×
Ad

ಮರದ ಹಾಳೆ, ಜೋಳದ ಎಲೆ, ಬಿದಿರಿನಲ್ಲಿ ಕರಕುಶಲ ವಸ್ತುಗಳು!

Update: 2016-02-05 00:09 IST

ಮಂಗಳೂರು, ಫೆ. 4: ಮರದ ತೆಳುವಾದ ಹಾಳೆ, ಜೋಳದ ಎಲೆ, ಜಾಯಿಕಾಯಿ ಬೀಜ, ಒಣಗಿದ ನೈಜ ಹೂಗಳಿಂದ ಬಣ್ಣ ಬಣ್ಣದ, ತರಾವರಿ ಹೂಗಳಿಂದ ಕೂಡಿದ ಆಲಂಕಾರಿಕ ವಸ್ತುಗಳು, ಬಿದಿರಿನಿಂದ ಪೀಠೋಪಕರಣಗಳು, ಬಾಸ್ಕೆಟ್‌ಗಳು, ಮರದ ಕೆತ್ತನೆಗಳು, ಆಭರಣಗಳು. ಇವು ನಗರದ ವುಡ್‌ಲ್ಯಾಂಡ್ಸ್ ಹೊಟೇಲ್‌ನಲ್ಲಿ ನಡೆಯುತ್ತಿರುವ ಈಶಾನ್ಯ ರಾಜ್ಯಗಳ ಕೈಮಗ್ಗ ಮತ್ತು ಕರ ಕುಶಲ ಪ್ರದರ್ಶನದಲ್ಲಿ ಕಂಡು ಬಂದ ಅಪರೂಪದ ವಸ್ತುಗಳು.

ಪೂರ್ವೋತ್ತರ ಹಸ್ತಶಿಲ್ಪಮತ್ತು ಕೈ ಮಗ್ಗದ ಅಭಿವೃದ್ಧಿ ನಿಗಮ ನಿಯಮಿತ (ಕೇಂದ್ರ ಸರಕಾರದ ಅಧೀನಕೊಳ್ಳಪಟ್ಟ)ದ ಪ್ರೋತ್ಸಾಹದೊಂದಿಗೆ ಈಶಾನ್ಯ ರಾಜ್ಯಗಳ ಕೈಮಗ್ಗ ಮತ್ತು ಕುಶಲಕರ್ಮಿಗಳ ಅಭಿವೃದ್ಧಿ ಕಾರ್ಪೊರೇಶನ್ ಅಶ್ರಯದಲ್ಲಿ ಈಶಾನ್ಯ ರಾಜ್ಯಗಳ ಅಪರೂಪದ ವೈವಿಧ್ಯಮಯ ಕೈಮಗ್ಗ ಹಾಗೂ ಕರಕುಶಲ ವಸ್ತುಗಳ (ಉತ್ಪನ್ನಗಳ) ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟ ಮೇಳ ಇದಾಗಿದ್ದು, ಇದರ ಇದರ ಅಧಿಕೃತ ಉದ್ಘಾಟನೆಯನ್ನು ಇಂದು ಮನಪಾ ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್ ನೆರವೇರಿಸಿದರು. ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮೇಗಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ ಹಾಗೂ ಸಿಕ್ಕಿಂ ರಾಜ್ಯಗಳ ಸುಮಾರು 50 ಮಂದಿ ಕರಕುಶಲ ಮತ್ತು ಕಲಾಕೃತಿಗಳ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನ ಸಾಗಿಸುವ ಕುಶಲಕರ್ಮಿಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವ್ಯವಸ್ಥಾಪಕ ಪಿ.ವಿ ರಾಜು ತಿಳಿಸಿದ್ದಾರೆ.

ಕೇಂದ್ರ ಸರಕಾರದ ಕೈಮಗ್ಗ ಇಲಾಖೆಯು ಇಲ್ಲಿಯ ಕುಶಲಕರ್ಮಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮತ್ತು ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಮೇಳವನ್ನು ಅಯೋಜಿಸಿದೆ.
ಬೆತ್ತದ ಪೀಠೋಪಕರಣಗಳು, ಬೆತ್ತ ಮತ್ತು ಬಿದಿರಿನಿಂದ ತಯಾರಿಸಲಾದ ಬುಟ್ಟಿಗಳು, ವಿವಿಧ ವಿನ್ಯಾಸಗಳ ಕೈಮಗ್ಗದ ಬಟ್ಟೆಗಳು, ವೈವಿಧ್ಯಮಯ ವಿನ್ಯಾಸದ ಸಾರಿಗಳು,ಬೆಡ್‌ಕವರ್‌ಗಳು,  ಎಂಬ್ರಾಡರಿ ವಸ್ತ್ರಗಳು, ವಿವಿಧ ವಿನ್ಯಾಸಗಳ ಮರದ ಕೆತ್ತನೆಗಳು, ವಿಶೇಷ ರೀತಿಯ ಜ್ಯುವೆಲ್ಲರಿಗಳು,(ಆಭರಣಗಳು), ಸೆಣಬಿನಿಂದ ತಯಾರಿಸಲಾದ ವಸ್ತುಗಳು, ಮಣ್ಣಿನ ಕಲಾಕೃತಿಗಳು, ಕಸೂತಿ ಉಡುಪುಗಳು, ಲೋಹದ ಕಲಾಕೃತಿಗಳು ಸೇರಿದಂತೆ ಹಲವಾರು ವೈವಿಧ್ಯಮಯ, ವಿಶೇಷ ವಿನ್ಯಾಸದ ಕೈಮಗ್ಗ ಹಾಗೂ ಕರಕುಶಲ ವಸ್ತುಗಳು ಪ್ರದರ್ಶದಲ್ಲಿವೆ. ಉದ್ಘಾಟನಾ ಸಮಾರಂಭದಲ್ಲಿ ಮೇಳದ ಸಂಚಾಲಕ ಪಿ.ವಿ ರಾಜು, ಹ್ಯಾಂಡಿಕ್ರಾಫ್ಟ್ ಅಭಿವೃದ್ಧಿ ಅಧಿಕಾರಿ ಜೇಕೊಬ್ ಡಿಸೋಜ ಹಾಗೂ ಹೊಟೇಲ್ ವುಡ್‌ಲ್ಯಾಂಡ್ಸ್‌ನ ಮಾಲಕ ವೈ. ರಮೇಶ್ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News