×
Ad

ಸುಳ್ಯ;lಅಲೋಪತಿಗೆ ಸವಾಲೆಸೆದ ನಾಟಿ ವೈದ್ಯ ಪದ್ಧತಿ,ಪರಿವಾರಕಾನ ಪದ್ಮಯ್ಯ ಗೌಡರಿಂದ ಕಿಡ್ನಿ ಕಲ್ಲಿಗೆ ಔಷಧಿ,

Update: 2016-02-02 17:42 IST

10 ಸೆಂಟ್ಸ್ ಜಮೀನಿನಲ್ಲಿ ಗಿಡಮೂಲಿಕಾ ವನ ನಿರ್ಮಾಣ,

ಸುಳ್ಯ: ನಾಟಿ ವೈದ್ಯ ಪದ್ಧತಿಯಲ್ಲಿ ಕಿಡ್ನಿ ಕಲ್ಲಿಗೆ ಔಷಧಿ ನೀಡುವ ಪರಿವಾರಕಾನದ ಪದ್ಮಯ್ಯ ಗೌಡರು ಅಗತ್ಯ ಔಷಧಿ ಗಿಡಗಳಿಗಾಗಿ ಸ್ವಂತ ಗಿಡಮೂಲಿಕಾ ವನವನ್ನು ನಿರ್ಮಿಸಿದ್ದಾರೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಾಟಿ ವೈದ್ಯ ಪದ್ಧತಿ ಈಗಲೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಹಲವು ಖಾಯಿಲೆಗಳಿಗೆ ಅಲೋಪತಿ ಚಿಕಿತ್ಸೆ ವಿಫಲವಾದಾಗ ಜನ ಈಗಲೂ ನಾಟಿ ಔಷಧಿಯ ಕಡೆಗೆ ಮುಖ ಮಾಡುತ್ತಿದ್ದಾರೆ. ಕಳೆದ 25 ವರ್ಷಗಳಿಂದ ನಾಟಿ ವೈದ್ಯರಾಗಿ ಪ್ರಸಿದ್ಧಿ ಪಡೆದ ಪರಿವಾರಕಾನದ ಪದ್ಮಯ್ಯ ಗೌಡರು ವಿಶೇಷವಾಗಿ ಕಿಡ್ನಿ ಕಲ್ಲಿನ ಚಿಕಿತ್ಸೆ, ಮಹಿಳೆಯರ ಖಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಗಿಡಮೂಲಕೆಗಾಗಿ ತಮ್ಮದೇ ಔಷಧೀಯ ವನವನ್ನು ನಿರ್ಮಿಸಿದ್ದಾರೆ. ಮನೆಯಿಂದ ಅರ್ಧ ಕಿ.ಮೀ. ದೂರದಲ್ಲಿ 10 ಸೆಂಟ್ಸ್ ಜಮೀನು ಹೊಂದಿರುವ ಅವರು, ಅದರಲ್ಲಿ ಗಿಡಗಳನ್ನು ಬೆಳೆಸುತ್ತಿದ್ದಾರೆ.

