×
Ad

ಕಾಲು ಕಳೆದುಕೊಳ್ಳಬೇಕಾದ ಯುವತಿಗೆ ಮರುಹುಟ್ಟು ಇಂಡಿಯಾನ ಆಸ್ಪತ್ರೆಯಲ್ಲಿ ಸಂಕೀರ್ಣ ಶಸ್ತ್ರ ಚಿಕಿತ್ಸೆ

Update: 2016-02-03 14:19 IST

ಮಂಗಳೂರು, ಫೆ.3: ಕ್ಯಾನ್ಸರ್‌ಕಾರಗ ಗಡ್ಡೆಯಿಂದ ಕಾಲು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದ 20 ಹರೆಯದ ಯುವತಿಗೆ ಸಂಕೀರ್ಣ ಶಸ್ತ್ರ ಚಿಕಿತ್ಸೆ ಮೂಲಕ ಇಂಡಿಯಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯು ಮರು ಹುಟ್ಟು ನೀಡಿದೆ.


ಆಸ್ಪತ್ರೆಯಲ್ಲಿಂದು ಅಪರೂಪದ ಯಶಸ್ವಿ ಶಸ್ತ್ರ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಜಲಾಲುದ್ದೀನ್ ಅಕ್ಬರ್, ಕಾಲಿನಲ್ಲಿ ಕಾಣಿಸಿಕೊಂಡ ಕ್ಯಾನ್ಸರ್ ಗೆಡ್ಡೆ ತೆಗೆಯಲು ಯುವತಿಯನ್ನು ಸಂಕೀರ್ಣ ಶಸ್ತ್ರ ಚಿಕಿತ್ಸೆಗೊಳಪಡಿಸಿ ಆಕೆ ಚೇತರಿಸಿಕೊಂಡಿದ್ದು, ಮುಂದಿನ ನಾಲ್ಕೈದು ವಾರಗಳಲ್ಲಿ ಆಕೆ ನಡೆದಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.


ಕಣ್ಣೂರಿನ ನಿವಾಸಿ 20ರ ಹರೆಯದ ಯುವತಿ ಎಡಗಾಲಲ್ಲಿ ಕ್ಯಾನ್ಸರ್‌ಕಾರಕ ಗಡ್ಡೆ ಬೆಳೆದು ನಡೆದಾಡಲು ಅಸಾಧ್ಯವಾಗಿತ್ತು. ಈ ಹಿಂದೆ ಗಡ್ಡೆ ತೆಗೆಯಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಮತ್ತೆ ಕಾಣಿಸಿಕೊಂಡಿದ್ದರಿಂದ ಆಕೆಯ ಪ್ರಾಣ ಉಳಿಸಲು ಎಡಗಾಲನ್ನು ಕತ್ತರಿಸಬೇಕೆಂಬ ಸಲಹೆ ವೈದ್ಯರಿಂದ ವ್ಯಕ್ತವಾಗಿತ್ತು. ಕೊನೆಗೆ ಆಕೆ ಇಂಡಿಯಾನ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು ಎಂದು ಡಾ. ಜಲಾಲುದ್ದೀನ್ ವಿವರಿಸಿದರು.


