×
Ad

ಹಿರಿಯ ಮಹಿಳಾ ಸದಸ್ಯೆಗೆ ಕುಟುಂಬದ ಹಿರಿತನ: ಹೈಕೋರ್ಟ್

Update: 2016-02-01 23:26 IST

ಹೊಸದಿಲ್ಲಿ, ಫೆ.1: ಹಿಂದೂ ಅವಿಭಕ್ತ ಕುಟುಂಬದ ಮ್ಯಾನೇಜರ್ ಹುದ್ದೆ ‘ಕರ್ತಾ’ವನ್ನು (ಕುಟುಂಬ ಮತ್ತು ಆಸ್ತಿಯನ್ನು ನಿಭಾಯಿಸುವ ಮ್ಯಾನೇಜರ್ ಹುದ್ದೆ) ಕುಟುಂಬದ ಹಿರಿಯ ಮಹಿಳಾ ಸದಸ್ಯೆಗೆ ವಹಿಸಿಕೊಳ್ಳಲು ಅವಕಾಶ ಇದೆ ಎಂದು ದಿಲ್ಲಿ ಹೈಕೋರ್ಟ್ ಇಂದು ತೀರ್ಪು ನೀಡಿದೆ.
 ಇದರೊಂದಿಗೆ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಮಾನ ಸ್ಥಾನಮಾನ, ದೇವಸ್ಥಾನ ಪ್ರವೇಶ ಸೇರಿದಂತೆ ವಿವಿಧ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವಾಗಲೇ ದಿಲ್ಲಿ ಹೈಕೋರ್ಟ್ ಶತಮಾನಗಳಿಂದ ಜಾರಿಯಲ್ಲಿರುವ ಹಿಂದೂ ಅವಿಭಕ್ತ ಕುಟುಂಬ ಮತ್ತು ಕುಟುಂಬದ ಆಸ್ತಿಪಾಸ್ತಿಗಳನ್ನು ನೋಡಿಕೊಳ್ಳುವ ಮ್ಯಾನೇಜರ್ ಹುದ್ದೆಯನ್ನು (ಕರ್ತಾ) ವಹಿಸಿಕೊಳ್ಳಲು ಕುಟುಂಬದ ಹಿರಿಯ ಮಹಿಳಾ ಸದಸ್ಯೆ ಅರ್ಹಳು ಎಂದು ತೀರ್ಪು ನೀಡಿದೆ.
ಉತ್ತರ ದಿಲ್ಲಿಯ ಉದ್ಯಮಿ ಕುಟುಂಬವೊಂದರ ಕರ್ತಾ ಹುದ್ದೆಯನ್ನು ನಿಭಾಯಿಸುತ್ತಿದ್ದ ಕುಟುಂಬದ ಹಿರಿಯ ವ್ಯಕ್ತಿಮೃತಪಟ್ಟ ಬಳಿಕ ಆತನಿಂದ ತೆರವಾಗಿದ್ದ ಕರ್ತಾ ಹುದ್ದೆಯನ್ನು ವಹಿಸಿಕೊಳ್ಳಲು ಆತನ ಸಹೋದರರು ಹೈಕೋರ್ಟ್‌ನ ಮೆಟ್ಟಲೇರಿದ್ದರು. ಹೈಕೋರ್ಟ್‌ನಲ್ಲಿ ಅಧಿಕಾರದ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವಾಗ ಮೃತ ವ್ಯಕ್ತಿಯ ಹಿರಿಯ ಮಗಳು ಹೈಕೋರ್ಟ್‌ನ ಮೆಟ್ಟಲೇರಿ ಕರ್ತಾ ಹುದ್ದೆಯನ್ನು ವಹಿಸಿಕೊಳ್ಳಲು ಕುಟುಂಬದ ಹಿರಿಯ ಮಹಿಳಾ ಸದಸ್ಯೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿ ನಜ್ಮಿ ವಾಝ್ರಿ ಮಹತ್ವದ ತೀರ್ಪು ನೀಡಿದ್ದಾರೆ.
 ಹಿಂದೆ ಮಹಿಳೆಗೆ ಶಿಕ್ಷಣದ ಕೊರತೆಯ ಹಿನ್ನೆಲೆಯಲ್ಲಿ ಹಿಂದೂ ಅವಿಭಕ್ತ ಕುಟುಂಬದ ಕರ್ತಾ ಹುದ್ದೆಗೆ ಅವಕಾಶ ಇರಲಿಲ್ಲ. ಹಿಂದೂ ಉತ್ತರಾಧಿಕಾರ ಕಾಯ್ದೆ 2005 ತಿದ್ದುಪಡಿಯಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಹಕ್ಕು ಇರುವ ಹಿನ್ನೆಲೆಯಲ್ಲಿ ಹಿಂದೂ ಅವಿಭಕ್ತ ಕುಟುಂಬದ ಹಿರಿಯ ಮಹಿಳಾ ಸದಸ್ಯೆ ಕುಟುಂಬದ ಕರ್ತಾ ಹುದ್ದೆಯನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News