×
Ad

ರಾಷ್ಟ್ರೀಯ ದಾಖಲೆ ವೀರ ಮನೀಷ್‌ಗೆ ಸನ್ಮಾನ

Update: 2016-02-05 00:08 IST

ಉಡುಪಿ, ಫೆ.4: ಕೇರಳದ ಕೋಯಿಕ್ಕೋಡ್‌ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕಗಳನ್ನು ಗೆದ್ದ ಎಂಜಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮನೀಷ್‌ರನ್ನು ಗುರುವಾರ ಎಂಜಿಎಂ ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಜಿಲ್ಲಾ ಪ. ಪೂ. ಶಿಕ್ಷಣ ಇಲಾಖಾ ಉಪನಿರ್ದೇಶಕ ಆರ್. ಬಿ. ನಾಯಕ್, ಎಂಜಿಎಂ ಪ. ಪೂ. ಕಾಲೇಜು ಪ್ರಾಂಶುಪಾಲೆ ಪ್ರೊ. ಮಾಲತಿದೇವಿ, ಪದವಿ ಕಾಲೇಜು ಪ್ರಾಂಶುಪಾಲೆ ಪ್ರೊ. ಕುಸುಮಾ ಕಾಮತ್, ಜಯಶ್ರೀ, ಬ್ರಹ್ಮಾವರದ ತಾರಾ, ಸತೀಶ್ ಕುಮಾರ್ ಹೆಗ್ಡೆ, ಲಚ್ಚೇಂದ್ರ, ಅಬ್ಬಾಸ್ ಉಪಸ್ಥಿತರಿದ್ದರು.
     ಕೋಯಿಕ್ಕೋಡ್‌ನಲ್ಲಿ ಜ.29ರಿಂದ ಫೆ.2ರವರೆಗೆ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದ ವತಿ ಯಿಂದ ನಡೆದ ಕ್ರೀಡಾಕೂಟದ 19 ವರ್ಷದೊಳಗಿನವರ ವಿಭಾಗದ 100 ಮೀ. ಓಟದಲ್ಲಿ 10.5ಸೆ.ಗಳ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಕೂಟದ ವೇಗದ ಓಟಗಾರನಾಗಿ ಮನೀಷ್ ಮೂಡಿಬಂದಿದ್ದರು. ಅಲ್ಲದೆ, 200 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ‘ಸ್ಪ್ರಿಂಟ್ ಡಬಲ್’ ಪಡೆದಿದ್ದರು. ಇದರೊಂದಿಗೆ 4/100 ಮೀ. ರಿಲೇ ಸ್ಪರ್ಧೆಯಲ್ಲೂ ಕರ್ನಾಟಕ ತಂಡ ಬೆಳ್ಳಿ ಪದಕ ಜಯಿಸಲು ಕಾರಣರಾಗಿದ್ದರು. ರಾಷ್ಟ್ರಮಟ್ಟದ 100 ಮೀ. ಓಟದಲ್ಲಿ 10.5 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ 18 ವರ್ಷಗಳ ಹಿಂದಿನ ದಾಖಲೆ ಮುರಿದ ಮನೀಷ್, ಲಚ್ಚೇಂದ್ರ ಮತ್ತು ಅಬ್ಬಾಸ್‌ರಿಂದ ತರಬೇತಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್ ಕುಮಾರ್ ಹೆಗ್ಡೆಯವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News