ಕೀಲುರೋಗ ತಜ್ಞರಾದ ಡಾ. ಇಮ್ತಿಯಾಝ್, ಡಾ. ಅಭಿಷೇಕ್, ಅರಿವಳಿಕೆ ತಜ್ಞ ಡಾ. ವಿನ್ಸೆಂಟ್ ಜತೆ 8 ಗಂಟೆಗಳ ಶಸ್ತ್ರ ಚಿಕಿತ್ಸೆಯ ಮೂಲಕ ಗಡ್ಡೆಯನ್ನು ತೆಗೆದು, ಕೃತಕ ಅಂಗಜೋಡಣೆ ಮೂಲಕ ಕಾಲನ್ನು ಉಳಿಸಲಾಗಿದೆ. ಇಂಥ ಪ್ರರಣ ಯಶಸ್ವಿಯಾಗಿರುವುದು ಭಾರತದಲ್ಲಿ ಇದು ಪ್ರಥಮವಾಗಿದೆ. ಕಾಲಿಗೆ ರಕ್ತವನ್ನು ಪೂರೈಸುವ ಅತೀ ಸಂಕೀರ್ಣವಾದ ನಾಳವಿದ್ದು, ಶಸ್ತ್ರ ಚಿಕಿತ್ಸೆಯ ಒಂದಿಷ್ಟು ಲೋಪವಾದರೂ ನೂಲಿನ ಎಳೆಯಂತಿರುವ ಈ ನಾಳಕ್ಕೆ ತೊಂದರೆಯಾದಲ್ಲಿ ರೋಗಿ ಮುಂದೆ ನಡೆದಾಡಲು ಸಾಧ್ಯವಾಗದೇ ಕಾಲನ್ನು ಕತ್ತರಿಸಬೇಕಾದ ಪರಿಸ್ಥಿತಿ ಬರಬಹುದು.

ಈ ಪ್ರಕರಣದಲ್ಲಿ ಯುವತಿ ಈ ಹಿಂದೆಯೇ ಕಾಲನ್ನು ಕತ್ತರಿಸಲು ಒಪ್ಪಿಗೆ ನೀಡದ್ದರಿಂದ, ಶಸ್ತ್ರ ಚಿಕಿತ್ಸೆ ನಡೆಸುವುದು ಕೂಡಾ ಸವಾಲಾಗಿತ್ತು ಎಂದವರು ಹೇಳಿದರು.


ಕಳೆದ ಸುಮಾರು ಎರಡು ವರ್ಷಗಳಿಂದ ಈ ಕಾಲಿನಲ್ಲಿನ ಗಡ್ಡೆ ಸಮಸ್ಯೆಯಿಂದಾಗಿ ಆಕೆಗೆ ನಡೆದಾಡಲು ಸಾಧ್ಯವಾಗಿರಲಿಲ್ಲ. ಈ ಹಿಂದೆ ಒಂದು ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಬಳಿಕ ಹಲವಾರು ಆಸ್ಪತ್ರೆಗಳಿಗೆ ಅಲೆದಾಡಿದ್ದ ಆಕೆಗೆ ಇಂಡಿಯಾನ ಆಸ್ಪತ್ರೆಯ ತಜ್ಞ ವೈದ್ಯರ ಮೂಲಕ ಹೊಸ ಜೀವನವನ್ನು ನೀಡಲು ಸಾಧ್ಯವಾಗಿದೆ. ಕ್ಯಾನ್ಸರ್ ರೋಗದಲ್ಲಿ ಮತ್ತೆ ಗೆಡ್ಡೆ ಬೆಳೆಯುವ ಸಾಧ್ಯತೆ ಇರುವುದರಿಂದ ಮುಂದೆ ಮತ್ತೆ ಯುವತಿಗೆ ರೇಡಿಯೋ ತೆರಪಿ ಒದಗಿಸಬೇಕಾಗುತ್ತದೆ. ಪ್ರಸಕ್ತ ಶಸ್ತ್ರ ಚಿಕಿತ್ಸೆಗಾಗಿ ಸುಮಾರು 2 ಲಕ್ಷ ರೂ. ವೆಚ್ಚವಾಗಿದೆ ಎಂದು ಡಾ. ಜಲಾಲುದ್ದೀನ್ ತಿಳಿಸಿದರು.


ಗೋಷ್ಠಿಯಲ್ಲಿ ಡಾ. ಇಮ್ತಿಯಾಝ್, ಡಾ. ಅಭಿಷೇಕ್, ಡಾ. ದೇವಾನಂದ ಶೆಟ್ಟಿ, ಕಾಸಿಂ ಹಾಗೂ ಭಾಸ್ಕರ ಅರಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News