×
Ad

ಕರಾವಳಿ ತಲುಪಿದ 'ಸ್ಪಿರಿಟ್ ಆಫ್ ಇಂಡಿಯಾ ರನ್'

Update: 2016-02-05 00:22 IST

ಆಸ್ಟ್ರೇಲಿಯದ ಪ್ಯಾಟ್ರಿಕ್ ಫಾರ್ಮರ್‌ಗೆ ಅದ್ದೂರಿ ಸ್ವಾಗತ

ಮಂಗಳೂರು: 'ಅದ್ಭುತ ಭಾರತ' ಪರಿಕಲ್ಪನೆ ಯೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 'ಸ್ಪಿರಿಟ್ ಆಫ್ ಇಂಡಿಯಾ' ಓಟವನ್ನು ಕೈಗೊಂಡಿರುವ ಆಸ್ಟ್ರೇಲಿಯದ ಅಲ್ಟ್ರಾ ಮ್ಯಾರಥಾನ್ ಓಟಗಾರ ಹಾಗೂ ಮಾಜಿ ಸಂಸದ ಪ್ಯಾಟ್ರಿಕ್ ಫಾರ್ಮರ್ ಪ್ಯಾಟ್‌ರನ್ನು ದ.ಕ. ಜಿಲ್ಲೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಇಂದು ಬೆಳಗ್ಗೆ ಕಾಸರಗೋಡಿನಿಂದ ತಲಪಾಡಿಯ ಮೂಲಕ ಕರ್ನಾಟಕದ ಗಡಿಯಿಂದ ದ.ಕ. ಜಿಲ್ಲೆಯನ್ನು ಪ್ರವೇಶಿಸಿದ 54ರ ಹರೆಯದ ಪ್ಯಾಟ್ರಿಕ್‌ರನ್ನು ಕರ್ನಾಟಕ ಸರಕಾರ ಹಾಗೂ ದ.ಕ. ಜಿಲ್ಲಾಡಳಿತದ ವತಿಯಿಂದ ಮೈಸೂರು ಪೇಟ ತೊಡಿಸಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ., ದ.ಕ. ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೊ ಹಾಗೂ ತಲಪಾಡಿ ಸಮೀಪದ ಶಾರದಾ ವಿದ್ಯಾನಿಕೇತನ ಶಾಲಾ ವಿದ್ಯಾರ್ಥಿಗಳು ಬರಮಾಡಿಕೊಂಡರು.

ಈ ಸಂದರ್ಭ ಸುದ್ದಿಗಾರರ ಜೊತೆ ಅನಿಸಿಕೆ ಹಂಚಿಕೊಂಡ ಪ್ಯಾಟ್ರಿಕ್, ಭಾರತದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ, ಆಸ್ಟ್ರೇಲಿಯ ಮತ್ತು ಭಾರತದ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಯುವಕರು ದುಶ್ಚಟಗಳಿಂದ ದೂರವಿದ್ದು, ಜೀವನದಲ್ಲಿ ಸಾಧನೆಗೈಯ್ಯುವ ಬಗ್ಗೆ ಪ್ರೇರಣೆ ಮೂಡಿಸುವುದು ತಮ್ಮ ಓಟದ ಪ್ರಮುಖ ಉದ್ದೇಶವಾಗಿದೆ ಎಂದರು.

