×
Ad

ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ - ಎಡರಂಗ ಮಹಾಮೈತ್ರಿ ಅಂತಿಮ ?

Update: 2016-02-04 18:44 IST

ಕೊಲ್ಕತ್ತಾ , ಫೆ. 4 : ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹೊಸತೊಂದು ಮಹಾಮೈತ್ರಿ ಏರ್ಪಡುವುದು ಬಹುತೇಖ ಖಚಿತ. ಯುಪಿಎ ಒಂದರ ಕೊನೆಗೆ ಪರಸ್ಪರ ಟಾಟಾ ಹೇಳಿದ್ದ ಕಾಂಗ್ರೆಸ್ ಹಾಗು ಎಡರಂಗ ಜೊತೆ ಸೇರಿ ದೀದಿಯ ತೃಣಮೂಲವನ್ನು ಎದುರಿಸಲು ಸಜ್ಜಾಗಿವೆ ಎಂದು ತಿಳಿದು ಬಂದಿದೆ. 
ಫೆಬ್ರವರಿ ಒಂದರಂದು ರಾಜ್ಯದ ಕಾಂಗ್ರೆಸ್ ನಾಯಕರ ತಂಡವೊಂದು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧೀ ಜೊತೆ ಅವರ ನಿವಾಸದಲ್ಲಿ  ಒಂದೂವರೆ ಗಂಟೆಯ ಸಭೆ ನಡೆಸಿದೆ. ಈ ಸಂದರ್ಭದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಅಧೀರ್ ರಂಜಾನ್ ಚೌಧುರಿ ಅವರ ನೇತೃತ್ವದ ಈ ನಿಯೋಗ ಎಡರಂಗದೊಂದಿಗೆ ಕೈ ಜೋಡಿಸಿದರೆ ಪಕ್ಷಕ್ಕೆ ಲಾಭವಿದೆ ಎಂದು ರಾಹುಲ್ ಗೆ ಮನವರಿಕೆ ಮಾಡಿದೆ ಎಂದು ತಿಳಿದು ಬಂದಿದೆ. 
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಹುಲ್ ಈ ಬಗ್ಗೆ ಸೋನಿಯಾ ಗಾಂಧೀ ಅವರಲ್ಲಿ ಚರ್ಚಿಸಿ ಶೀಘ್ರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ . 
ಎಡರಂಗ ಅತಿದೊಡ್ಡ ಪಕ್ಷ ಸಿಪಿಎಂ ನೂತನ  ಮೈತ್ರಿ ಕುರಿತು ಶೀಘ್ರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ತಿಂಗಳ 12-13 ರಂದು ಕೊಲ್ಕತ್ತಾದಲ್ಲಿ ಪಕ್ಷದ ರಾಜ್ಯ ಸಮಿತಿ ಹಾಗು16 ರಂದು ಪಾಲಿಟ್ ಬ್ಯೂರೋ ಸಭೆ ನಡೆಯಲಿದೆ. ಅಂತಿಮವಾಗಿ ಫೆ. 17-18 ರಂದು ನಡೆಯುವ ಪಕ್ಷದ ಅತ್ಯುನ್ನತ ನೀತಿ ನಿರ್ಧಾರಕ ಕೇಂದ್ರ ಸಮಿತಿ ಸಭೆಯಲ್ಲಿ ಈ  ಅಂತಿಮ ತೀರ್ಮಾನ ಹೊರಬೀಳಲಿದೆ. 
ಮಾಜಿ ಮುಖ್ಯ ಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಸಹಿತ ಸಿಪಿಎಂ ನ ಎಲ್ಲ ರಾಜ್ಯ ಮುಖಂಡರೂ ತೃಣಮೂಲವನ್ನು ಎದುರಿಸಲು ಎಲ್ಲ ಪ್ರಜಾಸತ್ತಾತ್ಮಕ ಹಾಗು ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂದು ಹೇಳಿರುವುದು ಮೈತ್ರಿಗೆ ಅವರ ಒಪ್ಪಿಗೆಯಿದೆ ಎಂಬುದರ ಸೂಚನೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News