ಕರ್ನಾಟಕ-ಕೇರಳ ಗಡಿ ಪ್ರದೇಶ ತಲಪಾಡಿಯನ್ನು ಪ್ರವೇಶಿಸಿ ದ.ಕ ಜಿಲ್ಲೆಗೆ ಆಗಮಿಸಿದ ಆಸ್ಟ್ರೇಲಿಯಾದ ಮ್ಯಾರಥಾನ್ ಓಟಗಾರ
ಉಳ್ಳಾಲ: ಭಾರತದ ಹೆಣ್ಮಕ್ಕಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹಿಸಲು ಆಸ್ಟ್ರೇಲಿಯಾದ ಮ್ಯಾರಥಾನ್ ಓಟಗಾರ ಹಾಗೂ ಮಾಜಿ ಸಂಸದ ಪ್ಯಾಟ್ರಿಕ್ ಫಾರ್ಮರ್ ಹಮ್ಮಿಕೊಂಡಿರುವ ಕನ್ಯಾಕುಮಾರಿಯಿಂದ ಕಾಶ್ಮೀರ ತನಕ ಮ್ಯಾರಥಾನ್ ಓಟ ಗುರುವಾರ ಬೆಳಿಗ್ಗೆ ಕರ್ನಾಟಕ-ಕೇರಳ ಗಡಿ ಪ್ರದೇಶ ತಲಪಾಡಿಯನ್ನು ಪ್ರವೇಶಿಸಿ ದ.ಕ ಜಿಲ್ಲೆಗೆ ಆಗಮಿಸಿದರು. ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರಣಪ್ಪ ಅವರು ಹೂಗುಚ್ಛ ನೀಡುವುದರ ಮೂಲಕ ಪ್ಯಾಟ್ರಿಕ್ ಫಾರ್ಮರ್ ಹಾಗೂ ಅವರ ತಂಡವನ್ನು ಸ್ವಾಗತಿಸಿದರು. ಗಣರಾಜ್ಯೋತ್ಸವದಂದು ಆರಂಭಿಸಿರುವ ದೇಶದುದ್ದಕ್ಕೂ 4,600 ಕಿ.ಮೀ ಮ್ಯಾರಥಾನ್ ಓಟದ ಹತ್ತನೇ ದಿನವಾದ ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದೆ.
ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆ, ಉಳ್ಳಾಲದ ಸೈಯ್ಯದ್ ಮದನಿ ಹಾಗೂ ಎಕ್ಕೂರು ಯೆನೆಪೋಯ ಶಾಲಾ ವಿದ್ಯಾರ್ಥಿಗಳು, ಸಮಾಜ ಸೇವಕ ರಾಝಿಕ್ ಉಳ್ಳಾಲ್ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡರು. ಜಿಲ್ಲಾಧಿಕಾರಿಗಳು ನೀಡಿದ ಸಿಯಾಳ ಕುಡಿಯುತ್ತಾ ಮಾತನಾಡಿದ ಪ್ಯಾಟ್ರಿಕ್ ಅವರು ‘ ಭಾರತದಂತಹ ವೈಭವಪೂರಿತ ದೇಶ ಬೇರೊಂದಿಲ್ಲ. ಇಲ್ಲಿನ ಕಲೆ, ವಿವಿಧ ಧರ್ಮಗಳು, ಆಚರಣೆಗಳು ಬಹಳ ವೈಶಿಷ್ಟ್ಯಪೂರ್ಣವಾಗಿದೆ. ಭಾರತದ ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಹಣ ಸಂಗ್ರಹಿಸುವುದು ಹಾಗೂ ಭಾರತ-ಆಸ್ಟ್ರೇಲಿಯಾ ಸಂಬಂಧ ಬಲಪಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಓಟಕ್ಕೆ ಭಾರತೀಯರಿಂದ ಉತ್ತಮ ಸ್ಪಂಧನೆ ದೊರೆತಿದೆ. ಕುಟುಂಬಗಳಿಗೆ ಹೆಣ್ಣು ತಾಯಿ. ಆಕೆ ಶಿಕ್ಷಿತಳಾದರೆ ದೇಶವೇ ಶಿಕ್ಷಣ ಪಡೆದು , ಅಭಿವೃದ್ಧಿ ದೇಶವನ್ನು ಕಾಣಬಹುದು ಎಂದರು.