×
Ad

ಅಸ್ಪಶ್ಯತೆ, ಜೀತ ಪದ್ಧತಿ ವಿರುದ್ಧ ಕಠಿಣ ನಿಲುವಿಗೆ ಆಗ್ರಹ

Update: 2016-02-05 15:11 IST

ದ.ಕ. ಜಿಲ್ಲಾ ಪೊಲೀಸ್ ಮಟ್ಟದ ದಲಿತ ಕುಂದುಕೊರತೆಗಳ ಮಾಸಿಕ ಸಭೆ
ಮಂಗಳೂರು: ದ.ಕ. ಜಿಲ್ಲೆಯ ನಗರ ಪ್ರದೇಶಗಳಲ್ಲಿ ಜೀತ ಪದ್ಧತಿ, ಅಸ್ಪಶ್ಯತೆ ಗೋಚರಿಸದಿದ್ದರೂ, ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರುತ್ತವೆ. ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ನಿಲುವನ್ನು ಪ್ರದರ್ಶಿಸಬೇಕು ಎಂಬ ಆಗ್ರಹ ದಲಿತ ನಾಯಕರಿಂದ ವ್ಯಕ್ತವಾಗಿದೆ.


ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿಂದು ಹೆಚ್ಚುವರಿ ಎಸ್ಪಿ ವಿನ್ಸೆಂಟ್ ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ದಲಿತ ಕುಂದುಕೊರತೆಗಳ ಮಾಸಿಕ ಸಭೆಯಲ್ಲಿ ದಲಿತ ನಾಯಕ ಪಿ. ಕೇಶವ ಈ ಆಗ್ರಹ ಮಾಡಿದರು.


ಪುತ್ತೂರಿನ ಬಜಿರೋಡಿಯ ದಲಿತ ಕಾಲನಿಯರೊಬ್ಬರು ಕೂಲಿ ಕೆಲಸಕ್ಕೆ ಹೋಗದ ಕಾರಣಕ್ಕೆ ಅವರ ಮೇಲೆ ರಾತ್ರಿ ಹೊತ್ತು ಮೇಲ್ವರ್ಗದ ಕೆಲವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪ್ರಕರಣದ ಬಗ್ಗೆ ಪೊಲೀಸರು ಸಕಾಲದಲ್ಲಿ ಸ್ಪಂದಿಸಿದ್ದಾರೆ. ಇಂತಹ ಪ್ರಕರಣಗಳು ಆಗಾಗ್ಗೆ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿರುತ್ತವೆ. ಪೊಲೀಸರು ಕಠಿಣ ನಿಲುವನ್ನು ಪ್ರದರ್ಶಿಸುವ ಮೂಲಕ ಎಚ್ಚರಿಕೆ ನೀಡಬೇಕು. ಬಜಿರೋಡಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದರು.


ದಲಿತ ದೌರ್ಜನ್ಯ ಪ್ರಕರಣಗಳಿಗ ಸಂಬಂಧಿಸಿ ಮೂರು ತಿಂಗಳಲ್ಲಿ ಪೊಲೀಸರಿಂದ ಜಾರ್ಜ್ ಶೀಟ್ ಸಲ್ಲಿಕೆಯಾದರೂ ಪರಿಹಾರಕ್ಕಾಗಿ ಎರಡರಿಂದ ಮೂರು ವರ್ಷಗಳ ಕಾಲ ಕಾಯಬೇಕು. ಇದು ಸರಿಯಲ್ಲ. ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ಶೀಘ್ರವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ನಾಯಕ ಎಸ್.ಪಿ. ಆನಂದ ಆಗ್ರಹಿಸಿದರು. 
ಪರಿಹಾರ ನಮಗೆ ನೀಡುವ ಭಿಕ್ಷೆ ಅಲ್ಲ. ಅದು, ನಮ್ಮ ಹಕ್ಕು. ಅದನ್ನು ಎರಡು ಮೂರು ವರ್ಷಗಳ ಕಾಲ ವಿಳಂಬ ಮಾಡುವುದು ಸರಿಯಲ್ಲ. ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಪರಿಹಾರ ಒದಗಿಸುವಂತೆ ಪೊಲೀಸ್ ಇಲಾಖೆಯಿಂದ ಮುತುವರ್ಜಿ ವಹಿಸಬೇಕು ಎಂದು ಅವರು ಒತ್ತಾಯಿಸಿದರು.


