ರೋಹಿತ್ ಆತ್ಮಹತ್ಯೆ ವಿರೋಧಿಸಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ
ವಿದ್ಯಾರ್ಥಿನಿಯರಿಗೂ ಥಳಿತ
ಹೊಸದಿಲ್ಲಿ, ಫೆ.1: ಹೈದರಾಬಾದ್ ವಿವಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ವಿರುದ್ಧ ಹೊಸದಿಲ್ಲಿಯ ಆರೆಸ್ಸೆಸ್‌ಕಾರ್ಯಾಲಯದ ಮುಂದೆ ಶನಿವಾರ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ದಿಲ್ಲಿ ಪೊಲೀಸರು ಹಿಗ್ಗಾಮುಗ್ಗಾ ಥಳಿಸುತ್ತಿರುವ ದೃಶ್ಯವಿರುವ ವೀಡಿಯೊ ಟಿವಿ ಮಾಧ್ಯಮಗಳಲ್ಲಿ ಹಾಗೂ ಅಂತರ್ಜಾಲ ತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನಕಾರರ ಮೇಲೆ ನಡೆದಿರುವ ಹಲ್ಲೆಯ ಈ ವೀಡಿಯೊ ದಿಲ್ಲಿ ಪೊಲೀಸರ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆಯೆಂದು, ವಿವಿಧ ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
‘‘ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು, ಅನ್ಯಾಯಗಳ ವಿರುದ್ಧ ಧ್ವನಿಯೆತ್ತುತ್ತಿದ್ದಾರೆ. ಆದರೆ ಹಿಂದೆಂದೂ, ಈ ರೀತಿಯಾಗಿ ಪ್ರತಿಭಟನೆ ನಡೆಸುವ ಅವರ ಹಕ್ಕನ್ನು ಕಸಿದುಕೊಂಡಿರಲಿಲ್ಲ. ವೇಮುಲಾ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ, ಪ್ರತಿ ಸಲವೂ ನಾವು ಶಾಂತಿಯುತ ಪ್ರದರ್ಶನ ನಡೆಸಲು ಯತ್ನಿಸಿದಾಗಲೆಲ್ಲಾ ನಮ್ಮನ್ನು ಥಳಿಸಲಾಗುತ್ತಿದೆ, ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಹಾಗೂ ಆಕ್ರಮಣ ನಡೆಸಲಾಗುತ್ತಿದೆ. ಅದಕ್ಕೆ ಈ ವೀಡಿಯೊ ಸಾಕ್ಷಿಯಾಗಿದೆ’’ ಎಂದು ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷೆ ಶಿಹ್ಲಾ ರಶೀದ್ ಶೋರಾ ಹೇಳಿದ್ದಾರೆ.
‘‘ಅಸಮರ್ಥನೀಯವೆಂದು ಕಂಡುಬಂದ ಯಾವ ವಿಷಯದ ಬಗೆಗೂ ಪ್ರತಿಭಟನೆ ನಡೆಸುವ ಹಕ್ಕನ್ನು ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ನೀಡಿದೆ. ನಾವು ಪ್ರತಿಬಾರಿಯೂ ಧ್ವನಿಯೆತ್ತಲು ಯತ್ನಿಸಿದ ಸಂದರ್ಭಗಳಲ್ಲಿ ನಮ್ಮ ಮೇಲೆ ಹಲ್ಲೆಗಳಾಗಿವೆ’’ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿನಿ ಸುಚೇತಾ ಡೇ ಆಪಾದಿಸಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವಂತೆ, ಪೊಲೀಸರಿಗೆ ಸೂಚನೆಗಳನ್ನು ನೀಡುತ್ತಿರುವವರು ಯಾರೆಂಬುದು ಬಯಲಿಗೆ ಬರಬೇಕಾಗಿದೆಯೆಂದು ಎಡಪಕ್ಷಗಳ ಬೆಂಬಲ ಹೊಂದಿರುವ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ)ದ ಸದಸ್ಯ ಸನ್ನಿ ಕುಮಾರ್ ಆರೋಪಿಸಿದ್ದಾರೆ.
‘‘ರೋಹಿತ್‌ಗೆ ನ್ಯಾಯ ದೊರೆಯುವ ತನಕವೂ ಈ ಪ್ರತಿಭಟನೆ ಮುಂದುವರಿಯಲಿದೆ. ಇದು ಕೇವಲ ರೋಹಿತ್ ಮಾತ್ರವಲ್ಲ ಪ್ರತಿಯೊಬ್ಬ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟವಾಗಿದೆಯೆಂದು ಶೋರಾ ಹೇಳಿದ್ದಾರೆ.
ರೋಹಿತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಹಾಗೂ ಸ್ಮತಿ ಇರಾನಿ ಮತ್ತು ಹೈದರಾಬಾದ್ ವಿವಿಯ ಉಪಕುಲಪತಿ ಬಂಡಾರು ದತ್ತಾತ್ರೇಯ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಿಲ್ಲಿ ಪೊಲೀಸರ ದೌರ್ಜನ್ಯದ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ವಿದ್ಯಾರ್ಥಿಗಳ ಮೇಲಿನ ಹಲ್ಲೆ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಬಿಜೆಪಿಯು ತನ್ನ ರಾಜಕೀಯ ಉದ್ದೇಶಕ್ಕಾಗಿ ದಿಲ್ಲಿ ಪೊಲೀಸ್ ಪಡೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆಯೆಂದು ಆರೋಪಿಸಿದ್ದಾರೆ.
ದಿಲ್ಲಿ ಪೊಲೀಸರಿಗೆ ಮಹಿಳಾ ಆಯೋಗ ನೋಟಿಸ್
ಹೊಸದಿಲ್ಲಿ, ಫೆ.1: ಆರೆಸ್ಸೆಸ್ ಕಾರ್ಯಾಲಯದ ಬಳಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಿಳಾ ಪೊಲೀಸರನ್ನು ಯಾಕೆ ಸ್ಥಳದಲ್ಲಿ ನಿಯೋಜಿಸಲಾಗಿಲ್ಲವೆಂದು ಪ್ರಶ್ನಿಸಿ, ದಿಲ್ಲಿ ಮಹಿಳಾ ಆಯೋಗವು, ದಿಲ್ಲಿ ಪೊಲೀಸರಿಗೆ ಸೋಮವಾರ ನೋಟಿಸ್ ಜಾರಿಗೊಳಿಸಿದೆ.ವಿದ್ಯಾರ್ಥಿನಿಯರು ಸೇರಿದಂತೆ ಪ್ರತಿಭಟನಾ ನಿರತರ ಮೇಲೆ ಪೊಲೀಸರು ಆರೆಸ್ಸೆಸ್ ಕಾರ್ಯಾಲಯದ ಬಳಿ ಹಲ್ಲೆ ನಡೆಸಿದ ವೀಡಿಯೊವೊಂದು ಬಹಿರಂಗಗೊಂಡ ಬೆನ್ನಲ್ಲೇ ಆಯೋಗವು ದಿಲ್ಲಿಯ ಜಂಟಿ ಪೊಲೀಸ್ ಆಯುಕ್ತ (ಕೇಂದ್ರ ವಲಯ) ಸುನೀಲ್ ಕುಮಾರ್ ಗೌತಮ್ ವಿರುದ್ಧ ನೋಟಿಸ್ ಜಾರಿಗೊಳಿಸಿದೆ.
ಆರೆಸ್ಸೆಸ್ ಗೂಂಡಾಗಳಿಂದಲೂ ಪ್ರತಿಭಟನಕಾರರ ಮೇಲೆ ಹಲ್ಲೆ; ನಿರ್ದಯವಾಗಿ ಚಚ್ಚಿದ ಪೊಲೀಸರು
ವೀಡಿಯೊದಲ್ಲಿ ಆರೆಸ್ಸೆಸ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಮನಬಂದಂತೆ ಥಳಿಸುತ್ತಿರುವುದು ಕಂಡುಬಂದಿದೆೆ. ಪೊಲೀಸರ ಜೊತೆಗೆ ಕೆಲವು ಆರೆಸ್ಸೆಸ್ ಬೆಂಬಲಿಗರೂ ಪ್ರತಿಭಟನಕಾರರ ಮೇಲೆ ಹಲ್ಲೆ ನಡೆಸಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಪುರುಷ ಪೊಲೀಸರು, ವಿದ್ಯಾರ್ಥಿನಿಯರ ಮೇಲೂ ಹಲ್ಲೆ ಮಾಡಿದ್ದಾರೆ. ಕೆಲವು ವಿದ್ಯಾರ್ಥಿನಿಯರ ಕೂದಲನ್ನು ಹಿಡಿದು ಎಳೆದಾಡಿದ್ದಾರೆ.