ಕೆಎಂಎಫ್‌ನಲ್ಲಿ ‘ಮೇಘ ತಂತ್ರಜ್ಞಾನ’ಕ್ಕೆ ಚಾಲನೆ

Update: 2016-02-01 18:27 GMT

ಮಂಗಳೂರು, ಫೆ.1: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಆಡಳಿತ ಪಾರದರ್ಶಕಗೊಳಿಸಿ ಪರಿಣಾಮಕಾರಿ ಜನಪರ ಸೇವೆಯನ್ನು ಉತ್ಪಾದಕರಿಗೆ ಮತ್ತು ಗ್ರಾಹಕರಿಗೆ ನೀಡಲು ಅನುಕೂಲವಾಗುವಂತೆ ‘ಉದ್ಯಮ ಸಂಪನ್ಮೂಲ ಯೋಜನೆ’ (ಇಆರ್‌ಪಿ)ಯನ್ನು ಅಳವಡಿಸಿಕೊಂಡು ಆರಂಭಿಸಿರುವ ‘ಮೇಘ ತಂತ್ರಜ್ಞಾನ (ಕ್ಲೌಡ್ ಟೆಕ್ನಾಲಜಿ)’ ದ ಬಿಡುಗಡೆ ಸಮಾರಂಭ ಸೋಮವಾರ ಮಂಗಳೂರು ಡೇರಿ ಸಭಾಂಗಣದಲ್ಲಿ ನಡೆಯಿತು.

ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮೇಘ ತಂತ್ರಜ್ಞಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮೇಘ ತಂತ್ರಜ್ಞಾನದ ಮೂಲಕ ಮೊಬೈಲ್ ಆ್ಯಪ್ ಬಳಸಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ, ನಂದಿನಿ ಡೀಲರ್‌ಗಳು ಸಕಾಲದಲ್ಲಿ ಬೇಡಿಕೆ ಸಲ್ಲಿಸಲು ಅನುಕೂಲವಾಗುವಂತೆ ಸಿದ್ಧಪಡಿಸಿರುವ ‘ಮೊಬೈಲ್ ಆ್ಯಪ್’ನ್ನು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಹಾಲು ಖರೀದಿಸುವ ಗ್ರಾಹಕ ಹಾಲಿನಲ್ಲಿ ಸಮಸ್ಯೆ ಕಂಡು ಬಂದರೆ ತಕ್ಷಣ ಸ್ಪಂದಿಸುವ ಆ್ಯಪ್ ಕೂಡ ಅಭಿವೃದ್ಧಿಯಾಗಲಿ. ಇದರಿಂದ ಸಂಸ್ಥೆಯೊಂದಿಗಿನ ಬಾಂಧವ್ಯವೂ ಹೆಚ್ಚಲು ಸಾಧ್ಯ. ಕೆಎಂಎ್ ಹಾಲು ಮತ್ತು ಹಾಲಿನ ಉತ್ಪನ್ನಗಳ ಜೊತೆಗೆ ಹಣ್ಣ, ತರಕಾರಿಗಳನ್ನು ಮಾರಾಟ ಮಾಡುವಂತಾಗಲಿ. ಡೀಲರ್‌ಗಳು ಈ ನಿಟ್ಟಿನಲ್ಲಿ ಗಮನಹರಿಸಿದರೆ ಗ್ರಾಹಕನಿಗೆ ಒಂದೇ ಸೂರಿನಡಿ ಅಗತ್ಯ ವಸ್ತುಗಳು ದೊರೆತಂತಾಗುತ್ತದೆ ಎಂದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಸಂಸ್ಥೆಗಳು ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅತಿಮುಖ್ಯ. ಗುಣಮಟ್ಟ ಕಾಯ್ದುಕೊಂಡರೆ ಸಂಸ್ಥೆ ಬಲಗೊಳ್ಳುತ್ತಾ ಸಾಗಲು ಸಾಧ್ಯ. ಖಾಸಗಿ ಪೈಪೋಟಿಯ ನಡುವೆ ಈ ಸ್‌ಟಾವೇರ್ ಪರಿಣಾಮಕಾರಿಯಾಗಬಲ್ಲುದು ಎಂದು ಎ.ಬಿ.ಇಬ್ರಾಹೀಂ ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಮಾತನಾಡಿ, ರಾಜ್ಯದ 14 ಹಾಲು ಒಕ್ಕೂಟಗಳ ಪೈಕಿ ದ.ಕ. ಮೊದಲನೆಯಾದಾಗಿ ಮೇಘ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದೆ. ಮಾರ್ಚ್ ತಿಂಗಳಲ್ಲಿ ಪ್ಲೆಕ್ಸಿ ಪ್ಯಾಕ್‌ನ್ನು ಬಿಡುಗಡೆ ಮಾಡುವ ಯೋಚನೆಯಿದೆ. ಅದು ಸಾಧ್ಯವಾದಲ್ಲಿ ದ.ಕ. ಹಾಲು ಒಕ್ಕೂಟ ಮತ್ತೊಂದು ಯೋಜನೆ ಅನುಷ್ಠಾನ ಗೊಳಿಸಿದ ರಾಜ್ಯದ ಮೊದಲ ಜಿಲ್ಲೆ ಎಂಬ ಕೀರ್ತಿಗೆ ಪಾತ್ರವಾಗಲಿದೆ ಎಂದರು.

