ಅಲ್ಪಸಂಖ್ಯಾತ ಸೀಟುಗಳು ಕಡಿತ: ಕಾಂಗ್ರೆಸ್‌ನಲ್ಲಿ ಅತೃಪ್ತಿ ಬಹಿರಂಗ
ದ.ಕ ಜಿಪಂ ಚುನಾವಣಾ ಪ್ರಕ್ರಿಯೆ ಆರಂಭ
ಮಂಗಳೂರು, ಫೆ.1: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ಗೆ ಈ ತಿಂಗಳ 20ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ತನ್ಮಧ್ಯೆ ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶದಲ್ಲೂ ತಮ್ಮ ಸ್ಥಾನ ಉಳಿಸಿಕೊಳ್ಳಲು ಪ್ರಯಾಸ ಪಡುತ್ತಿರುವ ಘಟನೆ ಜಿಲ್ಲೆಯಲ್ಲಿ ಕಂಡು ಬರುತ್ತಿವೆ. ನಾಮಪತ್ರ ಪ್ರಕ್ರಿಯೆ ಆರಂಭಗೊಂಡ ಪ್ರಥಮ ದಿನವಾದ ಫೆ.1ರಂದು ಬೆಳ್ತಂಗಡಿಯ ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶವಾದ ಕಣಿಯೂರು ಕ್ಷೇತ್ರದಲ್ಲಿ ಮುಸ್ಲಿಮ್ ಅಲ್ಪ ಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್‌ನಲ್ಲಿ ಸಮ್ಮತವಿದ್ದರೂ ಬದಲಾವಣೆಯ ಪ್ರಯತ್ನ ನಡೆದಿರುವುದು ಮತ್ತು ಅದನ್ನು ವಿರೋಧಿಸಿದ ಗುಂಪು ಶಾಸಕರ ಬಳಿ ತಮ್ಮ ಅಹವಾಲನ್ನು ಸಲ್ಲಿಸಿರುವುದು ಬಹಿರಂಗಗೊಂಡಿದೆ.
ಕಣಿಯೂರು ಕ್ಷೇತ್ರದಲ್ಲಿ 2005ರಲ್ಲಿ ಜಿಪಂ ಸದಸ್ಯರಾಗಿ ಶಾಹುಲ್ ಹಮೀದ್ ಆಯ್ಕೆಯಾಗಿದ್ದರು. ಈ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯದ ಸದಸ್ಯರ ಸಂಖ್ಯೆಯೂ ಹೆಚ್ಚಿದೆ. ಶಾಹುಲ್ ಹಮೀದ್ ಈ ಬಾರಿ ಮತ್ತೆ ಸ್ಪರ್ಧಿಸಲು ಉತ್ಸುಕರಾಗಿದ್ದರೂ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೆರೆಮರೆಯ ಪ್ರಯತ್ನ ನಡೆಸಿರುವುದು ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲೆಯ ಇತರ ಜಿಪಂ ಕ್ಷೇತ್ರಗಳಲ್ಲಿಯೂ ಈ ರೀತಿಯ ಅಸಮಾಧಾನ ವ್ಯಕ್ತಗೊಂಡಿರುವುದು ಬೆಳಕಿಗೆ ಬಂದಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಪ್ರಭಾರ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಅಲ್ಪಸಂಖ್ಯಾತ ಸಮುದಾಯದವರಿಗೆ ಈ ಬಾರಿ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ ಎಂಬ ಎನ್ನುವುದು ಸರಿಯಲ್ಲ. ಕಳೆದ ಬಾರಿಗಿಂತಲೂ ಹೆಚ್ಚು ಸೀಟು ನೀಡುತ್ತೇವೆ’ ಎಂದಿದ್ದಾರೆ.
ದ.ಕ.ಜಿಪಂನಲ್ಲಿ ಕಾಂಗ್ರೆಸ್ ಮುಸ್ಲಿಮ್ ಅಭ್ಯರ್ಥಿಗಳಿಗೆ 2010ರ ಚುನಾವಣೆಯಲ್ಲಿ 3 ಸ್ಥಾನ ನೀಡಲಾಗಿತ್ತು. ಈ ಪೈಕಿ ಕೊಣಾಜೆಯ ಎನ್.ಎಸ್. ಕರೀಮ್, ಕೊಳ್ನಾಡು ಕ್ಷೇತ್ರದ ಎಂ.ಎಸ್. ಮುಹಮ್ಮದ್ ಗೆಲುವು ಸಾಧಿಸಿದ್ದರು. ಬಜಪೆ ಕ್ಷೇತ್ರದ ಅಭ್ಯರ್ಥಿ ಪರಾಭವಗೊಂಡಿದ್ದರು.
