ಮಂಗಳೂರು: ತಂತ್ರಜ್ಞಾನದ ಬಳಕೆ ಮಿತಗೊಳಿಸಿ - ಪ್ರಸನ್ನ
ಮಂಗಳೂರು, ಫೆಬ್ರವರಿ 4, ತಂತ್ರಜ್ಞಾನವನ್ನೇ ವಿಜ್ಞಾನ ಎಂದು ತಪ್ಪಾಗಿ ಅರ್ಥಮಾಡಿಕೊಂಡಿರುವ ನಾವು ತಂತ್ರಜ್ಞಾನದ ಆವಿಷ್ಕಾರಗಳಾದ ಉಪಕರಣಗಳ ದಾಸರಾಗುತ್ತಿದ್ದೇವೆ. ಇದನ್ನು ಮಿತಗೊಳಿಸಿ ಶ್ರಮ ಸಹಿತ ಸರಳ ಜೀವನಕ್ಕೆ ಮರಳುವುದರಲ್ಲಿಯೇ ಮನುಷ್ಯನ ಭವಿಷ್ಯದ ನೆಮ್ಮದಿ ಅಡಗಿದೆ ಎಂದು ದೇಸೀ ಚಿಂತಕ ಪ್ರಸನ್ನ ಹೆಗ್ಗೋಡು ಹೇಳಿದರು.
ಅವರು ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯು ಆಯೋಜಿಸಿದ ನಿತ್ಯೋತ್ಸವ ಚಿಂತನ ಮಾಲಿಕೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಪ್ರಬಲಗೊಳ್ಳುತ್ತರುವ ಜಾತೀಯತೆ, ಧಾರ್ಮಿಕತೆಯ ಅಮಲು ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಬಂಡವಾಳಶಾಹಿಗಳ ಪ್ರಾಬಲ್ಯ ನಮ್ಮ ಕೃಷಿ ಹಾಗೂ ದೇಸೀ ಕೈಗಾರಿಕೆಗಳನ್ನು ನಾಶಮಾಡುತ್ತಿದ್ದು ಯುವತಲೆಮಾರು ಈ ಬಗೆಗೆ ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಹೇಳಿದರು.
ಉಪನ್ಯಾಸದ ಬಳಿಕ ನಡೆದ ಸವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾವು ವಾದ ಮಾಡುವುದರಲ್ಲಿ ನಿಸ್ಸೀಮರು. ಪ್ರತಿಯೊಂದಕ್ಕೂ ನಮಲ್ಲಿ ಸಮರ್ಥನೆಗಳಿವೆ. ವಿವೇಕಾನಂದ, ಗಾಂಧಿ, ಅಂಬೇಡ್ಕರ್, ಲೋಹಿಯಾ ಹೀಗೆ ಯಾರನ್ನು ಬೇಕಾದರೂ ಉದಾಹರಿಸಿ ನಾವು ನಮ್ಮನ್ನು ಸಮರ್ಥಿಸಿಕೊಳ್ಳುತ್ತೇವೆ. ಅದು ಜಾಣತನದ ದಾರಿ. ನಮಗೆ ಬೇಕಿರುವುದು ಜಾಣತನವಲ್ಲ. ಆತ್ಮಸಾಕ್ಷಿಯ ನಡಿಗೆ ಎಂದರು.
ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಬಿ ಶಿವರಾಮ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪವಿತ್ರ ನಿರೂಪಿಸಿದರು.