×
Ad

ಸುಳ್ಯ : ಫೆಬ್ರವರಿ 14ರಂದು ದುಗ್ಗಲಡ್ಕದಲ್ಲಿ ತುಳು ಮಿನದನ

Update: 2016-02-04 17:49 IST

ಸುಳ್ಯ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ದುಗ್ಗಲಡ್ಕದ ಕುರಲ್ ತುಳುಕೂಟ ಹಾಗೂ ಕೊಯಿಕುಳಿ ಮಿತ್ರ ಯುವಕ ಮಂಡಲಗಳ ಆಶ್ರಯದಲ್ಲಿ ಸುಳ್ಯ ತುಳು ಮಿನದನ ಕಾರ್ಯಕ್ರಮ ಫೆಬ್ರವರಿ 14ರಂದು ದುಗ್ಗಲಡ್ಕದ ಸರ್ಕಾರಿ ಪ್ರೌಢಶಾಲಾ ವಠಾರದಲ್ಲಿ ನಡೆಯಲಿದೆ.

ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕೆ.ಟಿ.ವಿಶ್ವನಾಥ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮಗಳ ವಿವರ ನೀಡಿದರು. 14ರ ಮಧ್ಯಾಹ್ನ 2 ಗಂಟೆಗೆ ಸುಳ್ಯ ಎಪಿಎಂಸಿ ಅಧ್ಯಕ್ಷ ಜಾಕೆ ಮಾಧವ ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ವೆಂಕಟ್ರಮಣ ಸೊಸೈಟಿಯ ಸ್ಥಾಪಕಾಧ್ಯಕ್ಷ ಪಿ.ಸಿ.ಜಯರಾಮ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ತುಳುನಾಡಿನ ವಿವಿಧ ಜಾನಪದ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಸಂಜೆ ನಾಲ್ಕು ಗಂಟೆಗೆ ಮದುವೆಗದ್ದೆ ಬೋಜಪ್ಪ ಗೌಡ ಅಧ್ಯಕ್ಷತೆಯಲ್ಲಿ ತುಳು ನಾಡ್ದ ಜಾನಪದ ಗೊಬ್ಬುಲು ಕುರಿತಾಗಿ ವಿಚಾರಗೋಷ್ಠಿ ನಡೆಯಲಿದ್ದು, ದೊಡ್ಡಣ್ಣ ಬರೆಮೇಲು, ನಂದರಾಜ ಸಂಕೇಶ ಹಾಗೂ ಚಂದ್ರಶೇಖರ ಪೇರಾಲು ವಿಚಾರ ಮಂಡಿಸಲಿದ್ದಾರೆ. ಆ ನಂತರ ಸಂಜೀಪ ಕುದ್ಪಾಜೆಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಆರೂವರೆಯಿಂದ ಬಾಲ ನಟ ತುಷಾರ್ ಗೌಡರಿಂದ ಜಾನಪದ ನೃತ್ಯ ಮತ್ತು ಸುರೇಶ್ ಅತ್ತಾವರ ನಿರ್ದೇಶನದ ಚಕ್ರಪಾಣಿ ನೃತ್ಯಕಲಾ ಕೇಂದ್ರದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಏಳು ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಶಾಸಕ ಎಸ್.ಅಂಗಾರ, ತುಳು ಅಕಾಡೆಮಿ ಅಧ್ಯಕ್ಷೆ ಜಾನಕಿ ಎಂ.ಬ್ರಹ್ಮಾವರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಚಿತ್ರ ನಟಿ ಶೋಭಾ ರೈ ತಂಡದವರಿಂದ ಬಲೆ ತೆಲಿಪಾಲೆ ಹಾಸ್ಯ ಕಾರ್ಯಕ್ರಮ ಮಂಗಳೂರು ನೀನನಾಥ ನಿರ್ದೇಶನದ ‘ಮುದ್ದಣ್ಣಗ್ ಪ್ರಮೋಶನ್’ ಹಾಸ್ಯ ನಾಟಕ, 12ರಿಂದ ಬೆಳಿಗ್ಗೆಯವರೆಗೆ ಗೆಜ್ಜೆದ ಪೂಜೆ ಯಕ್ಷಗಾನ ನಡೆಯಲಿದೆ ಎಂದವವರು ಹೇಳಿದರು.

ಕುರೆಲ್ ತುಳುಕೂಟದ ಗೌರವಾಧ್ಯಕ್ಷ ಸಿರಿಲ್ ಡಿ ಸೋಜ, ಕಾರ್ಯದರ್ಶಿ ಶಶಿಕಲಾ ನೀರಬಿದಿರೆ, ಮಿತ್ರ ಯುವಕ ಮಂಡಲದ ಅಧ್ಯಕ್ಷ ಅಧ್ಯಕ್ಷ ಆನಂದ ನೀರಬಿದಿರೆ, ಕಾರ್ಯದರ್ಶಿ ರಮೇಶ್ ನೀರಬಿದಿರೆ, ಎಂ.ಜೆ. ಶಶಿಧರ, ನಾರಾಯಣ ಟೈಲರ್, ರಾಘವ, ಕೆ.ಟಿ.ಭಾಗೀಶ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News