ಸುಳ್ಯ: ಫೆ.5ರಂದು ಕಾಂಗ್ರೆಸ್ ಪಟ್ಟಿ ಬಿಡುಗಡೆ
ಸುಳ್ಯ: ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಫೆ.5ರಂದು ಬಿಡುಗಡೆಗೊಳಿಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ತಿಳಿಸಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದ್ದು, ಒಂದೆರಡು ಕಡೆ ಪೈಪೋಟಿಯಿದೆ. ನಮ್ಮೊಳಗಿದ್ದ ಎಲ್ಲ ಗೊಂದಲಗಳನ್ನು ನಿವಾರಿಸಿಕೊಂಡು ಚುನಾವಣೆಗೆ ಸಿದ್ಧಗೊಂಡಿದ್ದೇವೆ. ಹೀಗಾಗಿ ಸುಳ್ಯ ತಾಲೂಕು ಪಂಚಾಯತ್ ಹಾಗೂ ದ.ಕ. ಜಿಲ್ಲಾ ಪಂಚಾಯತ್‌ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಹೇಳಿದರು. ಗ್ರಾ.ಪಂ.ಗಳಿಗೆ ನೇರವಾಗಿ ಅನುದಾನ ನೀಡುವುದಾಗಿ ಹೇಳಿದ ಕೇಂದ್ರ ಸರಕಾರ ತನ್ನ ಭರವಸೆಯನ್ನು ಈಡೇರಿಸಿಲ್ಲ. ಆದರ್ಶ ಗ್ರಾಮ ಯೋಜನೆಗಿಂತ ರಾಜ್ಯಸರಕಾರದ ಗ್ರಾಮ ವಿಕಾಸ ಯೋಜನೆ ಅಭಿವೃದ್ಧಿ ದೃಷ್ಟಿಯಲ್ಲಿ ಹೆಚ್ಚು ಫಲಪ್ರದ. ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದ ಉದ್ಯೋಗ ಖಾತರಿ ಯೋಜನೆಯಿಂದ ಜನರಿಗೆ ಬಹಳಷ್ಟು ಉಪಯೋಗವಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ಮತದಾರರು ನಮ್ಮನ್ನು ಬೆಂಬಲಿಸಲಿದ್ದಾರೆ ಎಂದು ವೆಂಕಪ್ಪ ಗೌಡರು ಹೇಳಿದರು.
ವಿದ್ಯುತ್ ಸಮಸ್ಯೆಗೆ ಸರಕಾರವನ್ನು, ಅರಣ್ಯ ಸಚಿವರನ್ನು ದೂರುವ ಶಾಸಕರು ಕಳೆದ 22 ವರ್ಷಗಳಿಂದ ಸುಳ್ಯದಲ್ಲಿ ತಾನು ಶಾಸಕನಾದರೂ ಯಾಕೆ ಈ ಸಮಸ್ಯೆಗೆ ಪರಿಹಾರ ರೂಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. 5 ವರ್ಷ ಅವರದೇ ಸರಕಾರ ಇತ್ತು, ಸುಳ್ಯದವರೇ ಮುಖ್ಯಮಂತ್ರಿಯಾಗಿದ್ದರು. ಇಲ್ಲಿನವರೇ ಇಂಧನ ಸಚಿವರಾಗಿದ್ದರು. ಆದರೂ ನಮ್ಮ ಬೇಡಿಕೆ ಈಡೇರಲಿಲ್ಲ. ಹಾಗಾಗಿ ಶಾಸಕರು ಈಗ ನೀಡುವ ಜವಾಬು ನಮಗೆ ಸ್ವೀಕಾರವಲ್ಲ ಎಂದು ವೆಂಕಪ್ಪ ಗೌಡರು ಹೇಳಿದರು. ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಕಾಂಗ್ರೆಸ್ ನಾಯಕರಾದ ಕೆ.ಎಂ.ಮುಸ್ತಫ, ಪಿ.ಎ.ಮಹಮ್ಮದ್, ಅಶೋಕ್ ಚೂಂತಾರು, ಸತ್ಯಕುಮಾರ್ ಆಡಿಂಜ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.