1 ಲಕ್ಷ ಆಸ್ಟ್ರೇಲಿಯನ್ ಡಾಲರ್ ಸಂಗ್ರಹ ಗುರಿ
ತಮ್ಮ ವೆಬ್‌ಸೈಟ್ ಮೂಲಕ ಈಗಾಗಲೇ ಭಾರತದಲ್ಲಿನ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ನಿಧಿ ಸಂಗ್ರಹ ಕಾರ್ಯ ನಡೆಯುತ್ತಿದೆ. ಒಂದು ಲಕ್ಷ ಆಸ್ಟ್ರೇಲಿಯನ್ ಡಾಲರ್ ಹಣ ಸಂಗ್ರಹಿಸಿ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುವ ಸರಕಾರೇತರ ಸಂಸ್ಥೆಗಳಿಗೆ ಸಹಕರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ತಮ್ಮ ಓಟವು ಬೆಳಗ್ಗೆ 5 ಗಂಟೆಗೆ ಆರಂಭಗೊಂಡು, ಸಂಜೆ 5 ಗಂಟೆಯವರೆಗೆ ನಡೆಯುತ್ತದೆ. ದಿನವೊಂದಕ್ಕೆ ಕನಿಷ್ಠ 80 ಕಿ.ಮೀ. ಓಟವನ್ನು ನಡೆಸುತ್ತಿದ್ದು, ಮಾರ್ಚ್ 30ಕ್ಕೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಓಟವನ್ನು ಕೊನೆಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಓಟದ ವೇಳೆ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದೇನೆ. ಭಾರತ ನಿಜಕ್ಕೂ ವಿವಿಧ ಭಾಷೆ, ಧರ್ಮ, ಸಂಸ್ಕೃತಿಯ ಅದ್ಭುತ ರಾಷ್ಟ್ರವಾಗಿದೆ. ಇಲ್ಲಿನ ಆರ್ಥಿಕ ವ್ಯವಸ್ಥೆ ವಿಶ್ವದ ಯಾವುದೇ ದೇಶದಲ್ಲಿಯೂ ಕಾಣಲು ಅಸಾಧ್ಯ. ಪ್ರಪಂಚದಲ್ಲಿಯೇ ಭಾರತದಂತಹ ದೇಶ ಮತ್ತೊಂದಿಲ್ಲ ಎಂದು ಪ್ಯಾಟ್ರಿಕ್ ಗೌರವ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪ್ಯಾಟ್ರಿಕ್ ಫಾರ್ಮರ್ ಪ್ಯಾಟ್, ''ನಾನು ಸಂಸದನಾಗುವುದಕ್ಕಿಂತ ಮೊದಲು ಮ್ಯಾರಥಾನ್ ಓಟಗಾರನಾಗಿದ್ದೆ. ನನ್ನ 18ನೆ ವಯಸ್ಸಿನಲ್ಲಿಯೇ ಆಸ್ಟ್ರೇಲಿಯದಲ್ಲಿ ಮ್ಯಾರಥಾನ್ ಓಟದ ಮೂಲಕ ಜನರನ್ನು ಅರಿಯಲು ಆರಂಭಿಸಿದ್ದೆ. ಇದರಿಂದ ಆಕರ್ಷಿತರಾದ ಜಾನ್ ಹಾರ್ವಡ್ ನನ್ನನ್ನು ರಾಜಕೀಯಕ್ಕೆ ಕರೆ ತಂದರು. ಕೆಲ ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯನಾಗಿದ್ದು, ಈಗ ಮತ್ತೆ ದೇಶವನ್ನು ಸುತ್ತುವ ನನ್ನ ಮ್ಯಾರಥಾನ್ ಕಾಯಕವನ್ನು ಮುಂದುವರಿಸಿದ್ದೇನೆ'' ಎಂದು ಹೇಳಿದರು.

ದ.ಕ. ಜಿಲ್ಲೆಯಿಂದ ಪಡುಬಿದ್ರೆಗೆ ತಲುಪಿ ಅಲ್ಲಿಂದ ನಾಳೆ ಬೆಳಗ್ಗೆ ಮತ್ತೆ ಓಟ ಆರಂಭಿಸಿ ಮರವಂತೆ, ಹೊನ್ನಾ ವರ, ಕಾರವಾರದ ಮೂಲಕ ಫೆ. 7ರಂದು ಗೋವಾಕ್ಕೆ ತೆರಳಲಿದ್ದಾರೆ. ತಲಪಾಡಿಯಿಂದ ಬೀರಿಯವರೆಗೆ ಓಟದಲ್ಲಿ ಶಾರದಾ ವಿದ್ಯಾನಿಕೇತನದ ಸುಮಾರು 40 ಮಕ್ಕಳು ಪ್ಯಾಟ್ರಿಕ್ ಹಾಗೂ ಅವರ ತಂಡದ ಸದಸ್ಯೆ ಕ್ಯಾಟಿವಾಲ್ಶ್ ಜೊತೆಗೂಡಿದರು.

ಬೀರಿಯಿಂದ ತೊಕ್ಕೊಟ್ಟುವರೆಗೆ ಸೈಯದ್ ಮದನಿ ಶಾಲಾ ಮಕ್ಕಳು ಹಾಗೂ ತೊಕ್ಕೊಟ್ಟಿನಿಂದ ಜಪ್ಪಿನಮೊಗರಿನ ಯೆನೆಪೊಯ ಶಾಲೆಯವರೆಗೆ ಆ ಶಾಲಾ ಮಕ್ಕಳ ತಂಡ ಓಟದಲ್ಲಿ ಪಾಲ್ಗೊಂಡಿತು. ಯೆನೆಪೊಯ ಶಾಲೆಯಲ್ಲಿ ಮಕ್ಕಳ ಜೊತೆ ಕೆಲ ಹೊತ್ತು ಸಂವಾದ ನಡೆಸಿದ ಪ್ಯಾಟ್ರಿಕ್ ಮತ್ತೆ ಅಲ್ಲಿಂದ ಓಟ ಆರಂಭಿಸಿ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಸರ್ಕ್ಯೂಟ್ ಹೌಸ್‌ಗೆ ತಲುಪಿ ಅಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪಡುಬಿದ್ರೆಗೆ ತೆರಳಿದರು.

