×
Ad

ಮೂಡುಬಿದಿರೆ: ಪೊಲೀಸ್ ಮತ್ತು ಮಾಧ್ಯಮದ ನಡುವೆ ಸೌಹಾರ್ದಯುತ ಸಂಬಂಧ ಬೇಕು, ಎಸ್.ಐ. ಅನಂತ ಪದ್ಮನಾಭ

Update: 2016-02-04 18:03 IST

ಆಳ್ವಾಸ್ ಅಭಿವ್ಯಕ್ತಿ ಮೀಡಿಯಾ ಕ್ಲಬ್‌ನಲ್ಲಿ ಎಸ್.ಐ. ಅನಂತ ಪದ್ಮನಾಭ ಅಭಿಮತ

ಮೂಡುಬಿದಿರೆ : ಇಂದು ದೃಶ್ಯ ಹಾಗೂ ಪ್ರಿಂಟ್ ಮಾಧ್ಯಮಗಳು ತೀವ್ರ ಪೈಪೋಟಿಯ ಕ್ಷೇತ್ರವಾಗಿ ಬೆಳೆಯುತ್ತಿದೆ. ಇಂದು ಏನೇ ಘಟನೆ ನಡೆದರೂ ಜನರು ಮೊದಲು ಮಾಹಿತಿ ನೀಡುವುದು ಮಾಧ್ಯಮಕ್ಕೆಯೇ ಹೊರತು ಪೋಲೀಸ್‌ಗಲ್ಲ. ಕೆಲವು ಸಂದರ್ಭಗಳಲ್ಲಿ ಕಾನೂನು ಕ್ರಮಗಳು ಪೂರ್ಣಗೊಳ್ಳುವವರೆಗೂ ಮಾಧ್ಯಮದವರು ಕಾಯಬೇಕಾಗುತ್ತದೆ. ಇಲ್ಲದಿದ್ದರೆ ಮುಖ್ಯವಾದ ಸಾಕ್ಷ್ಯಗಳು ನಾಶವಾಗುವ ಸಾಧ್ಯತೆಯಿರುತ್ತದೆ ಆದ್ದರಿಂದ ಪೋಲೀಸ್ ಮತ್ತು ಮಾಧ್ಯಮದ ನಡುವೆ ಸೌಹಾರ್ದಯುತ ಸಂಬಂಧ ಅಗತ್ಯವಾಗಿ ಬೇಕು ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಹೇಳಿದರು.   ಆಳ್ವಾಸ್ ಕಾಲೇಜಿನ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ‘ಅಭಿವ್ಯಕ್ತಿ’ ಮೀಡಿಯಾ ಕ್ಲಬ್ ವತಿಯಿಂದ ಗುರುವಾರ ನಡೆದ ‘ಮಾಧ್ಯಮ ಮತ್ತು ಪೋಲೀಸ್’ ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಅನೇಕ ಬಾರಿ ಮಧ್ಯಮಗಳಿಗೆ ಮುಂಚಿತವಾಗಿ ಮಾಹಿತಿ ಲಭ್ಯವಾಗುತ್ತದೆ. ಯಾವುದೇ ಪ್ರಥಮ ಮಾಹಿತಿ ಮಾಧ್ಯಮಕ್ಕೆ ದೊರೆತಾಗ ಅದನ್ನು ಎಲ್ಲಾ ವಿಧದಿಂದಲೂ ಪರಿಶೀಲಿಸಿ ಸಮಾಜಕ್ಕೆ ನೀಡುವುದು ಮಾಧ್ಯಮದ ಕೆಲಸ. ವೇಗವಾಗಿ ಸುದ್ಧಿ ನೀಡುವ ಒತ್ತಡದಿಂದಾಗಿ ತಪ್ಪು ಸುದ್ದಿಗಳು ಮಾಧ್ಯಮದಲ್ಲಿ ಪ್ರಕಟಗೊಂಡರೆ ಸಂಘರ್ಷಗಳಿಗೆ ಕಾರಣವಾಗಬಹುದು ಆದ್ದರಿಂದ ಯಾವುದೇ ಮಾಹಿತಿಯನ್ನು ಪೊಲೀಸರಲ್ಲಿ ಪರಿಶೀಲನೆ ನಡೆಸಿ ಸಮಾಜಕ್ಕೆ ನೀಡುವ ಮೂಲಕ ಪೊಲೀಸರಿಗೆ ಸಹಕಾರ ನೀಡುವ ಅಗತ್ಯವಿದೆ ಎಂದರು.  ನಂತರದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕೇಸುಗಳೆಂದರೇನು, ಸಿವಿಲ್ ಕೇಸುಗಳು ಯಾವ ರೀತಿಯಾಗಿ ಕ್ರಿಮಿನಲ್ ಕೇಸುಗಳಾಗಿ ಮಾರ್ಪಾಡಾಗುತ್ತವೆ ಎಂಬುದರ ಬಗ್ಗೆ, ಆರ್‌ಟಿಐ ಕಾಯಿದೆ, ನ್ಯಾಯಾಂಗ ವ್ಯವಸ್ಥೆ, ಟ್ರಾಫಿಕ್ ಸಮಸ್ಯೆಗಳು, ಸುರಕ್ಷತಾ ಕ್ರಮಗಳಲ್ಲಿ ಪೊಲೀಸರ ಕರ್ತವ್ಯದ ಬಗ್ಗೆ, ರಾಜಕೀಯಗಳಿಂದಾಗುವ ತೊಂದರೆಗಳು ಮುಂತಾದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಅನಂತ ಪದ್ಮನಾಭ ಅವರು ಪೋಲೀಸ್ ಮತ್ತು ಮಾಧ್ಯಮ ವ್ಯವಸ್ಥೆಗಳಿಗೆ ಸಂಬಂಧಿಸಿದ  ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.

 ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯ ಜೀವನ್‌ರಾಂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಸಂಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಶ್ರೀನಿವಾಸ ಪೆಜತ್ತಾಯ ವಂದಿಸಿದರು.

ವರ್ಷದ 365 ದಿನವೂ ಕೆಲಸ ಮಾಡುವ ಏಕೈಕ ವಿಭಾಗವೆಂದರೆ ಅದು ಪೋಲೀಸ್ ವಿಭಾಗ. ಅತೀ ಕಡಿಮೆ ಭ್ರಷ್ಟಾಚಾರ ಇರುವುದು ಕೂಡ ಪೋಲೀಸ್ ಇಲಾಖೆಯಲ್ಲಿ. ಆದರೂ ಜನ ಪೋಲೀಸ್ ಇಲಾಖೆಯನ್ನು ತಪ್ಪಾಗಿ ತಿಳಿಯುವ ಸಾಧ್ಯತೆಯಿದೆ. ಇಂದು ಸಾರ್ವಜನಿಕರು ಹಾಗೂ ಪೋಲೀಸ್ ಮಧ್ಯೆ ದೊಡ್ಡ ಕಂದಕವೇರ್ಪಟ್ಟಿದೆ. ಇದಕ್ಕೆ ಬಹುರ್ಶ ಇಲಾಖೆಯಲ್ಲಿನ ಒತ್ತಡಗಳೂ ಕಾರಣವಾಗಿದ್ದಿರಬಹುದು ಎಂದು ಅನಂತ ಪದ್ಮನಾಭ ವಿಷಾದ ವ್ಯಕ್ತಪಡಿಸಿದ ಅವರು ಸಿನೆಮಾ ಅಥವಾ ದಾರವಾಹಿಗಳಲ್ಲಿ ತೋರಿಸುವ ಪೊಲೀಸರಿಗೂ, ನಿಜವಾಗಿ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರಿಗೂ ತುಂಬಾ ವ್ಯತ್ಯಾಸವಿದೆ ಇದನ್ನು ತಾವೆಲ್ಲರೂ ತಿಳಿಯಬೇಕಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News