ಜಮ್ಮು-ಕಾಶ್ಮೀರ ಸರಕಾರ ರಚನೆ ಬಿಕ್ಕಟ್ಟು , ಪಿಡಿಪಿ ಅಧ್ಯಕ್ಷೆ ಮೆಹಬೂಬರಿಂದ ಬಿಜೆಪಿ ನಂಟು ಕಡಿದುಕೊಳ್ಳುವ ಸುಳಿವು
ಜಮ್ಮು,ಫೆ.5: ಜಮ್ಮು-ಕಾಶ್ಮೀರದಲ್ಲಿ ಸರಕಾರ ರಚನೆಯ ಕುರಿತು ಸುದೀರ್ಘ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರು, ಕೇಂದ್ರವು ರಾಜ್ಯಕ್ಕಾಗಿ ಸರಣಿ ‘‘ವಿಶ್ವಾಸ ನಿರ್ಮಾಣ ಕ್ರಮಗಳನ್ನು’’ ಪ್ರಕಟಿಸದಿದ್ದರೆ ತಾನು ಮಿತ್ರಪಕ್ಷ ಬಿಜೆಪಿಯ ನಂಟು ಕಡಿದುಕೊಳ್ಳುವ ಸುಳಿವನ್ನು ನೀಡಿದ್ದಾರೆ.
ಶುಕ್ರವಾರ ಜಮ್ಮುವಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮೆಹಬೂಬ, ನೂತನ ಸರಕಾರದ ರಚನೆಗೆ ಮುನ್ನ ಪೂರಕ ವಾತಾವರಣ ಸೃಷ್ಟಿಯು ನೂತನ ಕ್ರಮಗಳ ಉದ್ದೇಶವಾಗಿದ್ದು,ತನ್ನ ಬೇಡಿಕೆಯನ್ನು ‘‘ಬ್ಲಾಕ್‌ಮೇಲ್’’ತಂತ್ರವೆಂದು ಭಾವಿಸಕೂಡದು ಎಂದು ಹೇಳಿದರು.
ಗಾಳಿಯಲ್ಲಿ ಸರಕಾರವನ್ನು ರಚಿಸಲಾಗದು. ನೂತನ ಸರಕಾರ ರಚನೆಯಾಗಲು ಪೂರಕ ವಾತಾವರಣವನ್ನು ಸೃಷ್ಟಿಸುವುದು ಮುಖ್ಯವಾಗಿದೆ.ಜನರಲ್ಲಿ ವಿಶ್ವಾಸವನ್ನು ಮೂಡಿಸುವ ನಿಟ್ಟಿನಲ್ಲಿ ಮುಂದುವರಿಯಲು ಮಾರ್ಗವಿದೆ. ಅದಕ್ಕಾಗಿ ಸರಕಾರದ ಬೆಂಬಲದ ಅಗತ್ಯವಿದೆ. ಅದು ದೊರಕಿದರೆ ಒಳ್ಳೆಯದು,ಇಲ್ಲದಿದ್ದರೆ ಈವರೆಗಿನಂತೆ ನಮ್ಮ ದಾರಿಯಲ್ಲಿ ನಾವು ಮುನ್ನಡೆಯುತ್ತೇವೆ ಎಂದರು.
ಜ.7ರಂದು ಆಗಿನ ಮುಖ್ಯಮಂತ್ರಿ ಮುಫ್ತಿಮೊಹಮ್ಮದ್ ಸಯೀದ್ ಅವರ ನಿಧನಾನಂತರ ಹೆಚ್ಚುತ್ತಿರುವ ರಾಜಕೀಯ ಅನಿಶ್ಚಿತತೆಯ ನಡುವೆಯೇ ರಾಜ್ಯವು ರಾಜ್ಯಪಾಲರ ಆಡಳಿತದಲ್ಲಿದೆ.
ನೂತನ ಕ್ರಮಗಳು ರಾಜಕೀಯ ಸ್ವರೂಪದ್ದಾಗಿರಬೇಕೇ ಹೊರತು ಆರ್ಥಿಕ ಸ್ವರೂಪದ್ದಲ್ಲ ಎಂದು ಮೆಹಬೂಬ ಸುಳಿವು ನೀಡಿದರು.
ಗುರುವಾರವಷ್ಟೇ ರಾಜ್ಯಪಾಲ ಎನ್.ಎನ್.ವೋರಾ ಅವರು ಇಬ್ಬರು ಸಲಹೆಗಾರರನ್ನು ನೇಮಿಸಿದ್ದು, ಈ ಕ್ರಮವು ರಾಜ್ಯಪಾಲರ ಆಡಳಿತಾವಧಿಯ ವಿಸ್ತರಣೆಗೆ ತಾನು ವಿರುದ್ಧವಾಗಿಲ್ಲ ಎನ್ನುವುದನ್ನು ತೋರಿಸಲು ಕೇಂದ್ರದ ಒತ್ತಡ ತಂತ್ರವೆಂದೇ ಪರಿಗಣಿಸಲಾಗಿದೆ.
ಮೆಹಬೂಬ ಸುಳಿವು ನೀಡಿರುವ ವಿಶ್ವಾಸ ನಿರ್ಮಾಣ ಕ್ರಮಗಳು ಮೈತ್ರಿಕೂಟದ ಪಾಲುದಾರ ಪಕ್ಷಗಳ ನಡುವೆ ಪ್ರಮುಖ ವಿವಾದದ ಕಾರಣವಾಗಿರುವ, ಪ್ರತ್ಯೇಕತಾವಾದಿಗಳು ಮತ್ತು ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಗಳನ್ನು ಒಳಗೊಂಡಿರಬಹುದು ಎಂದು ಮೂಲಗಳು ತಿಳಿಸಿವೆ. ಕಳೆದ ಮಾರ್ಚ್‌ನಲ್ಲಿ ಸಮ್ಮಿಶ್ರ ಸರಕಾರ ರಚನೆಗೆ ಮುನ್ನ ಉಭಯ ಪಕ್ಷಗಳು ಒಪ್ಪಿಕೊಂಡಿದ್ದ ಕಾರ್ಯಸೂಚಿಯಲ್ಲಿ ಮಾತುಕತೆ ಪ್ರಕ್ರಿಯೆ ಸೇರಿತ್ತಾದರೂ ಮೋದಿ ಸರಕಾರವು ಇಂತಹ ಪ್ರಕ್ರಿಯೆಗೆ ಈವರೆಗೆ ಚಾಲನೆ ನೀಡಿಲ್ಲ. ಶಾಂತಿಯುತ ಚುನಾವಣಾ ಪ್ರಕ್ರಿಯೆಗಾಗಿ ಸಯೀದ್‌ರಿಂದ ಪಾಕಿಸ್ತಾನದ ಪ್ರಶಂಸೆ ಮತ್ತು ಪ್ರತ್ಯೇಕತಾವಾದಿ ನಾಯಕ ಮಸ್ರತ್ ಆಲಂ ಬಿಡುಗಡೆ ಸೇರಿದಂತೆ ಇಂತಹುದೇ ವಿಷಯಗಳು ಉಭಯ ಪಕ್ಷಗಳ ನಡುವೆ ಪದೇಪದೇ ಕಚ್ಚಾಟಕ್ಕೆ ಕಾರಣವಾಗಿದ್ದವು.