ಎಳನೀರಿನಷ್ಟು ಉತ್ತಮ ಪೇಯ ಬೇರೊಂದಿಲ್ಲ!
ತಲಪಾಡಿಯ ಮೂಲಕ ಕರ್ನಾಟಕದ ಗಡಿ ಪ್ರವೇಶಿಸಿದ ವೇಳೆ ಪ್ಯಾಟ್ರಿಕ್ ಫಾರ್ಮರ್ ಪ್ಯಾಟ್‌ರವನ್ನು ಸ್ವಾಗತಿಸಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಎಳನೀರನ್ನು ನೀಡಿದರು. 'ಎಳನೀರಿನಷ್ಟು ಉತ್ತಮ ಪೇಯ ಬೇರೊಂದಿಲ್ಲ' ಎಂದು ಹೇಳುತ್ತಾ ಅದನ್ನು ಕುಡಿದು ದಣಿವಾರಿಸಿಕೊಂಡರು.

ಮೈಸೂರು ಪೇಟ, ಏಲಕ್ಕಿ ಹಾರ, ಕಳಸೆಯ ಉಡುಗೊರೆ!
ಸರ್ಕ್ಯೂಟ್ ಹೌಸ್‌ನಲ್ಲಿ ರಾಜ್ಯದ ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಅಭಯಚಂದ್ರ ಜೈನ್, ಮ್ಯಾರಥಾನ್ ಓಟಗಾರ ಪ್ಯಾಟ್ರಿಕ್ ಹಾಗೂ ತಂಡವನ್ನು ಸ್ವಾಗತಿಸಿ, ಅವರಿಗೆ ಮೈಸೂರು ಪೇಟ ತೊಡಿಸಿ, ಏಲಕ್ಕಿ ಹಾರ ಹಾಗೂ ತುಳುನಾಡಿನ ಸಾಂಪ್ರದಾಯಿಕ ಭತ್ತ ಅಳೆಯುವ ಮಾಪಕವಾದ ಕಳಸೆಯ ಮಾದರಿಯನ್ನು ಉಡುಗೊರೆಯಾಗಿ ನೀಡಿದರು. ಈ ಸಂದರ್ಭ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ, ಅಪರ ಜಿಲ್ಲಾಧಿಕಾರಿ ಕುಮಾರ್, ಭಾರತೀಯ ಪ್ರವಾಸೋದ್ಯಮ ಇಲಾಖೆಯ ಪಿ.ಕೆ. ಕುಂಞನ್, ಭಾರತ ಸರಕಾರದ ಪ್ರವಾಸ ಮಾಹಿತಿ ಅಧಿಕಾರಿ ಎ. ಗೋಪಾಲ, ಕ್ಯಾಟಿವಾಲ್ಶ್, ದ.ಕ. ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೊ ಹಾಗೂ ಇತರರು ಉಪಸ್ಥಿತರಿದ್ದರು.

ಮಂಗಳೂರಿನ ಮಾವಿನ ಹಣ್ಣು ಯಾವಾಗ ಸಿಗುತ್ತದೆ!

''ಕಳೆದ ಸುಮಾರು 30 ವರ್ಷ ಗಳಲ್ಲಿ ಉತ್ತರ ಧ್ರುವದಿಂದ ದಕ್ಷಿಣ ಧ್ರುವದವರೆಗೆ 18ಕ್ಕೂ ಅಧಿಕ ರಾಷ್ಟ್ರಗಳ ಉದ್ದಗಲವನ್ನು ಓಟದ ಮೂಲಕ ಸುತ್ತಾಡಿದ್ದೇನೆ. ಗುಡ್ಡ, ಕಾಡು, ಮರುಭೂಮಿ, ದಟ್ಟಾರಣ್ಯ ಎಲ್ಲೆಡೆ ಸುತ್ತಿದ್ದೇನೆ. ಕಳೆದ ವರ್ಷ ಲೆಬನಾನ್- ಜೋರ್ಡಾನ್- ಫೆಲೆಸ್ತೀನ್‌ನಲ್ಲಿ 1,450 ಕಿ.ಮೀ. ಮ್ಯಾರಥಾನ್ ಓಟ ಕೈಗೊಂಡಿದ್ದೇನೆ. ಈ ಬಾರಿ ಭಾರತವನ್ನು ಆಯ್ದುಕೊಂಡೆ. ಇದಕ್ಕೆ ಕಾರಣ ಆಸ್ಟ್ರೇಲಿಯಾದ ಶೇ. 2ರಷ್ಟು ಜನಸಂಖ್ಯೆ ಭಾರತೀಯ ಮೂಲದವರು'' ಎಂದು ಪ್ಯಾಟ್ರಿಕ್ ನುಡಿದರು. ಈ ಸಂದರ್ಭ ಅವರು ಪತ್ರಕರ್ತರಿಗೆ ಮಂಗಳೂ ರಿನ ಮಾವಿನ ಹಣ್ಣು ಯಾವಾಗ ಸಿಗುತ್ತದೆ ಎಂದು ಕೇಳಿದರು. ಮಾರ್ಚ್ ಎಪ್ರಿಲ್‌ನಲ್ಲಿ ಸಿಗುತ್ತದೆ ಎಂದಾಗ, ನನಗದು ಇಷ್ಟ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News