ಕಿಡ್ನಿ ಕಲ್ಲಿನ ಚಿಕಿತ್ಸೆಗೆ ಹೆಚ್ಚಾಗಿ ಬಳಕೆಯಗುವ ಪಾಷಾಣ ಬೇಧಿ ಗಿಡಗಳನ್ನು ಅಲ್ಲಿ ಬೆಳೆಸಿದ್ದು, ಅದಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನು ಮಾಡಿದ್ದಾರೆ. 70ರಲ್ಲೂ 20ರ ಯುವಕರನ್ನೂ ನಾಚಿಸುವಂತೆ ದುಡಿಯುವ ಪದ್ಮಯ್ಯ ಗೌಡರು ಮನೆ ಬಳಕೆಗೆ ಬೇಕಾಗುವಷ್ಟು ತರಕಾರಿಯನ್ನು ಔಷಧಿಯ ಗಿಡಗಳೊಂದಿಗೆ ಬೆಳೆಸುತ್ತಿದ್ದಾರೆ. ಪದ್ಮಯ್ಯ ಗೌಡರ ತಾಯಿ ರಾಮಕ್ಕ ನಾಟಿ ವೈದ್ಯಯಾಗಿದ್ದವರು. ಅವರ ನಿಧನಾ ನಂತರ ಈ ಪರಂಪರೆಯನ್ನು ಪದ್ಮಯ್ಯ ಗೌಡರು ಮುಂದುವರಿಸಿದ್ದಾರೆ. ದೇಶಿಯವಾದ ನಾಟಿ ಔಷಧಿ ಪದ್ಧತಿ ಉಳಿಸಬೇಕೆಂಬ ಒಂದೇ ದೃಷ್ಠಿಯಿಂದ ಅವರು ಅದನ್ನು ಮುಂದುವರಿಸಿಕೊಂಡು ಬಂದಿದ್ದು, ಕಿಡ್ನಿ ಕಲ್ಲಿನಲ್ಲಿರುವ 10 ಎಂಎಂ ವರೆಗಿನ ಕಲ್ಲನ್ನು ತಮ್ಮ ನಾಟಿ ಔಷಧಿಯ ಮೂಲಕ ತೆಗೆಸಿದ್ದಾರೆ. ಪಿತ್ಥಕೋಶದಲ್ಲಿ 70 ಎಂಎಂ ಗಾತ್ರದ ಕಲ್ಲು ಹೊಂದಿರುವ ರೋಗಿಯೊಬ್ಬರನ್ನು ಅಲೋಪತಿ ವೈದ್ಯರೊಬ್ಬರು ಇವರ ಬಳಿಗೆ ಕಳುಹಿಸಿದ್ದು, ಅದನ್ನು ಇವರ ಔಷಧಿ ತೆಗೆಸಿದೆ. ಕಿಡ್ನಿ ವೈಫಲ್ಯ ಹೊಂದಿದವರಿಗೂ ಇವರು ಚಿಕಿತ್ಸೆಯನ್ನು ನೀಡುತ್ತಿದ್ದು, ಆರಂಭಿಕ ಹಂತದಲ್ಲಿದ್ದ ಸಾವಿರಾರು ಮಂದಿ ಗುಣಮುಖರಾಗಿದ್ದಾರೆ.

ಡಯಾಲಿಸಿಸ್ ಹಂತಕ್ಕೆ ಬಂದ ರೋಗಿಗಳಿಗೆ ಮಾತ್ರ ನಾಟಿ ಔಷಧಿಯಿಂದ ಗುಣಪಡಿಸಲು ಸಾಧ್ಯವಿಲ್ಲ ಎಂಬುದು ಇವರ ಅಭಿಪ್ರಾಯ. ರಾಜ್ಯ ವಿವಿಧೆಡೆ ಹಾಗೂ ನೆರೆ ರಾಜ್ಯಗಳಿಂದಲೂ ನಿತ್ಯ ಇವರಲ್ಲಿಗೆ ಔಷಧಿಗೆ ಜನರು ಬರುತ್ತಾರೆ. ಬಂದ ಎಲ್ಲರಿಗೂ ತಾಯಿ ಪಾಷಾಣಮೂರ್ತಿಯನ್ನು ನೆನೆದು ಔಷಧಿ ನೀಡುತ್ತೇನೆ. ಔಷಧಿಯೊಂದಿಗೆ ಪಥ್ಯ ಕೂಡಾ ಮಾಡಬೇಕಿದ್ದು, ಸರಿಯಾಗಿ ಔಷಧಿ ಸೇವಿಸಿದ ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಪದ್ಮಯ್ಯ ಗೌಡ. ಕೇವಲ ಔಷಧಿಯ ವೆಚ್ಚವನ್ನು ಮಾತ್ರ ಇವರು ಪಡೆಯುತ್ತಿದ್ದು, ಹಲವು ಬಡ ಜನರಿಗೆ ಅದನ್ನೂ ಉಚಿತವಾಗಿ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ನಾಟಿ ವೈದ್ಯ ಕ್ಷೇತ್ರದಲ್ಲಿ ಅವರ ಸೇವೆಯನ್ನು ಗುರುತಿಸಿ ವಿವಿಧ ಸಂಘ-ಸಂಸ್ಥೆಗಳು ಪದ್ಮಯ್ಯ ಗೌಡರನ್ನು ಸನ್ಮಾನಿಸಿ ಗೌರವಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News