2005ರ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡ ಪರಿಣಾಮ ಜೆಡಿಎಸ್ 1 ಮತ್ತು ಕಾಂಗ್ರೆಸ್ 3 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈ ಪೈಕಿ ಕಾಂಗ್ರೆಸ್ 1 ಕಡೆ ಪರಾಭವಗೊಂಡದ್ದರಿಂದ ಮೂವರು ಮುಸ್ಲಿಮ್ ಅಭ್ಯರ್ಥಿಗಳು ಜಿಪಂಗೆ ಆಯ್ಕೆಗೊಂಡಿದ್ದರು. ಕೊಣಾಜೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಅಝೀಝ್ ಮಲಾರ್, ಕಣಿಯೂರು ಕ್ಷೇತ್ರದಿಂದ ಶಾಹುಲ್ ಹಮೀದ್, ತುಂಬೆ ಕ್ಷೇತ್ರದಿಂದ ಉಮರ್ ಫಾರೂಕ್ ಆಯ್ಕೆಯಾಗಿದ್ದರೆ, ಗುರುಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರಾಭವಗೊಂಡಿದ್ದರು.
ಈ ಬಾರಿ ದ.ಕ.ಜಿಪಂನ ಕೆಲವು ಕ್ಷೇತ್ರಗಳ ಮೀಸಲಾತಿಯಲ್ಲಿ ಬದಲಾವಣೆಯಾಗಿದೆ. ಬಂಟ್ವಾಳದ ಕೊಳ್ನಾಡು ಹಾಗೂ ನೆಲ್ಯಾಡಿಯ ಜಿಪಂ ಕ್ಷೇತ್ರ ಹೊರತು ಉಳಿದ ಎಲ್ಲಾ ಕ್ಷೇತ್ರಗಳಲ್ಲಿಯೂ ಹಾಲಿ ಅಭ್ಯರ್ಥಿಗಳು ಚುನಾವ ಣೆಗೆ ಸ್ಪರ್ಧಿಸಲು ಮೀಸಲಾತಿ ತೊಡಕಾಗಿದೆ.
ಕೋಟೆಕಾರ್ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಆಗಿ ಪರಿವರ್ತನೆಗೊಂಡ ಕಾರಣ ಮುನ್ನ್ನೂರು ಮತ್ತು ಪುಣಚ ಕ್ಷೇತ್ರ ರಚನೆಯಾಗಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಜಿಪಂ ಕ್ಷೇತ್ರ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ.
ಕಳೆದ ಬಾರಿ ಜಿಪಂ ಪಂಚಾಯತ್‌ನಲ್ಲಿ 35 ಸ್ಥಾನಗಳಿತ್ತು. ಈ ಬಾರಿ 36ಕ್ಕೆ ಏರಿಕೆಯಾಗಿದೆ. ಈ ಪೈಕಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಮ್, ಕ್ರಿಶ್ಚಿಯನ್, ಜೈನ ಸಮುದಾಯಕ್ಕೆ ಸೇರಿದಂತೆ ಕಾಂಗ್ರೆಸ್‌ನಿಂದ 10ರಿಂದ 12 ಸ್ಥಾನಗಳು ದೊರೆಯಬಹುದು. ಮುಸ್ಲಿಮ್ ಸಮುದಾಯಕ್ಕೆ ಮೀಸಲಾತಿಯ ಆಧಾರದಲ್ಲಿಯೂ ಕೊಳ್ನಾಡು, ಗುರುಪುರ, ಕಣಿಯೂರು, ಪುದು, ಕೊಣಾಜೆಯಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯುವ ಸಾಧ್ಯತೆ ಇದೆ ಎನ್ನುವುದು ಮುಸ್ಲಿಮ್ ಸಮುದಾಯದ ಕಾಂಗ್ರೆಸ್ ಬೆಂಬಲಿಗರ ಲೆಕ್ಕಾಚಾರವಾಗಿದೆ.
ಉಳಿದಂತೆ ಕಡಬ, ನೆಲ್ಯಾಡಿ, ನೀರುಮಾರ್ಗ, ಕಿನ್ನಿಗೋಳಿ, ಕಟೀಲ್, ಸರಪಾಡಿ ಮೊದಲಾದ ಕ್ಷೇತ್ರಗಳನ್ನು ಇತರ ಅಲ್ಪಸಂಖ್ಯಾತ ಸಮುದಾಯದವರಿಗೆ ನೀಡಬೇಕು ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ಬೇಡಿಕೆಯಾಗಿದೆ.
ಕಳೆದ ಬಾರಿ (2010) ಜಿಪಂನಲ್ಲಿ ಬಿಜೆಪಿ 24 ಹಾಗೂ ಕಾಂಗ್ರೆಸ್ 11 ಸ್ಥಾನಗಳಲ್ಲಿ ಜಯಗಳಿಸಿತ್ತು. 2005ರಲ್ಲಿ ಕಾಂಗ್ರೆಸ್ 15, ಬಿಜೆಪಿ 15 ಸಮಬಲ ಸ್ಥಾನಗಳನ್ನು ಹಂಚಿಕೊಂಡು ಜೆಡಿಎಸ್ 5 ಸ್ಥಾನಗಳಲ್ಲಿ ಜಯಗಳಿಸಿ ನಿರ್ಣಾಯಕ ಪಾತ್ರವಹಿಸಿತ್ತು. ಈ ಬಾರಿ 36 ಜಿಪಂ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 18 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕಾಗಿದೆ.