×
Ad

ಕೋಕ್ ಹಾರುಬೂದಿಯಿಂದ ಸಮಸ್ಯೆಗೀಡಾದ ಜೋಕಟ್ಟೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ

Update: 2016-02-04 20:32 IST

ಡಿಸಿಯೆದುರು ಕಂಪೆನಿ ವಿರುದ್ದ ಅಸಮಾಧಾನ ತೋಡಿಕೊಂಡ ಗ್ರಾಮಸ್ಥರು,

ಮಂಗಳೂರು,ಫೆ.4: ಎಂ.ಆರ್.ಪಿ.ಎಲ್‌ನ ಕೋಕ್ ಸಲ್ಪರ್ ಘಟಕದಿಂದ ಹೊರಬಿಡಲಾಗುತ್ತಿರುವ ಹಾರುಬೂದಿಯಿಂದ ಸಮಸ್ಯೆಗೊಳಗಾಗಿರುವ ಜೋಕಟ್ಟೆ ಗ್ರಾಮದ ನಿರ್ಮುಂಜೆ, ಹರಿಕೊಳ, ಪಂಚಾಯತ್ ಗುಡ್ಡೆ ಪ್ರದೇಶಗಳಿಗೆ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಸ್ಥಳೀಯರು ಕೋಕ್ ಸಲ್ಪರ್ ಘಟಕದಿಂದ ಹೊರಬರುತ್ತಿರುವ ಹಾರುಬೂದಿಯಿಂದ ಜೋಕಟ್ಟೆ ಪರಿಸರದಲ್ಲಿ ನಿರ್ಮಾಣವಾಗಿರುವ ಜಲ, ವಾಯು, ಶಬ್ದಮಾಲೀನ್ಯದ ಬಗ್ಗೆ ಜಿಲ್ಲಾಧಿಕಾರಿಗಳ ಎದುರು ತಮ್ಮ ಅಸಮಾಧಾನವನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೈಗಾರಿಕೆಗಳಲ್ಲಿ ಮಾಲೀನ್ಯ ಪ್ರಮಾಣ ಬರುವುದು ಸಾಮನ್ಯವಾದರು ಎಂಆರ್‌ಪಿಎಲ್ ಕೋಕ್ ಸಲ್ಪರ್ ಘಟಕದಿಂದ ಹೊರಬರುತ್ತಿರುವ ಮಾಲೀನ್ಯ ಪ್ರಮಾಣ ಜಾಸ್ತಿ ಇದೆ ಎಂಬುದು ವೀಕ್ಷಣೆಯಿಂದ ತಿಳಿದುಬಂದಿದೆ . ಎಂ.ಆರ್.ಪಿ.ಎಲ್ ಅಧಿಕಾರಿಗಳು ಮಾಲೀನ್ಯವನ್ನು ನಿಯಂತ್ರಿಸಲು ಕ್ರಮಕೈಗೊಂಡಿರುವುದು ಕಾಣಿಸುತ್ತಿಲ್ಲ. ಕಾನೂನು ಪ್ರಕಾರ ಅವರಿಗೆ ಕೊಟ್ಟ ಭೂಮಿಯಲ್ಲಿ ಹಸೀರಿಕರಣವನ್ನು ಮಾಡಲಾಗಿಲ್ಲ. ಈ ಬಗ್ಗೆ ರಾಜ್ಯ ಸರಕಾರಕ್ಕೆ ವರದಿ ನೀಡಲಾಗುವುದು ಎಂದು ತಿಳಿಸಿದರು.

  ಪರಿಸರ ಮಾಲೀನ್ಯ ನಿಯಂತ್ರಣಾಧಿಕಾರಿ ರಾಜಶೇಖರ್ ಪುರಾಣಿಕ್, ಎಂಆರ್‌ಪಿಎಲ್ ನಿರ್ದೇಶಕರುಗಳಾದ ಲಕ್ಷ್ಮೀನಾರಯಣ, ಸುಶೀಲ್‌ಚಂದ್ರ ಮತ್ತು ಎಸ್‌ಇಝಡ್ ಅಧಿಕಾರಿಗಳೊಂದಿಗೆ ಹಲವು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆಯ ಅಂಗಳದಲ್ಲಿ ಇದ್ದ ಕೋಕ್ ಹುಡಿಯ ದೂಳನ್ನು ಜನರು ತಮ್ಮ ಕೈಗೆ ಮೆತ್ತಿಕೊಂಡು ಜಿಲ್ಲಾಧಿಕಾರಿಗೆ ತೋರಿಸಿದರು. ಮನೆಯೊಂದರ ಬಾವಿಯನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ಬಾವಿಯ ನೀರನ್ನು ಸಂಗ್ರಹಿಸಿ ಕೈಗೆ ಮತ್ತು ತಟ್ಟೆಯಲ್ಲಿ ನೀರನ್ನು ಹಾಕಿ ಪರಿಶೀಲನೆ ನಡೆಸಿದರು. ಮನೆಯೊಳಗೆ ಸೇರಿಕೊಂಡಿದ್ದ ಕೋಕ್ ಹುಡಿಯ ದೂಳನ್ನು ಜಿಲ್ಲಾಧಿಕಾರಿಗಳಿಗೆ ತೋರಿಸಲಾಯಿತು. ಮನೆಯ ಪಾತ್ರೆಗೆ ಅಂಟಿಕೊಂಡಿದ್ದ ಕೋಕ್ ಹುಡಿಯ ದೂಳನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು. ನಾಗರೀಕರು ಶಬ್ದಮಾಲೀನ್ಯವಾಗುತ್ತಿರುವ ಬಗ್ಗೆಯೂ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ನಂತರದಲ್ಲಿ ಜಿಲ್ಲಾಧಿಕಾರಿಗಳು ಕೋಕ್ ಸಲ್ಪರ್ ಘಟಕವನ್ನು ವೀಕ್ಷಣೆ ನಡೆಸಿದರು.

ನಿರ್ಮುಂಜೆಯಲ್ಲಿ ಹದಗೆಟ್ಟಿರುವ ಆರೋಗ್ಯ:

 ಕೋಕ್ ಸಲ್ಪರ್ ಘಟಕದಿಂದ ನಿರ್ಮುಂಜೆ ಗ್ರಾಮದ ಹಲವರಲ್ಲಿ ಆರೋಗ್ಯ ಸಮಸ್ಯೆ ಎದುರಾಗಿದೆ. ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿಯೆ ಹಲವರು ತಮ್ಮ ಆರೋಗ್ಯಕ್ಕೆ ಸಮಸ್ಯೆಯಾಗಿದೆ ಎಂದು ಗಮನಸೆಳೆಯಲು ಯತ್ನಿಸಿದರು. ನಿರ್ಮುಂಜೆಯ ಮುಹಮ್ಮದ್ ರಶೀದ್ ಎಂಬವರು ತಮ್ಮ ಏಳು ತಿಂಗಳ ಹೆಣ್ಣು ಮಗು ಬೆಳವಣಿಗೆ ಇಲ್ಲದೆ ಇರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಮಗುವಿನ ಬೆಳವಣಿಗೆಗೆ ಪರಿಸರದ ಸಮಸ್ಯೆ ಎಂದು ವೈದ್ಯರುಗಳು ಹೇಳಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಮುಹಮ್ಮದ್ ರಶೀದ್ ವಿವರಿಸಿದರು. ನಿರ್ಮುಂಜೆ ಗ್ರಾಮದಲ್ಲಿ ಮಹಿಳೆಯರು,ವೃದ್ದರು ಉಸಿರಾಟ ಸಮಸ್ಯೆಗೆ ಈಡಾಗಿರುವ ಬಗ್ಗೆಯೂ ಜಿಲ್ಲಾಧಿಕಾರಿಗಳ ಗಮನವನ್ನು ಸೆಳೆಯಲಾಯಿತು.

ಜಿಲ್ಲಾಧಿಕಾರಿಗಳ ವೀಕ್ಷಣೆ ವೇಳೆ ಸ್ಥಾವರ ಸ್ವಚ್ಚ!

   ಜಿಲ್ಲಾಧಿಕಾರಿಗಳು ಇಂದು ಕೋಕ್ ಸಲ್ಪರ ಘಟಕದಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಪರಿಶೀಲನೆಗೆ ಬಂದಿರುವುದರಿಂದ ಕೋಕ್ ಸಲ್ಪರ ಘಟಕವನ್ನು ಹತ್ತು ಪಟ್ಟು ಹೆಚ್ಚು ನೀರು ಹಾಕಿ ಸ್ವಚ್ಚಗೊಳಿಸಲಾಗಿದೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳಲ್ಲಿ ಆರೋಪಿಸಿದರು. ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡುವ ಸಂದರ್ಭದಲ್ಲಿ ಕೋಕ್ ಸಲ್ಪರ್ ಘಟಕದಲ್ಲಿ ಮಾಡುತ್ತಿದ್ದ ನೀರು ಹಾಕಿ ಸ್ವಚ್ಚ ಮಾಡುತ್ತಿದ್ದ ಸಂದರ್ಭದಲ್ಲಿ ಅದರ ಹನಿ ಮಾರ್ಗದಲ್ಲಿ ವೀಕ್ಷಿಸುತ್ತಿದ್ದವರ ಮೇಲೂ ಬೀಳುತ್ತಿತ್ತು. ಇತರ ದಿನಗಳಲ್ಲಿ ಇದರ ಹತ್ತರ ಒಂದು ಪಟ್ಟು ಸ್ವಚ್ಚತೆಯನ್ನು ಮಾಡಲಾಗುತ್ತಿರಲಿಲ್ಲ ಎಂದು ಸಾರ್ವಜನಿಕರು ಆಪಾದಿಸಿದರು.

ಸಮಸ್ಯೆ ಇತ್ಯರ್ಥಕ್ಕಾಗಿ ನಡೆಸಿದ ಹೋರಾಟಗಳನ್ನು ಜಿಲ್ಲಾಡಳಿತ ಸುಳ್ಳು ಹೋರಾಟ ಎಂದು ಪರಿಗಣಿಸಿತ್ತು.ನಂತರದಲ್ಲಿ ಹೋರಾಟವನ್ನು ಪೊಲೀಸ್ ಬಲಪ್ರಯೋಗದಲ್ಲಿ ಹತ್ತಿಕ್ಕಲು ಯತ್ನಿಸಲಾಯಿತು. ಇದೀಗ ಸಮಸ್ಯೆಯ ಅರಿವಾಗಿ ಜಿಲ್ಲಾಧಿಕಾರಿಗಳು ಜೋಕಟ್ಟೆ ಗ್ರಾಮಕ್ಕೆ ಪರಿಶೀಲನೆಗಾಗಿ ಭೇಟಿ ನೀಡಿರುವುದು ನಮ್ಮ ಹೋರಾಟದ ಗೆಲುವು. ಸ್ಥಾವರನ್ನು , ಜನರನ್ನು ಸ್ಥಳಾಂತರಿಸಲು ಆಗುವುದಿಲ್ಲ ಎಂಬ ಜಿಲ್ಲಾಧಿಖಾರಿಗಳ ನಿಲುವಿಗೆ ನಮ್ಮ ವಿರೋಧವಿದೆ. ಜಿಲ್ಲಾಡಳಿತ ಕಂಪೆನಿಯನ್ನು ಸ್ಥಳಾಂತರಿಸಬೇಕೆಂಬುದೆ ನಮ್ಮ ಬೇಡಿಕೆಯಾಗಿದೆ.

ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ರಾಜ್ಯಾಧ್ಯಕ್ಷರು,

    ನನಗೆ ಥೈರಾಯಿಡ್ ಸಮಸ್ಯೆಯಾಗಿದ್ದು ಶಸ್ತ್ರಚಿಕಿತ್ಸೆ ನಡೆದಿದೆ. ಇಲ್ಲಿರುವ ಪರಿಸರ ಮಾಲೀನ್ಯದಿಂದಾಗಿ ನನಗೆ ಶ್ವಾಸಕೋಶದ ಸಮಸ್ಯೆಯಾಗಿದೆ. ಈ ಪರಿಸರದಿಂದ ದೂರ ಹೋಗಿ ಎಂದು ವೈದ್ಯರು ಸೂಚಿಸಿದ್ದಾರೆ. ಆದರೆ ಸಂಕಷ್ಟದಲ್ಲಿರುವ ನಾವು ಏನು ಮಾಡಬೇಕು ಎಂಬುದೆ ತೋಚುತ್ತಿಲ್ಲ- ಜಯಂತಿ, ನಿರ್ಮುಂಜೆ ನಿವಾಸಿ

ನಾಲ್ಕ ಮನೆ ಸ್ಥಳಾಂತರ;

  ಕೋಕ್ ಸಲ್ಪರ್ ಘಟಕದಿಂದ ಉಂಟಾಗಿರಯುವ ಪರಿಸರ ಸಮಸ್ಯೆಗೆ ನಿರ್ಮುಂಜೆ ಗ್ರಾಮದ ನಾಲ್ಕು ಮನೆಗಳು ಸ್ಥಳಾಂತರಗೊಂಡಿದೆ. ನಿರ್ಮುಂಜೆಯ ಶರೀಫ್, ಶೇಕಬ್ಬ, ಖಾದರ್, ಬಶೀರ್ ಎಂಬವರು ಮನೆ ಖಾಲಿ ಮಾಡಿದ್ದು ಬೇರೆ ಊರಿಗೆ ತೆರಳಿದ್ದಾರೆ. ಮನೆ ಬಿಟ್ಟು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಕಂಪೆನಿ ಸಮಸ್ಯೆ ಪರಿಹಾರಕ್ಕೆ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News