×
Ad

ಉಳ್ಳಾಲ:ರಸ್ತೆಗೆ ಕಳಚಿ ಬಿದ್ದ ಹೈಟೆನ್ಶನ್ ವಿದ್ಯುತ್ ತಂತಿ, ತಪ್ಪಿದ ಭಾರೀ ದುರಂತ

Update: 2016-02-03 22:10 IST

ಉಳ್ಳಾಲ: ತೊಕ್ಕೊಟ್ಟು ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುತ್ತಿದ್ದ ಸಂದರ್ಭ ಕ್ರೇನ್ ಮೂಲಕ ಕಡಿದ ಮರ ವಿದ್ಯುತ್ ಕಂಬಕ್ಕೆ ಉರುಳಿಬಿದ್ದ ಪರಿಣಾಮ ಹೈಟೆನ್ಶನ್ ತಂತಿ ರಸ್ತೆಗೆ ಬಿದ್ದು ಸ್ಥಳೀಯರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದ ಘನೆ  ಬುಧವಾರ ಸಂಜೆ ವೇಳೆ ನಡೆದಿದೆ.

ತೊಕ್ಕೊಟ್ಟು ಫ್ಲೈಓವರ್ ಮತ್ತು ರಸ್ತೆ ಅಗಲೀಕರಣ ಕಾಮಗಾರಿ ಅತೀ ವೇಗದಿಂದ ನಡೆಯುತ್ತಿದ್ದು ತೆರವು ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದೆ. ಬುಧವಾರ ಬೆಳಿಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆ ಎದುರುಗಡೆ ಇದ್ದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ, ನೂತನ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿತ್ತು. ವಿದ್ಯುತ್ ಕಂಬದ ಸಮೀಪದಲ್ಲೇ ಇದ್ದ ಬೃಹತ್ ಗಾತ್ರದ ಮರವೊಂದನ್ನು ಕ್ರೇನ್ ಮೂಲಕ ತೆಗೆದ ಸಂದರ್ಭ ಆಕಸ್ಮಿಕವಾಗಿ ಮರಕ್ಕೆ ಕಟ್ಟಲಾಗಿದ್ದ ಹಗ್ಗ ತುಂಡಾಗಿ ನೂತನ ವಿದ್ಯುತ್ ಕಂಬದ ಮೇಲೆ ಉರುಳಿದೆ. ಇದರ ಪರಿಣಾಮ ಕಂಬ ಹಾನಿಯಾಗಿದ್ದು, ತಂತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡವಾಗಿ ಕಳಚಿ ಬಿದ್ದಿತ್ತು. ಇದೇ ಸಮಯದಲ್ಲಿ ಕೇರಳ ಕಡೆಯಿಂದ ಟೂರಿಸ್ಟ್ ಬಸ್ಸೊಂದು ತಂತಿಯ ಮೇಲೆಯೇ ಚಲಿಸಿದೆ.

ಇದರಿಂದ ಎರಡು ತಂತಿಗಳು ಒಂದಕ್ಕೊಂದು ಬೆಂಕಿಯ ಸ್ಪರ್ಶ ಉಂಟಾಯಿತು. ಕೂಡಲೇ ಸ್ಥಳೀಯರು ಹಾಗೂ ರಾ.ಹೆ. ಕಾಮಗಾರಿಯ ಕಾರ್ಮಿಕರು ಎರಡು ಕಡೆಯಿಂದ ಬರುವ ವಾಹನಗಳನ್ನು ತಡೆದು ನಿಲ್ಲಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ. ಘಟನೆಯಿಂದ ಅರ್ಧ ಗಂಟೆಯ ಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಪೊಲೀಸರು , ಸಾರ್ವಜನಿಕರು, ಹೆದ್ದಾರಿ ಕಾರ್ಮಿಕರು, ಮೆಸ್ಕಾಂ ಸಿಬ್ಬಂದಿ ಸೇರಿ ವಿದ್ಯುತ್ ತಂತಿಯನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News