ಕೇರಳ ಉರ್ದು ಅಕಾಡಮಿ ರಚನೆ
ಕಾಸರಗೋಡು, ಫೆ.4: ಉರ್ದು ಅಕಾಡಮಿಗೆ ಕೇರಳ ಸರಕಾರ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 35 ಸಾವಿರಕ್ಕೂ ಅಧಿಕ ಉರ್ದು ಭಾಷಿಗರಿದ್ದಾರೆ. ಆ ಹಿನ್ನೆಲೆಯಲ್ಲಿ ಉಪ್ಪಳ ಕೇಂದ್ರವಾಗಿ ಅಕಾಡಮಿ ಸ್ಥಾಪನೆಯಾಗಲಿದೆ. ಉರ್ದು ಅಕಾಡಮಿ ಆರಂಭಿಸುವಂತೆ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಶಾಸಕ ಪಿ.ಬಿ. ಅಬ್ದುರ್ರಝಾಕ್ ತಿಳಿಸಿದ್ದಾರೆ.
ಉರ್ದು ಅಕಾಡಮಿಯ ಸ್ಥಾಪನೆ ಮತ್ತು ಮುಂದಿನ ಕಾರ್ಯ ಯೋಜನೆಗಳ ಕುರಿತು ಫೆಬ್ರವರಿ ಕೊನೆಯ ವಾರ ರಾಜ್ಯ ಸಾಂಸ್ಕೃತಿಕ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಉರ್ದು ಅಕಾಡಮಿಯ ಸ್ಥಾಪನೆಯ ಘೋಷಣೆ ನಡೆಯಲಿದೆ ಎಂದು ಶಾಸಕರು ಹೇಳಿದರು.
ಸಾಂಸ್ಕೃತಿಕ ಇಲಾಖಾ ಸಚಿವರ ಸೂಚನೆಯಂತೆ ಎಸ್‌ಸಿಇಆರ್‌ಟಿಯ ಉರ್ದು ವಿಭಾಗ ಸಂಶೋಧನಾ ಅಧಿಕಾರಿ ಮೊಯ್ದಿನ್ ಕುಟ್ಟಿ ಅಕಾಡಮಿಯ ಸ್ಥಾಪನೆ ಬಗ್ಗೆ ಸಮಗ್ರ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದರು.ಅದರಂತೆ ಉಪ್ಪಳ ಕೇಂದ್ರವಾಗಿ ಅಕಾಡಮಿಗೆ ಅಂಗೀಕಾರ ಲಭಿಸಿದೆ. ಅಕಾಡಮಿಗೆ ತಾತ್ಕಾಲಿಕ ಸಮಿತಿ ರಚಿಸಲಾಗಿದೆ. ಅಧ್ಯಕ್ಷರಾಗಿ ಸಾಂಸ್ಕೃತಿಕ ಸಚಿವ ಕೆ.ಸಿ. ಜೋಸೆಫ್, ಕಾರ್ಯಾಧ್ಯಕ್ಷರಾಗಿ ವಿ.ಎಸ್. ಅಬ್ದುರ್ರಹ್ಮಾನ್, ಕಾರ್ಯದರ್ಶಿಯಾಗಿ ಎಂ.ಮಾಹಿನ್ ಸಹಿತ 30 ಮಂದಿಯ ಸಮಿತಿಯನ್ನು ರಚಿಸಲಾಗಿದೆ.
2012-13ರ ಕೇರಳ ಮುಂಗಡ ಪತ್ರದ ಚರ್ಚೆ ಸಂದರ್ಭ ಉರ್ದು ಅಕಾಡಮಿ ರಚನೆ ಕುರಿತು ಸಚಿವ ಕೆ.ಎಂ. ಮಾಣಿ ಘೋಷಿಸಿದ್ದರು. ಉರ್ದು ಭಾಷೆ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹ, ಸಂಶೋಧನೆ, ಪುಸ್ತಕ ಪ್ರಕಟನೆ, ಶಾಲಾ ಮಟ್ಟದಿಂದ ವಿಶ್ವವಿದ್ಯಾನಿಲಯ ತನಕ ಉರ್ದು ಪಠನಕ್ಕೆ ಪ್ರೋತ್ಸಾಹ , ಉರ್ದು ಲೇಖಕರು, ಕವಿಗಳು, ಸಂಶೋಧಕರಿಗೆ ಪ್ರಶಸ್ತಿ ಇತ್ಯಾದಿ ಯೋಜನೆಗಳು ಇದರಲ್ಲಿ ಒಳಗೊಂಡಿವೆ.