ಮಂಗಳೂರು: ಎತ್ತಿನಹೊಳೆ- ಕುಮ್ಮಿ ಹಕ್ಕು ಸಮಸ್ಯೆ ಬಗ್ಗೆ ಕಾಂಗ್ರೆಸ್‌ನಿಂದ ಸುಳ್ಳು ಆರೋಪ: ಪಾಲೆಮಾರ್
ಮಂಗಳೂರು, ಫೆ. 4: ಎತ್ತಿನಹೊಳೆ ಹಾಗೂ ಕುಮ್ಕಿ ಹಕ್ಕು ಸಮಸ್ಯೆ ಸೃಷ್ಟಿಸಿದ್ದು ಬಿಜೆಪಿಯವರು ಎಂಬುದಾಗಿ ಸಚಿವ ವಿನಯಕುಮಾರ್ ಸೊರಕೆ ನೀಡಿರುವ ಹೇಳಿಕೆ ಶುದ್ಧ ಸುಳ್ಳು. ಕಾಂಗ್ರೆಸ್‌ನವರು ಜನರ ಹಾದಿ ತಪ್ಪಿಸಲಷ್ಟೇ ಹೇಳಿಕೆ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತ ಕಾಲದಲ್ಲಿ ಡಿಪಿಆರ್ ಮೂಲಕ ಯೋಜನೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದಷ್ಟೇ, ಆದರೆ ಯೋಜನೆಯನ್ನು ತೆಗೆದುಕೊಂಡು ಅನುಷ್ಠಾನಿಸಿದ್ದು ಕಾಂಗ್ರೆಸ್ ಸರ್ಕಾರ. ಇಂದು ಯೋಜನೆಗೂ ಸರ್ಕಾರ ಹಣ ಮಂಜೂರು ಮಾಡಿದೆ. ಅದನ್ನು ನಿಲ್ಲಿಸಬಹುದಾಗಿತ್ತು ಯೋಜನೆ ರದ್ದು ಮಾಡುವ ಅಧಿಕಾರ ಕಾಂಗ್ರೆಸ್ ಜನಪ್ರತಿನಿಧಿಗಳಿಗಿಲ್ಲವೇ ಎಂದವರು ಪ್ರಶ್ನಿಸಿದರು.
ಎತ್ತಿನಹೊಳೆ ಡಿಪಿಆರ್ ( ಯೋಜನಾ ವಿಸ್ತೃತ ವರದಿ) ತಯಾರಿಸುವಾಗ ತಾನು ಸಚಿವನಾಗಿದ್ದೆ. ಬಿಜೆಪಿ ಸರ್ಕಾರ ಎತ್ತಿನಹೊಳೆ ಯೋಜನೆ ಡಿಪಿಆರ್ ಮಾತ್ರ ತಯಾರಾಗಿತ್ತು. ಸರ್ಕಾರ ಕೇವಲ 2 ಕೋಟಿ ರೂ. ನೀಡಿತ್ತು ಅದನ್ನು ಅನುಷ್ಠಾನಿಸಿದ್ದು ಕಾಂಗ್ರೆಸ್ ಸರ್ಕಾರ. ಆದರೆ ಇಂದು ಬಿಜೆಪಿ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದರು.
ಬಿಜೆಪಿಯವರೇ ಕುಮ್ಕಿ ಸಮಸ್ಯೆ ಸೃಷ್ಟಿಸಿದ್ದು ಎಂದಿದ್ದಾರೆ. ಸಚಿವರು- ಜನಪ್ರತಿನಿಧಿಗಳಾಗಿ ಈ ಮಾತು ಹೇಳಬಾರದಿತ್ತು. ಬಿಜೆಪಿ ಆಡಳಿತ ಕಾಲದಲ್ಲಿ ಇದೇ ಕಾಂಗ್ರೆಸ್‌ನವರು ಕುಮ್ಕಿ ಹಕ್ಕು ಸಮಸ್ಯೆ ಸೃಷ್ಟಿಸಿದ್ದರು. ಬಿಜೆಪಿ ಆಡಳಿತ ಕಾಲದಲ್ಲಿ ಕುಮ್ಮಿ ಸಮಸ್ಯೆ ನಿವಾರಿಸಲು ಮುಂದಾದಾಗ ಕೃಷಿಕರೊಬ್ಬರು ಕೋರ್ಟ್ ಮೊರೆ ಹೋಗಿದ್ದರು. ಅವರ ಹೆಸರಿನೊಂದಿಗೆ ಭಟ್ ಎಂಬುದಾಗಿ ಇದ್ದ ಮಾತ್ರಕ್ಕೆ ಅವರು ಬಿಜೆಪಿಯವರು ಎಂದೇ ಬಾವಿಸಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕುಮ್ಕಿ ಹಕ್ಕಿನ ಸಮಸ್ಯೆ ನೀಗಿಸುವ ಭರವಸೆ ನೀಡಿತ್ತು. ಹೀಗಾಗಿ ಕಾಂಗ್ರೆಸ್ ಈಗ ನ್ಯಾಯಾಲಯದಲ್ಲಿ ಅಫಿದವಿತ್ ಸಲ್ಲಿಸಿ ಸಮಸ್ಯೆ ನೀಗಿಸಲು ಮುಂದಾಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
9/11 ಹಾಗೂ 11/ ಛಿ ಇವುಗಳನ್ನು ಅರಿವಿದ್ದೋ ಇಲ್ಲದೋ ದಾರಿ ತಪ್ಪಿಸುವ ಕೆಲಸ ಮಾಡುತಿತಿರುವುದು ಶುದ್ದ ತಪ್ಪು. ಈ ಬಗ್ಗೆ ಸರ್ಕಾರ ಕೇವಲ ಕಾಟಾಚಾರಕ್ಕೆ ಆದೇಶ ಮಾಡಿದೆ. ಆದರೆ ಜನತೆ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಗೆ ಮುಂದಾದಾಗ ಅಧಿಕಾರಿಗಳು ಸ್ವೀಕರಿಸುತ್ತಿಲ್ಲ ಎಂದರು.
ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದಕ್ಕೆ ಗಮನಕೊಡುವುದು ಉಸ್ತುವಾರಿ ಮಂತ್ರಿಗಳ ಕರ್ತವ್ಯ. ಆದರೆ ಅವಿಭಜಿತ ಜಿಲ್ಲೆಯ ಮಂತ್ರಿಗಳಿಬ್ಬರು ಒಂದೊಂದು ತರ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳಿಗೆ ತೆಂಗಿನಕಾಯಿ ಒಡೆಯುವ ಮೂಲಕ ತಮ್ಮ ಸರ್ಕಾರದ ಸಾಧನೆ ಎನ್ನುತ್ತಿದ್ದಾರೆ ಎಂದು ಎಂದು ಟೀಕಿಸಿದರು.
ಮಾಜಿ ಮೇಯರ್ ಶಂಕರ್ ಭಟ್, ಮನಪಾ ಮಾಜಿ ಸದಸ್ಯ ಭಾಸ್ಕರ್ ಉಪಸ್ಥಿತರಿದ್ದರು.