿದ್ದು, ಇಂದು ಬೆಳಗ್ಗಿನಿಂದ ಸಂಚಾರ ಅಡಚಣೆ ಉಂಟಾಗಿ ಸಂಜೆ ಬಳಿಕ ಮುಕ್ತವಾಗಿತ್ತು. ಘರ್ಷಣೆ ಬಳಿಕ ಮತ್ತೆ ವಾಹನ ಸಂಚಾರ ನಿಲುಗಡೆಯಾಗಿ ರಸ್ತೆಯುದ್ದಕ್ಕೂ ಸರತಿ ಸಾಲು ಕಂಡು ಬಂತು. ಸಂಚಾರ ನಿಲುಗಡೆ ಆಗಿದ್ದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಪಾಣೆಮಂಗಳೂರು ನರಿಕೊಂಬು, ಶಂಭೂರು ಬಾಳ್ತಿಲ ಬದಲಿ ರಸ್ತೆಯಲ್ಲಿ ಸಂಚರಿಸಿದ್ದವು.