ಯುಪಿಸಿಎಲ್ ವಿಸ್ತರಣೆಗೆ ಅದಾನಿ-ರಾಜ್ಯ ಸರಕಾರ ನಡುವೆ ಒಪ್ಪಂದ
ಉಡುಪಿ, ಫೆ.4: ಪಡುಬಿದ್ರೆ ಸಮೀಪದ ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಪವರ್ ಲಿಮಿಟೆಡ್‌ನ ಅಂಗಸಂಸ್ಥೆ ಉಡುಪಿ ಪವರ್ ಕಾರ್ಪೊರೇಶನ್ ಲಿಮಿಟೆಡ್ (ಯುಪಿಸಿಎಲ್)ನ ವಿಸ್ತರಣೆಗೆ ಬೆಂಗಳೂರಿನಲ್ಲಿ ನಡೆದಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಸರಕಾರ ಹಾಗೂ ಅದಾನಿ ಕಂಪೆನಿ ನಡುವೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಲಾಯಿತು.
ಒಪ್ಪಂದದಂತೆ ಅದಾನಿ ಗ್ರೂಫ್ ಈ ಯೋಜನೆಯಲ್ಲಿ ಹೊಸದಾಗಿ 11,500 ಕೋಟಿ ರೂ.ಗಳ ಬಂಡವಾಳ ಹೂಡಿಕೆ ಮಾಡಲಿದ್ದು, ಈಗಿರುವ 1,200 ಮೆಗಾವ್ಯಾಟ್‌ನ ಯೋಜನಾ ಸಾಮರ್ಥ್ಯವನ್ನು 2,800ಮೆ.ವ್ಯಾ (800ಮೆ.ವ್ಯಾ.ನ ಎರಡು ಸ್ಥಾವರ)ಕ್ಕೇರಿಸಲಿದೆ.
ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಇಂಧನ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಹಾಗೂ ಪಿಸಿಕೆಎಲ್‌ನ ಎಂಡಿ ಟಿ.ಎಚ್.ಎಂ.ಕುಮಾರ್ ಉಪಸ್ಥಿತರಿದ್ದರು. ಅದಾನಿ ಕಂಪೆನಿಯನ್ನು ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಪ್ರತಿನಿಧಿಸಿದ್ದರು.
ಇದರೊಂದಿಗೆ ಅದಾನಿ ಎಂಟರ್‌ಪ್ರೈಸಸ್ ರಾಜ್ಯದಲ್ಲಿ ಸೌರವಿದ್ಯುತ್ ಕ್ಷೇತ್ರದಲ್ಲಿ 7,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದ್ದು, 1,000 ಮೆ.ವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಇಒಐಗೆ ಸಹಿ ಹಾಕಿದೆ. ರಾಜ್ಯದಲ್ಲಿ ಒಟ್ಟು 21,000 ಕೋಟಿ ರೂ.ಗಳ ಬಂಡವಾಳ ಹೂಡುವ ಪ್ರಸ್ತಾಪವನ್ನು ಅದಾನಿ ಗ್ರೂಪ್ ಸ್ಥಾಪಕ ಅಧ್ಯಕ್ಷ ಗೌತಮ್ ಅದಾನಿ ಅವರು ಸಮಾವೇಶದಲ್ಲಿ ಘೋಷಿಸಿದ್ದರು. ಇವುಗಳಲ್ಲಿ ಮಂಗಳೂರಿನ ಎನ್‌ಎಂಪಿಟಿ ಯಲ್ಲಿ ಹೆಚ್ಚುವರಿ ಜಟ್ಟಿ ನಿರ್ಮಾಣ ಹಾಗೂ ತದಡಿ ಬಂದರಿನ ಅಭಿವೃದ್ಧಿ ಪ್ರಸ್ತಾಪವೂ ಸೇರಿವೆ.