ಮಂಗಳೂರು ; ಅತ್ಯಾಚಾರ ಆರೋಪಿಗೆ ಸಾಮಾಜಿಕ ಜೀವನದಲ್ಲೂ ಶಿಕ್ಷೆಯಾಗಬೇಕು: ಡಾ. ಸುನೀತಾ
ಮಂಗಳೂರು, ಫೆ. 4: ಅತ್ಯಾಚಾರ ಪ್ರಕರಣದ ಆರೋಪಿಗಳ ಮುಖಪರಿಚಯವನ್ನು ಸಾರ್ವಜನಿಕರಿಗೆ ತೋರ್ಪಡಿಸುವ ಮೂಲಕ ಪ್ರಕರಣದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಸಾಮಾಜಿಕ ಜೀವನದಲ್ಲಿಯೂ ಆರೋಪಿ ಶಿಕ್ಷೆ ಅನುಭವಿಸುವಂತಾಗಬೇಕು ಎಂದು ಅ ಎಂದು ಪದ್ಮಶ್ರೀ ಪುರಸ್ಕೃತೆ ಸಾಮಾಜಿಕ ಕಾರ್ಯಕರ್ತೆ ಡಾ.ಸುನೀತಾ ಕೃಷ್ಣನ್ ಹೇಳಿದ್ದಾರೆ.
ನಗರದ ರೋಶನಿ ನಿಲಯ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಡಾ.ಸುನೀತಾ ಅವರು ಪದ್ಮಶ್ರೀ ಪುರಸ್ಕೃತರಾದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಇಂದು ಆಯೋಜಿಸಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅತ್ಯಾಚಾರಕ್ಕೊಳಗಾದ ಸಂತ್ರಸ್ತರನ್ನು ಅಪರಾಯಂತೆ ನೋಡಬಾರದು. ಆಕೆಗೆ ಆಕೆಗೆ ಸಾಂತ್ವಾನದ ಜತೆಗೆ ಮಾನಸಿಕ ಸ್ಥೆರ್ಯವನ್ನು ತುಂಬಬೇಕು ಎಂದವರು ಹೇಳಿದರು.
ವೇಶ್ಯಾವಾಟಿಕೆಯಲ್ಲಿ ಶೇ.88 ಮಂದಿ ಬಲವಂತವಾಗಿ ತೊಡಗಿಕೊಂಡಿದ್ದು, ಬೃಹತ್ ಜಾಲವಾಗಿ ಹರಡಿದೆ. ಕಳೆದ 20 ವರ್ಷದಲ್ಲಿ 15,600 ಮಂದಿ ಹೆಣ್ಣುಮಕ್ಕಳನ್ನು ವೈಶ್ಯಾವಾಟಿಕೆ ಜಾಲದಿಂದ ಹೊರತರಲಾಗಿದ್ದರೆ, 8,000 ಮಂದಿ ಜಾಲದೊಳಗೆ ಹೋಗದಂತೆ ತಡೆಯಲಾಗಿದೆ ಎಂದು ಅವರು ತಿಳಿಸಿದರು.
ವೇಶ್ಯಾವಾಟಿಕೆ ಚಟುವಟಿಕೆಗಾಗಿ ಹೆಣ್ಣು ಮಕ್ಕಳನ್ನು ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಪತ್ತೆ ಹಚ್ಚಿ ರಕ್ಷಿಸುವ ಕಾರ್ಯವನ್ನು ಪ್ರಸ್ತುತ ತಮ್ಮ ಪ್ರಜ್ವಲ ಎಂಬ ಸರಕಾರೇತರ ಸಂಸ್ಥೆ ಮೂಲಕ ನಡೆಸಲಾಗುತ್ತಿದೆ. ವೈಶ್ಯಾವಾಟಿಕೆಯಲ್ಲಿ ತೊಡಗಿ ಹೊರ ಬಂದಿರುವ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪುನರ್ವವಸತಿ ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಾಲೇಜಿನ ನಿರ್ದೇಶಕಿ ಡಾ.ಫಿಲೋಮಿನಾ ಡಿಸೋಜ, ಡೀನ್ ಡಾ.ರಮಿಳಾ ಶೇಖರ್ ಉಪಸ್ಥಿತರಿದ್ದರು. ಪ್ರಿನ್ಸಿಪಾಲ್ ಡಾ.ಸೋಫಿಯಾ ಫರ್ನಾಂಡಿಸ್ ಸ್ವಾಗತಿಸಿದರು.
ಗುರಿ ಸಾಧನೆಗೆ ದಾರಿ ತೋರಿದ ಜೈಲು ವಾಸ!
''ಅಸ್ಪಷ್ಟವಾದ ಗುರಿಯೊಂದಿಗೆ ಕಾಲೇಜು ಸೇರಿದ ನನಗೆ ತನ್ನ ಗುರಿಯನ್ನು ಸ್ಪಷ್ಟ ಪಡಿಸಲು ಕಾಲೇಜು ಜೀವನ ಪ್ರೇರಣೆ ನೀಡಿತು. ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ಜೈಲಿನಲ್ಲಿ ಕಳೆದ ಅನುಭವ ಗುರಿ ಸಾಧನೆಗೆ ದಾರಿಯಾಯಿತು'' ಎಂದು ಡಾ. ಸುನೀತಾ ಕೃಷ್ಣನ್ ಅಭಿಪ್ರಾಯಿಸಿದ್ದಾರೆ.
ಹೆಣ್ಣು ಮಕ್ಕಳ ಕಳ್ಳ ಸಾಗಾಟವನ್ನು ಪತ್ತೆ ಹಚ್ಚಿ ರಕ್ಷಿಸುತ್ತಿರುವ 'ಪ್ರಜ್ವಲ' ಎಂಬ ಸರಕಾರೇತರ ಸಂಸ್ಥೆಯ ಸಂಸ್ಥಾಪಕಿಯಾಗಿರುವ ಡಾ.ಸುನೀತಾ ಕೃಷ್ಣನ್ ಅವರ ಗುರುತರ ಕಾರ್ಯವನ್ನು ಗುರುತಿಸಿ 2015-16ನೇ ಸಾಲಿನಲ್ಲಿ ಕೇಂದ್ರ ಸರಕಾರ ಪದ್ಮಶ್ರೀ ನೀಡಿ ಪುರಸ್ಕರಿಸಿದೆ.
ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ಪೂರೈಸಿರುವ ಅವರು, ರೋಶನಿ ನಿಲಯ ಕಾಲೇಜಿನಲ್ಲಿ ಸಾಮಾಜಿಕ ಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.