1.47 ಕೋಟಿ ರೂ.ವೆಚ್ಚದಲ್ಲಿ ಮೇಘ ತಂತ್ರಜ್ಞಾನದ ಮೂಲಕ ಉದ್ಯಮ ಸಂಪನ್ಮೂಲ ಯೋಜನೆ ಅಳವಡಿಸಿಕೊಳ್ಳುವತ್ತ ಸಂಸ್ಥೆ ದಿಟ್ಟ ಹೆಜ್ಜೆ ಇಟ್ಟಿದೆ. ಈ ತಂತ್ರಜ್ಞಾನದಿಂದ ಮಾರುಕಟ್ಟೆ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿ ಪ್ರಗತಿ ಕಾಣಬಹುದು. ಆಡಳಿತ ವೆಚ್ಚ ನಿಯಂತ್ರಣ, ಯಂತ್ರೋಪಕರಣಗಳ ಸಮರ್ಪಕ ಬಳಕೆ, ಮಾರುಕಟ್ಟೆಗೆ ಸಂಬಂಧಿಸಿದ ಮಾಹಿತಿಯನ್ನು ಸೂಕ್ಷ್ಮ ಹಂತದಲ್ಲಿ ಸಂಗ್ರಹಿಸಿ ಆಡಳಿತದಲ್ಲಿ ದಕ್ಷ ತೀರ್ಮಾನಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.

ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಂಎ್ ನಿರ್ದೇಶಕರಾದ ಡಾ.ಕೆ.ಎಂ.ಕೃಷ್ಣ ಭಟ್, ನವೀನ್‌ಚಂದ್ರ ಜೈನ್, ಸಹಕಾರಿ ಸಂಘಗಳ ಉಪ ನಿಬಂಧಕ ಬಿ.ಕೆ.ಸಲೀಂ., ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆಯ ನಿರ್ದೇಶಕ ಡಾ.ಟಿ.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ಸಂಸ್ಥೆಯ ನಿರ್ದೇಶಕರಾದ ಸವಣೂರು ಕೆ.ಸೀತಾರಾಮ ರೈ ಸ್ವಾಗತಿಸಿದರು. ಕಾಪು ದಿವಾಕರ ಶೆಟ್ಟಿ ವಂದಿಸಿದರು. ಜಯದೇವಪ್ಪ ಕೆ. ಕಾರ್ಯಕ್ರಮ ನಿರೂಪಿಸಿದರು.

ಮೇಘ ತಂತ್ರಜ್ಞಾನದ ಅನುಕೂಲತೆ
ಇಆರ್‌ಪಿ ಮೂಲಕ ಗ್ರಾಹಕ ಹಾಗೂ ಉತ್ಪಾದಕರಿಗೆ ಸಕಾಲದಲ್ಲಿ ಸೇವೆ, ಹಾಲು ಸಂಗ್ರಹಣೆ, ಸಂಸ್ಕರಣೆ, ವಿತರಣೆ, ವಿತ್ತ, ಮಾನವ ಸಂಪನ್ಮೂಲ, ಖರೀದಿ ವಿಭಾಗಗಳನ್ನು ಸಂಯೋಜಿಸುವುದು, ವಿವಿಧ ವಿಭಾಗಗಳ ಮಾಹಿತಿಗಳಿಗೆ ಸಂಪರ್ಕ ಸೇತುವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News