ದೌರ್ಜನ್ಯ ಪ್ರಕರಣಗಳ ಕುರಿತು ದೂರು ನೀಡಲು ಪೊಲೀಸ್ ಠಾಣೆಗಳಿಗೆ ತೆರಳಿದಾಗ ಅಲ್ಲಿ ದೂರು ಪಡೆಯಲು ಠಾಣಾ ಇನ್ಸ್‌ಪೆಕ್ಟರ್ ಇಲ್ಲ ಎಂಬ ನೆಪಕ್ಕೆ ಕೆಲವೊಂದು ಗ್ರಾಮಾಂತರ ಠಾಣೆಗಳಲ್ಲಿ ದೌರ್ಜನ್ಯಕ್ಕೊಳಗಾದವರನ್ನು ಬೆಳಗ್ಗಿನಿಂದ ಸಂಜೆಯವರೆಗೆ ಕಾಯಿಸಿ, ಮರುದಿನ ಬರುವಂತೆ ಸೂಚಿಸಲಾಗುತ್ತದೆ. ಅದಾಗಲೇ ದೌರ್ಜನ್ಯಕ್ಕೊಳಗಾದವರಿಗೆ ಠಾಣೆಗಳಲ್ಲಿ ಈ ರೀತಿ ಶೋಷಣೆ ಮಾಡುವುದು ಸರಿಯಲ್ಲ. ಅದಕ್ಕಾಗಿ ಇಂತಹ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಇನ್ಸ್‌ಪೆಕ್ಟರ್‌ಗಳು ಠಾಣೆಯಲ್ಲಿ ಲಭ್ಯವಿರುವ ಸಮಯದ ಬಗ್ಗೆ ಸೂಚನಾ ಫಲಕ ಹಾಕಿಸಬೇಕು ಎಂದೂ ಎಸ್.ಪಿ. ಆನಂದ ಒತ್ತಾಯಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಎಸ್ಪಿ ವಿನ್ಸೆಂಟ್ ಶಾಂತಕುಮಾರ್, ಠಾಣೆಯಲ್ಲಿ 24 ಗಂಟೆಯೂ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಅವಕಾಶವಿದೆ. ಅದಕ್ಕಾಗಿ ಇನ್ಸ್‌ಪೆಕ್ಟರ್‌ರನ್ನೇ ಕಾಯಬೇಕಾಗಿಲ್ಲ. ಸ್ಟೇಷನ್‌ನ ಮುಖ್ಯ ಅಧಿಕಾರಿಗೂ ದೂರು ಪಡೆಯುವ ಅಧಿಕಾರ ಇದೆ.

ಈ ಬಗ್ಗೆ ಸ್ಟೇಷನ್‌ಗಳ ಹೆಡ್ ಕಾನ್ಸ್‌ಸ್ಟೆಬಲ್‌ಗಳಿಗೂ ಸೂಚನೆ ನೀಡುವುದಾಗಿ ಅವರು ಹೇಳಿದರು.
ಬೆಳ್ತಂಗಡಿಯ ಅರಂಬೋಡು ಎಂಬಲ್ಲಿ ದಲಿತರಿಗೆ ಮೀಸಲಿಟ್ಟ ಜಾಗದಲ್ಲಿ ಸ್ಥಳೀಯ ಇತರ ಸಮುದಾಯದವರು ಬೃಹತ್ ಕಟ್ಟಡ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಜಿಲ್ಲಾಧಿಕಾರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕೆಲಸ ನಿಲ್ಲಿಸಲು ಆದೇಶಿಸಿದ್ದಾರೆ. ಹಾಗಿದ್ದರೂ ರಾತ್ರಿ ಹೊತ್ತು ಅಲ್ಲಿ ಕಾಮಗಾರಿ ನಡೆಯುತ್ತಿದೆ. ಡಿಸಿ ಮನ್ನಾ ಜಾಗದಲ್ಲಿ ಇಂತಹ ಅಕ್ರಮ ನಡೆಸಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಎಸ್.ಪಿ. ಆನಂದ ಆಗ್ರಹಿಸಿದರು. ಗೋಷ್ಠಿಯಲ್ಲಿ ಪುತ್ತೂರು ಸಹಾಯಕ ಎಸ್ಪಿ ರಿಷ್ಯಂತ್ ಉಪಸ್ಥಿತರಿದ್ದರು.

ದಲಿತ ದೌರ್ಜನ್ಯ ತಡೆ ಕಾನೂನಿನ ಮಾಹಿತಿಗೆ ನಿರ್ದೇಶನ
ಹೈದರಾಬಾದ್ ಕಾಲೇಜಿನ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಪ್ರಕರಣದಂತೆ ದ.ಕ. ಜಿಲ್ಲೆಯಲ್ಲೂ ಜಾತಿ ತಾರತಮ್ಯದ ವ್ಯವಸ್ಥೆ ಇದೆ.

ಈ ಬಗ್ಗೆ ದೂರು ನೀಡಿದರೆ ಇನ್ನಷ್ಟು ಕಿರುಕುಳ ಹೆಚ್ಚಾಗಬಹುದು ಎಂಬ ಕಾರಣಕ್ಕೆ ದೂರು ನೀಡಲು ಹಿಂಜರಿಯುವವರೇ ಹೆಚ್ಚು. ಆದ್ದರಿಂದ ದಲಿತ ದೌರ್ಜನ್ಯ ತಡೆ ಕಾನೂನಿನ ಜ್ಞಾನವನ್ನು ದಲಿತರಿಗೆ ಹಾಗೂ ದಲಿತೇರರಿಗೆ ನೀಡುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲೂ ಪೊಲೀಸರು ಶಾಲಾ ಕಾಲೇಜುಗಳಲ್ಲಿ ಮಾಹಿತಿ ಕಾರ್ಯಾಗಾರಗಳನ್ನು ಏರ್ಪಡಿಸಬೇಕು ಎಂದು ಯುವ ದಲಿತ ನಾಯಕ ರಘುವೀರ್ ಆಗ್ರಹಿಸಿದರು.


ಇದಕ್ಕೆ ಸ್ಪಂದಿಸಿದ ಹೆಚ್ಚುವರಿ ಎಸ್ಪಿ, ಪೊಲೀಸ್ ಠಾಣೆಗಳ ವತಿಯಿಂದ ಮುಂದಿನ ಒಂದು ತಿಂಗಳೊಳಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಠಾಣಾಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News